ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಂದ್ರದ ಸಾಧನೆ ಪರಿಗಣಿಸಿ ಮತ ಹಾಕಿ’

ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಮನವಿ
Last Updated 6 ಜೂನ್ 2018, 9:11 IST
ಅಕ್ಷರ ಗಾತ್ರ

ಯಾದಗಿರಿ: ‘ದೇಶದ ಆರ್ಥಿಕ, ಗಡಿ, ಬಾಹ್ಯ ಭದ್ರತೆ ಹೆಚ್ಚಿಸುವಲ್ಲಿ ಮತ್ತು ದೇಶದ ಪ್ರಗತಿಗಾಗಿ ಕೇಂದ್ರ ಬಿಜೆಪಿ ಸರ್ಕಾರ ನಿರಂತರ ಶ್ರಮಿಸುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ರೈತರ ಬೆಳೆಗಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಒದಗಿಸಿದೆ. ಕಡಿಮೆ ದರದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರು ಸಮಗ್ರ ರಕ್ಷಣೆ ಪಡೆಯುತ್ತಿದ್ದಾರೆ. ಕೌಶಲ ಭಾರತ ಯೋಜನೆಯಡಿ ಒಂದು ಕೋಟಿಗೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗಿದೆ’ ಎಂದು ತಿಳಿಸಿದರು.

‘ಜನಧನದಿಂದ ಬಡವರು ಬ್ಯಾಂಕ್ ಖಾತೆ ಮತ್ತು ಜೀವವಿಮೆ ಸುರಕ್ಷೆ ಪಡೆಯುತ್ತಿದ್ದಾರೆ. ಸ್ವಚ್ಛ ಭಾರತ ಅಭಿಯಾನದಿಂದ 7.8 ಕೋಟಿ ಶೌಚಾಲಯಗಳು ನಿರ್ಮಿಸಲಾಗಿದೆ, ಶಿಕ್ಷಣದ ಮೂಲಕ ಸಬಲೀಕರಣ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದಲ್ಲಿ ಹೆಚ್ಚಳ, ಸುಕನ್ಯಾ ಸಮೃದ್ಧಿ ಯೋಜನೆಯಂತಹ ಮಹತ್ತರ ಯೋಜನೆಗಳನ್ನು ಕೇಂದ್ರ ಆಡಳಿತಾವಧಿಯಲ್ಲಿ ಜಾರಿಗಳಿಸಿದೆ’ ಎಂದರು.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ದೌರ್ಜನ್ಯ ಕಾಯ್ದೆಯ ಬಲವರ್ಧನೆ, ಆಯುಷ್ಮಾನ ಭಾರತ ಜಗತ್ತಿನಲ್ಲಿಯೆ ಒಂದು ದೊಡ್ಡ ಆರೋಗ್ಯ ವಿಮೆ ಯೋಜನೆಯಾಗಿದೆ. 3.8 ಕೋಟಿ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಇಂದ್ರಧನುಷ್ ಯೋಜನೆಯಡಿ ಅನೇಕ ಮಕ್ಕಳಿಗೆ ರೋಗನಿರೋಧಕ ಚುಚ್ಚುಮದ್ದು ಒದಗಿಸಲಾಗಿದೆ. ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಔಷಧ ವಿತರಣೆಯಂತಹ ಅನೇಕ ಕಾರ್ಯಕ್ರಮ ಜಾರಿಗೆ ತಂದು  ದೇಶದ ಜನರ ಮನಸನ್ನು ಗೆಲ್ಲುವಂತಹ ಸಾಧನೆ ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ’ಎಂದು ಹೇಳಿದರು.

‘ಯಾದಗಿರಿ ಜಿಲ್ಲೆಗೆ ₹640 ಕೋಟಿ ಅನುದಾನ ನೀಡಿ, ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ವಾಡಿ– ಗದಗ ರೈಲು ಮಾರ್ಗ, ಜಿಲ್ಲೆಯಲ್ಲಿ 53 ಸಾವಿರ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಕೇಂದ್ರದ ಸಾಧನೆ ಪರಿಗಣಿಸಿ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಗೆ ಮತದಾರರು ಆದ್ಯತೆ ನೀಡಿ ಮತ ಹಾಕಬೇಕು’ ಎಂದು ಮನವಿ ಮಾಡಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರ ಮಾಗನೂರ, ಖಂಡಪ್ಪ ದಾಸನ್, ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಾರೆಡ್ಡಿ ಕೂಡ್ಲೂರು, ಶರಣಗೌಡ ಬಾಡಿಯಾಳ, ದೇವಿಂದ್ರನಾದ, ದೇವರಾಜ ನಾಯಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಯಾದಗಿರಿ ಜಿಲ್ಲೆಗೆ ₹ 640 ಕೋಟಿ ಅನುದಾನ ನೀಡಿ, ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ 53 ಸಾವಿರ ಶೌಚಾಲಯ ನಿರ್ಮಾಣ ಮಾಡಲಾಗಿದೆ.
ಅಮರನಾಥ ಪಾಟೀಲ, ವಿಧಾನ ಪರಿಷತ್ತು ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT