3 ಬಾಲಕಿಯರು ಭೀಮೆಯಲ್ಲಿ ಮುಳುಗಿ ಸಾವು: ₹75ಲಕ್ಷ ಪರಿಹಾರಕ್ಕೆ ಎನ್‌ಜಿಟಿ ಆದೇಶ

7
ಇಂಡಿ ತಾಲ್ಲೂಕಿನ ಗುಬ್ಬೇವಾಡದ ಬಾಲಕಿಯರು ಮೃತಪಟ್ಟಿದ್ದರು

3 ಬಾಲಕಿಯರು ಭೀಮೆಯಲ್ಲಿ ಮುಳುಗಿ ಸಾವು: ₹75ಲಕ್ಷ ಪರಿಹಾರಕ್ಕೆ ಎನ್‌ಜಿಟಿ ಆದೇಶ

Published:
Updated:

ವಿಜಯಪುರ: ಇಂಡಿ ತಾಲ್ಲೂಕಿನ ಗುಬ್ಬೇವಾಡದ ಬಳಿ ಪೂಜೆಗೆಂದು ನೀರು ತರಲು ಭೀಮಾ ನದಿಗೆ ತೆರಳಿದ್ದ ಬಾಲಕಿಯರಲ್ಲಿ ಮೂವರು, ಕಾಲು ಜಾರಿ ಬಿದ್ದು ನದಿಯೊಳಗಿನ ಹೊಂಡದೊಳಗೆ ಮುಳುಗಿ ಮೃತಪಟ್ಟ ಪ್ರಕರಣಕ್ಕೆ (2014ರ ಜುಲೈ 4) ಸಂಬಂಧಿಸಿದಂತೆ, ಈ ಮೂವರ ಕುಟುಂಬಗಳಿಗೂ ತಲಾ ₹ 25 ಲಕ್ಷ ಪರಿಹಾರ ಕೊಡಬೇಕು ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ.

ಮಹಾರಾಷ್ಟ್ರ ಸರ್ಕಾರದಿಂದ ನದಿ ತೀರದಲ್ಲಿ ಮರಳು ಗಣಿಗಾರಿಕೆ ನಡೆಸಲು ಅನುಮತಿ ಪಡೆದಿದ್ದ ಪುಣೆಯ ಕೆ.ಜೆ.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಈ ಮೂರು ಕುಟುಂಬಗಳಿಗೆ ಇದೇ 31ರೊಳಗೆ ಪರಿಹಾರ ಮೊತ್ತ ₹ 75 ಲಕ್ಷ ಪಾವತಿಸಬೇಕು. ನಿಗದಿತ ವೇಳೆಯೊಳಗೆ ಪಾವತಿಸದಿದ್ದರೆ, ಮಹಾರಾಷ್ಟ್ರ ಸರ್ಕಾರವೇ ಬಾಲಕಿಯರ ಕುಟುಂಬಗಳಿಗೆ ಪರಿಹಾರ ನೀಡಿ, ನಂತರ ಕಂಪನಿಯಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದೆ.

‘ಭೀಮಾ ನದಿ ತೀರದ ಮಹಾರಾಷ್ಟ್ರ ವ್ಯಾಪ್ತಿಯೊಳಗೆ ಮರಳು ಅಕ್ರಮ ಗಣಿಗಾರಿಕೆ ನಡೆದಿದ್ದರಿಂದಲೇ ಈ ದುರಂತ ನಡೆದಿತ್ತು. ಬಾಲಕಿಯರ ಸಾವಿಗೆ ಮರಳು ಗಣಿಗಾರಿಕೆಯೇ ಪ್ರಮುಖ ಕಾರಣ’ ಎಂದು ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಎನ್‌ಜಿಟಿ ಮೆಟ್ಟಿಲೇರಿದ್ದರು.

‘ಸೊಲ್ಲಾಪುರ ಜಿಲ್ಲಾಧಿಕಾರಿ ಮರಳು ಗಣಿಗಾರಿಕೆ ನಡೆಸಲು ಗುತ್ತಿಗೆದಾರರಿಗೆ ಅನುಮತಿ ನೀಡಿದ್ದರು. ಗುತ್ತಿಗೆದಾರರು ನಿಯಮಾವಳಿ ಉಲ್ಲಂಘಿಸಿ, ಪಡನೂರ, ಬರಗುಡಿ, ಇನಾಂ ಶಿರಗೂರ, ಗುಬ್ಬೇವಾಡ, ಅಗರಖೇಡ, ಹಿಂಗಣಿ ಭಾಗದಲ್ಲೂ ಮರಳು ತೆಗೆದಿದ್ದರು. ಮರಳು ಅಕ್ರಮ ಸಾಗಣೆಯೂ ಇಲ್ಲಿ ನಡೆದಿತ್ತು. ಇದರಿಂದಲೇ ಅನಾಹುತ ಸಂಭವಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಹಸಿರು ಪೀಠ, ಮರಳು ಅಕ್ರಮ ಗಣಿಗಾರಿಕೆಯಿಂದಲೇ ಈ ದುರಂತ ಸಂಭವಿಸಿದ್ದನ್ನು ಮನಗಂಡು, ಗುತ್ತಿಗೆದಾರ ಕಂಪನಿ ಪರಿಹಾರ ಕೊಡಬೇಕು ಎಂದು ಸೆ. 25ರಂದು ಆದೇಶಿಸಿದೆ. ನಿಗದಿತ ಸಮಯದೊಳಗೆ ಪರಿಹಾರ ಪಾವತಿಯಾಗದಿದ್ದರೇ, ವಾರ್ಷಿಕ ಶೇ 10ರ ಬಡ್ಡಿ ದರದಲ್ಲಿ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂಬುದನ್ನು ತನ್ನ ಆದೇಶದಲ್ಲೇ ಉಲ್ಲೇಖಿಸಿದೆ’ ಎಂದು ಡಾ.ಸಾರ್ವಭೌಮ ಬಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !