ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಕಾಯ್ದುಕೊಳ್ಳುವುದಷ್ಟೇ ಅಲ್ಲ, ಸಮಸ್ಯೆಗಳಿಗೂ ಸ್ಪಂದಿಸಿ

ಸರ್ವ ಪಕ್ಷಗಳ ಸಭೆಯಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು
Last Updated 30 ಮಾರ್ಚ್ 2020, 17:19 IST
ಅಕ್ಷರ ಗಾತ್ರ

ಸಾಗರ: ‘ಕೊರೊನಾ ಸೋಂಕು ಹರಡದಂತೆ ತಡೆಯಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅದರ ಜೊತೆಗೆ ಈ ಸನ್ನಿವೇಶದಲ್ಲಿ ಉಂಟಾಗಬಹುದಾದ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿ ತಾಲ್ಲೂಕು ಆಡಳಿತದ ಮೇಲೆ ಇದೆ’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.

ಕೊರೊನಾ ಸೋಂಕು ಹರಡದಂತೆ ತಡೆಯುವುದಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಂಗಳವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಅವಧಿ ಆರಂಭವಾದ ದಿನದಿಂದ ಇಲ್ಲಿಯವರೆಗೂ ದಿನಸಿ, ತರಕಾರಿ, ಹಾಲು ಮೊದಲಾದ ಅಗತ್ಯ ವಸ್ತುಗಳಿಗೆ ಕೊರತೆ ಉಂಟಾಗಿಲ್ಲ. ಬರುವ ದಿನಗಳಲ್ಲಿ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ಆಡಳಿತದ ಮೇಲೆ ಇದೆ ಎಂದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಗ್ರಿ ಪಡೆಯಲು ಒಟಿಪಿ ಸಂಖ್ಯೆ ಬರದೇ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಬಂದಿವೆ. ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಒಟಿಪಿ ಸಂಖ್ಯೆಗಾಗಿ ಕಾಯದೇ ಪಡಿತರ ಸಾಮಗ್ರಿ ವಿತರಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ‘ನಗರದ ಹೊರ ವಲಯಗಳಲ್ಲಿ ಸಂಚಾರಕ್ಕೆ ನಿರ್ಬಂಧವಿದ್ದರೂ ಕೆಲವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪೊಲೀಸರು ಇಂತಹ ವಲಯಗಳಲ್ಲಿ ನಿರಂತರವಾಗಿ ಸಂಚರಿಸಿ ಅವರಲ್ಲಿ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಕೊರೊನಾ ಸೋಂಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿವಳಿಕೆ ಹೇಳುವ ಜೊತೆಗೆ ಎಂತಹ ಕಷ್ಟದ ಸ್ಥಿತಿ ಬಂದರೂ ಸರ್ಕಾರ ನಿಮ್ಮ ಜೊತೆ ಇರುತ್ತದೆ ಎಂಬ ಆತ್ಮಸ್ಥೈರ್ಯ ಮೂಡಿಸುವುದು ಅಷ್ಟೇ ಮುಖ್ಯ. ತಾಲ್ಲೂಕು ಕೇಂದ್ರದಿಂದ ಬಹಳಷ್ಟು ದೂರದಲ್ಲಿರುವ ಕೆಲವು ಹಳ್ಳಿಗಳಲ್ಲಿ ಒಂದೊಂದೇ ಮನೆ ಇದೆ. ಇಂತಹ ಹಳ್ಳಿಗಳಿಗೂ ಪಡಿತರ ಸಾಮಗ್ರಿ ತಲುಪಿಸುವ ವ್ಯವಸ್ಥೆಯಾಗಬೇಕು ಎಂದರು.

ಕಾಂಗ್ರೆಸ್ ಮುಖಂಡ ಬಿ.ಆರ್.ಜಯಂತ್, ‘ಜನರು ನಿತ್ಯ ಬಳಸುವ ಆಹಾರ ಸಿಗದೇ ಇದ್ದರೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಹೀಗಾಗಿ ಕುರಿ ಮಾಂಸ, ಹಾಗೂ ಮೀನು ಮಾರಾಟದ ಮೇಲೆ ಹೇರಿರುವ ನಿರ್ಬಂಧವನ್ನು ಸಡಿಲಿಸುವತ್ತ ಆಡಳಿತ ಪರಿಶೀಲಿಸಬೇಕು. ಮಾರಾಟದ ಸಂದರ್ಭದಲ್ಲಿ ಕೆಲವು ಷರತ್ತುಗಳನ್ನು ಪಾಲಿಸುವಂತೆ ನಿರ್ಬಂಧ ಹೇರಬೇಕು’ ಎಂದು ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಶಾಸಕ ಹಾಲಪ್ಪ, ‘ಪಕ್ಕದ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಕೋಳಿ ಮಾಂಸ ಮಾರಾಟ ನಿರ್ಬಂಧಿಸಲಾಗಿದೆ. ಮೀನು ಹಾಗೂ ಕುರಿ ಮಾಂಸ ಮಾರಾಟಕ್ಕೆ ಅವಕಾಶ ನೀಡುವ ಸಂಬಂಧ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ‘ತಾಲ್ಲೂಕಿನ 35 ಗ್ರಾಮ ಪಂಚಾಯಿತಿಯ ಗ್ರಾಮಗಳಿಗೆ ತರಕಾರಿ, ದಿನಸಿ ಪೂರೈಸುವ ವ್ಯವಸ್ಥೆಯಾದರೆ ಹಳ್ಳಿಯ ಜನ ಪೇಟೆಗೆ ಬರುವುದು ನಿಲ್ಲುತ್ತದೆ. ರೈತಾಪಿ ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳದಿದ್ದರೆ ಕೃಷಿ ಉತ್ಪನ್ನಗಳ ಕೊರತೆ ಉಂಟಾಗುವ ಅಪಾಯವಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಟಿ.ಡಿ.ಮೇಘರಾಜ್, ‘ಸಾಗರದ ಹಣಕಾಸು ವಹಿವಾಟು ಅಡಿಕೆ ಮಾರುಕಟ್ಟೆಯ ಮೇಲೆ ನಿಂತಿದೆ. ಅಡಿಕೆಯನ್ನೇ ಆಧಾರವಾಗಿಟ್ಟುಕೊಂಡು ವಹಿವಾಟು ನಡೆಸುತ್ತಿರುವ ಸಹಕಾರ ಸಂಸ್ಥೆಗಳ ಪ್ರಮುಖರಿಗೆ, ಅಡಿಕೆ ಮಂಡಿಯವರಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಿ ವ್ಯವಹರಿಸಲು ಅವಕಾಶ ನೀಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆ.ಎಸ್.ಮೋಹನ್, ‘ಕೊರೊನಾ ಸೋಂಕು ಹರಡುವುದನ್ನು ತಡೆಯಲು ‘ಶೀಘ್ರ ಸ್ಪಂದನ ತಂಡ’ ರಚಿಸಲಾಗಿದೆ. ಈ ತಂಡವು ತಾಲ್ಲೂಕಿನ ಎಲ್ಲೆಡೆ ಸಂಚರಿಸುತ್ತಿದ್ದು, ವಿದೇಶ ಹಾಗೂ ಪರ ಊರುಗಳಿಂದ ಬಂದವರ ಮೇಲೆ ವಿಧಿಸಲಾಗಿರುವ ಗೃಹ ನಿಗಾದ ನಿರ್ಬಂಧವನ್ನು ಪಾಲಿಸಲಾಗುತ್ತಿದೆಯೊ ಇಲ್ಲವೋ ಎಂಬುದನ್ನು ಸತತವಾಗಿ ಪರಿಶೀಲಿಸುತ್ತಿದೆ’ ಎಂದು ತಿಳಿಸಿದರು.

ಡಿವೈಎಸ್‌ಪಿ ವಿನಾಯಕ್ ಎಸ್.ಶೆಟ್ಟಿಗಾರ್, ‘ತಾಲ್ಲೂಕಿನ ನಾಲ್ಕು ದಿಕ್ಕುಗಳಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಹೊರ ಜಿಲ್ಲೆಗಳಿಂದ ಇಲ್ಲಿಗೆ ಬರುವುದನ್ನು ನಿರ್ಬಂಧಿಸಲಾಗಿದೆ. ಬೇರೆ ಊರಿನಿಂದ ಜನರು ಬಾರದಂತೆ ಹಳ್ಳಿಗಳಲ್ಲಿ ನಿರ್ಮಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜೆಡಿಎಸ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ, ನಗರಸಭೆ ಸದಸ್ಯ ಸೈದಸ್ಯ ಜಾಕೀರ್, ಬಿಜೆಪಿಯ ಚೇತನ್ ರಾಜ್ ಕಣ್ಣೂರು, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ನಗರಸಭೆ ಪೌರಾಯುಕ್ತ ಎಸ್.ರಾಜು, ಎಂಜಿನಿಯರ್‌ ಎಚ್.ಕೆ.ನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT