ನಿಟ್ಟುಸಿರು ಬಿಟ್ಟ ನೊಂದ ಅನ್ನದಾತರು

7
291 ರೈತರ 27 ಪ್ರಕರಣಗಳಿಗೆ ವಿದಾಯ ಕೊನೆಗೂ ದಕ್ಕಿತು; ಕೂಡಗಿ ರೈತರಿಗೆ ಬಿಡುಗಡೆ ಭಾಗ್ಯ

ನಿಟ್ಟುಸಿರು ಬಿಟ್ಟ ನೊಂದ ಅನ್ನದಾತರು

Published:
Updated:
Deccan Herald

ನಿಡಗುಂದಿ: ‘ಎನ್‌ಟಿಪಿಸಿಯ ಕೂಡಗಿ ಉಷ್ಣವಿದ್ಯುತ್‌ ಸ್ಥಾವರ ವಿರೋಧಿ ಹೋರಾಟಗಾರರ ಮೇಲೆ ಹಾಕಲಾಗಿದ್ದ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಅದನ್ನು ಅ 1 ರಂದು ಬಸವನಬಾಗೇವಾಡಿ ನ್ಯಾಯಾಲಯ ಮಾನ್ಯ ಮಾಡಿದೆ. ಇದರಿಂದ 291 ರೈತರಿಗೆ ಹರ್ಷವಾಗಿದೆ’ ಎಂದು ಹೋರಾಟದ ಮುಂಚೂಣಿಯಲ್ಲಿದ್ದ ಮಲ್ಲಿಕಾರ್ಜುನ ಕೆಂಗನಾಳ ತಿಳಿಸಿದರು.

ಹೋರಾಟದ ನಂತರ ಪಟ್ಟ ಕಷ್ಟ, ಯಾತನಾಮಯ ಬದುಕನ್ನು ‘ಪ್ರಜಾವಾಣಿ’ಗೆ ಕೆಂಗನಾಳ ವಿವರಿಸಿದರು.

‘ಎನ್‌ಟಿಪಿಸಿಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಹೋರಾಟ ನಡೆಸಿದ್ದಾಗ ಯಾರೋ ಕಲ್ಲು ತೂರಿದ್ದರಿಂದ 2014ರ ಜುಲೈ 5ರಂದು ಗೋಲಿಬಾರ್ ನಡೆದಿತ್ತು. ಆಗ ಹೋರಾಟಗಾರರು, ಅಮಾಯಕರು ಸೇರಿ ಒಟ್ಟು 291 ರೈತರ ಮೇಲೆ ಸರ್ಕಾರ ವಿವಿಧ ಕಲಂಗಳಡಿ 27 ಪ್ರಕರಣಗಳನ್ನು ದಾಖಲಿಸಿತ್ತು. ಕಳೆದ ನಾಲ್ಕು ವರ್ಷಗಳಿಂದ ಮಾಡದ ತಪ್ಪಿಗಾಗಿ ಕೋರ್ಟ್‌ಗೆ ಅಲೆದಾಡಿ ಸುಸ್ತಾಗಿದ್ದ ನಮ್ಮೆಲ್ಲಾ ರೈತರಿಗೆ ಇದರಿಂದ ನಿರಾಳ ಭಾವನೆ ಮೂಡಿದೆ’ ಎಂದರು.

‘ಮುತ್ತಗಿ ಗ್ರಾಮದಲ್ಲಿ 199 ದಿನಗಳಿಂದ ಸ್ಥಾವರ ವಿರೋಧಿಸಿ ನಡೆಸುತ್ತಾ ಬಂದಿದ್ದ ‘ಅಹೋರಾತ್ರಿ ಧರಣಿ’ ಸ್ಥಳಕ್ಕೆ 2015ರ ಏ.1 ರಂದು ಭೇಟಿ ನೀಡಿದ್ದ ಅಂದಿನ ಇಂಧನ, ಇಂದಿನ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌ ಕೂಡಗಿ ರೈತರ ಮೇಲೆ ದಾಖಲಾದ ಎಲ್ಲ ಪ್ರಕರಣಗಳನ್ನು ಸರ್ಕಾರ ವಾಪಸು ಪಡೆಯುವದಾಗಿ ಭರವಸೆಯನ್ನೂ ನೀಡಿ ಧರಣಿಗೆ ವಿರಾಮ ಹೇಳಿದ್ದರು. ಕೆಲ ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರಕರಣ ಮರಳಿ ಪಡೆಯುವುದಾಗಿ ನೀಡಿದ ಅಭಯಹಸ್ತ ಹುಸಿಯಾಗಿ ರೈತರನ್ನು ಸುಸ್ತಾಗುವಂತೆ ಮಾಡಿತ್ತು’ ಎಂದು ಅವರು ಹೇಳಿದರು.

ಪುಟ್ಟಣಯ್ಯ ಸ್ಮರಣಾರ್ಹರು: ‘ಕಳೆದ ನಾಲ್ಕು ವರ್ಷಗಳಿಂದ ಮೇಲಿಂದ ಮೇಲೆ ಇಲ್ಲಿಯ 20ರಿಂದ 30 ಜನ ರೈತರು ಜೊತೆಗೂಡಿ ಬೆಂಗಳೂರಿಗೆ ಹೋದಾಗ, ನಮ್ಮೆಲ್ಲರನ್ನು ಆಗಿನ ಸಿಎಂ ಸಿದ್ದರಾಮಯ್ಯ, ಗೃಹ, ಇಂಧನ ಸಚಿವರ ಬಳಿ ಪುಟ್ಟಣ್ಣಯ್ಯ ಕರೆದುಕೊಂಡು ಹೋಗಿದ್ದರು. ಪ್ರಕರಣ ಹಿಂಪಡೆಯಲು ಒತ್ತಡ ಹೇರುತ್ತಿದ್ದರು’ ಎಂದು ಅಗಲಿದ ರೈತ ಮುಖಂಡ ಪುಟ್ಟಣ್ಣಯ್ಯ ಅವರನ್ನು ಕೆಂಗನಾಳ ನೆನೆಸಿಕೊಂಡರು.

‘ಜನವರಿಯಲ್ಲಿ ರಾಜ್ಯ ಸರ್ಕಾರ ಮುಗ್ಧ ಜನರ ವಿರುದ್ಧ ದಾಖಲಾದ 3,164 ಪ್ರಕರಣ ವಾಪಸ್ ಪಡೆದಿದ್ದು ಅದರಲ್ಲಿ ಕೂಡಗಿ ರೈತರ ಪ್ರಕರಣ ಸೇರದೆ ಹೋದಾಗ ಸ್ಥಾವರದ ಬೆಂಕಿಯಲ್ಲಿ ನಲುಗಿ ಹೋದಂತ ಅನುಭವ ನಮ್ಮದಾಗಿತ್ತು. ಅ.1ರಂದು ಬಸವನಬಾಗೇವಾಡಿ ನ್ಯಾಯಾಲಯದಲ್ಲಿ ದಾಖಲಾದ 27 ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದರಿಂದ ನಾಲ್ಕು ವರ್ಷಗಳಿಂದ ಸ್ಥಾವರ ವ್ಯಾಪ್ತಿಯಲ್ಲಿ ನಾವು ಕಾಲಿಡದಂತೆ ಜಾಮೀನು ಮಂಜೂರಿ ಮಾಡಲಾಗಿತ್ತು. ಹೀಗಾಗಿ ನಮ್ಮ ವನವಾಸದ ಬದುಕು ಪೂರ್ಣಗೊಂಡಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !