ಎನ್‌ಐಎ ದಾಳಿ: ಶಂಕಿತ ವ್ಯಕ್ತಿ ವಶಕ್ಕೆ

7

ಎನ್‌ಐಎ ದಾಳಿ: ಶಂಕಿತ ವ್ಯಕ್ತಿ ವಶಕ್ಕೆ

Published:
Updated:
Deccan Herald

ರಾಮನಗರ: ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಾಂಗ್ಲಾದೇಶ ಪ್ರಜೆ ಮುನಿರಲ್‌ ಶೇಖ್‌ (37) ಎಂಬ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ ನೇತೃತ್ವದ ತಂಡವು ಭಾನುವಾರ ರಾತ್ರಿ ಇಲ್ಲಿನ ಟ್ರೂಪ್‌ಲೈನ್‌ ಪ್ರದೇಶದಲ್ಲಿ ವಶಕ್ಕೆ ಪಡೆದಿದೆ.

ಎನ್‌ಐಎ ಅಧಿಕಾರಿಗಳ ಜೊತೆಗೆ ಕೇಂದ್ರ ಗುಪ್ತಚರ ಇಲಾಖೆ ಹಾಗೂ ದೆಹಲಿ ಪೊಲೀಸರನ್ನು ಒಳಗೊಂಡ ತಂಡವು ಸ್ಥಳೀಯ ಪೊಲೀಸರ ಸಹಯೋಗದಲ್ಲಿ ರಾತ್ರಿ 8.30ರ ಸುಮಾರಿಗೆ ಆರೋಪಿ ವಾಸವಿದ್ದ ಮನೆಯ ಮೇಲೆ ದಾಳಿ ನಡೆಸಿತು. ಸುಮಾರು ನಾಲ್ಕು ಗಂಟೆ ಕಾಲ ಆತನನ್ನು ವಿಚಾರಣೆಗೆ ಒಳಪಡಿಸಿತು. ಮಧ್ಯರಾತ್ರಿ 12.30ಕ್ಕೆ ಅಲ್ಲಿಂದ ಆರೋಪಿಯನ್ನು ಅಲ್ಲಿಂದ ಕರೆದೊಯ್ಯಿತು.

ಮುನಿರಲ್‌ ನಿಷೇಧಿತ ಉಗ್ರ ಸಂಘಟನೆಯೊಂದಕ್ಕೆ ಸೇರಿದ್ದು, ಈ ಹಿಂದೆ ಕೆಲವು ಸ್ಫೋಟಗಳಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. 2014ರಲ್ಲಿ ಕರ್ನಾಟಕಕ್ಕೆ ಬಂದ ಅವರು ಬೆಂಗಳೂರಿನ ಕೆ.ಆರ್‌. ಪುರಂ, ನಂತರದಲ್ಲಿ ಕೋಲಾರ ಹಾಗೂ ಕಳೆದ ಎರಡು ತಿಂಗಳಿಂದ ರಾಮನಗರದಲ್ಲಿ ವಾಸವಿದ್ದರು ಎಂದು ಮೂಲಗಳು ತಿಳಿಸಿವೆ.

ಆರೋಪಿಯು ವಾಸವಿದ್ದ ಮನೆಯನ್ನು ಅಧಿಕಾರಿಗಳು ಪೂರ್ಣವಾಗಿ ಶೋಧಿಸಿದ್ದಾರೆ. ಈ ಸಂದರ್ಭ 4 ಮೊಬೈಲ್, 2 ಟ್ಯಾಬ್‌, ಜಿಲೇಟಿನ್‌ ಪುಡಿ ದೊರೆತಿದೆ. ಟ್ಯಾಬ್‌ ಒಳಗೆ ರಾಜ್ಯದಲ್ಲಿನ ದೇವಸ್ಥಾನ, ಪ್ರವಾಸಿ ತಾಣಗಳ ಚಿತ್ರಗಳು, ಬೆಂಗಳೂರು ನಗರದ ಭೂಪಟ ಚಿತ್ರಗಳೂ ದೊರೆತಿದ್ದು, ರಾಜ್ಯದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸುತ್ತಿರಬಹುದು ಎನ್ನಲಾಗುತ್ತಿದೆ. ಆದರೆ ಸ್ಥಳೀಯ ಪೊಲೀಸರು ಇದ್ಯಾವುದನ್ನೂ ಖಚಿತಪಡಿಸಿಲ್ಲ.

ಪೊಲೀಸರ ದಾಳಿಯ ನಂತರ ಆರೋಪಿಯ ಹೆಂಡತಿ ಮತ್ತು ಇಬ್ಬರು ಮಕ್ಕಳು ಮನೆ ಬಿಟ್ಟು ಬೇರೆಡೆಗೆ ತೆರಳಿದ್ದು, ಸದ್ಯ ಮನೆಗೆ ಬೀಗ ಹಾಕಲಾಗಿದೆ.

ಎರಡೂವರೆ ತಿಂಗಳಿಂದ ವಾಸ: ‘ಮುನೀರ್ ಎರಡೂವರೆ ತಿಂಗಳ ಹಿಂದಷ್ಟೇ ಇಲ್ಲಿ ಮನೆ ಬಾಡಿಗೆ ಪಡೆದಿದ್ದರು. ಆ ಸಂದರ್ಭ ದೆಹಲಿ ವಿಳಾಸವುಳ್ಳ ಆಧಾರ್‌ ಕಾರ್ಡ್ ಅನ್ನು ವಿಳಾಸ ಧೃಢೀಕರಣವಾಗಿ ನಮಗೆ ನೀಡಿದ್ದರು. ಬಾಡಿಗೆ ಮುಂಗಡವಾಗಿ ₨40 ಸಾವಿರ ಕೊಟ್ಟು, ಶೀಘ್ರದಲ್ಲಿಯೇ ಕರಾರು ಪತ್ರ ಮಾಡಿಸಿಕೊಳ್ಳುವುದಾಗಿ ಹೇಳಿದ್ದರು’ ಎಂದು ಮನೆಯ ಮಾಲೀಕರಾದ ಅಮೀರ್‌ ಖಾನ್‌ ಮಾಧ್ಯಮದವರಿಗೆ ತಿಳಿಸಿದರು.

‘ಸೈಕಲ್‌ನಲ್ಲಿ ತೆರಳಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅವರು, ಬೆಳಿಗ್ಗೆ ಹೊರಟು ಸಂಜೆ ವೇಳೆಗೆ ವಾಪಸ್‌ ಆಗುತ್ತಿದ್ದರು. ಆದರೆ ಅವರು ಅನುಮಾಸ್ಪದವಾಗಿ ನಡೆದುಕೊಂಡಿರಲಿಲ್ಲ. ಪೊಲೀಸರು ಯಾಕೆ ಅವರನ್ನು ವಶಕ್ಕೆ ಪಡೆದರು ಎಂಬುದು ತಿಳಿಯಲಿಲ್ಲ’ ಎಂದು ಅವರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ರಮೇಶ್ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !