ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲಧಿಕಾರಿಯೇ ಚಾಲಕ: ಸಾಲಂಕೃತ ಬಸ್‌ನಲ್ಲಿ ಮನೆಗೆ ಬಂದರು ಅಪ್ಪ

Last Updated 2 ನವೆಂಬರ್ 2019, 7:20 IST
ಅಕ್ಷರ ಗಾತ್ರ

ನಿವೃತ್ತರಾದ ನಿರ್ವಾಹಕರೊಬ್ಬರನ್ನು ಸಾಲಂಕೃತ ಬಸ್‌ನಲ್ಲಿಮನೆಗೆ ಡ್ರಾಪ್ ಮಾಡಿದಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯುಕೆಆರ್‌ಟಿಸಿ) ನಡೆ ಇದೀಗ ಎಲ್ಲರ ಗಮನ ಸೆಳೆದಿದೆ. ಸಂಸ್ಥೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದ್ದ ಹಾವಣ್ಣ ಎಸ್‌.ಗುದ್ದಿ ಅವರಿಗೆಸಾರಿಗೆ ಸಂಸ್ಥೆ ತನ್ನ ಮೇಲೆ ತೋರಿದ ಪ್ರೀತಿ ಖುಷಿ ತಂದಿದೆ. ಈ ಕುರಿತು ಹಾವಣ್ಣ ಅವರಮಗ, ಮನೋಜಕುಮಾರಗುದ್ದಿ ಬರೆದ ಆಪ್ತ ಬರಹ ಇಲ್ಲಿದೆ...

---

ಬಿಎ ಓದುವಾಗಲೇ ಕಂಡಕ್ಟರ್ ಆಗ್ತೀನಿ, ಇಲ್ಲವೇ ಕಲೆಕ್ಟರ್ ಆಗ್ತೀನಿ ಅಂತ ಶಪಥ ಮಾಡಿದ್ದ ನಮ್ಮಪ್ಪ ಅಂದುಕೊಂಡ ಗುರಿ ಸಾಧಿಸಿ ‘ಕೆಂಪು ಡಬ್ಬಿ’ ಹತ್ತಿದರು. ಹಲವಾರು ಏಳು ಬೀಳುಗಳ ಮಧ್ಯೆಯೇ 33 ವರ್ಷಗಳಷ್ಟು ಸುದೀರ್ಘ ಅವಧಿಯವರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ‌ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ, ಇತ್ತೀಚೆಗೆ ಟ್ರಾಫಿಕ್ ಕಂಟ್ರೋಲರ್ ಆಗಿ ಸೇವೆ ಪೂರೈಸಿದರು.

ಮುಂಬಯಿ, ಪುಣೆ, ಕೊಲ್ಹಾಪುರ, ಇಚಲಕರಂಜಿ, ಪಣಜಿ, ವಾಸ್ಕೊ, ಮಾಪುಸಾ, ಹೈದರಾಬಾದ್, ಶ್ರೀಶೈಲ, ಮಂತ್ರಾಲಯಕ್ಕೆ ಡ್ಯೂಟಿಹೋಗುತ್ತಿದ್ದ ಅಪ್ಪನಿಗೆ ತೆಲುಗು, ಮರಾಠಿ, ಕೊಂಕಣಿ, ಹಿಂದಿ, ಉರ್ದು ಸಲೀಸು ಭಾಷೆಗಳು. ಅಪ್ಪನಿಗಿಂತ ಎರಡು ಪದವಿ ಹೆಚ್ಚು ಓದಿರುವೆನೆಂದು ಬೀಗುವ ನನಗೆ ಕನ್ನಡ, ಇಂಗ್ಲಿಷ್, ಹಿಂದಿ ಬಿಟ್ಟರೆ ಬೇರೆ ಭಾಷೆ ಬರದು.

ಸಾರಿಗೆ ಸಂಸ್ಥೆ ಆಲದಮರದಂತೆ ನಮ್ಮ ಕುಟುಂಬವನ್ನು ಪೊರೆದಿದೆ. 33 ವರ್ಷಗಳು ಹೂವಿನ ಹಾದಿಯೇನೂ ಆಗಿರಲಿಲ್ಲ. ಸಣ್ಣಪುಟ್ಟ ತಪ್ಪುಗಳನ್ನು ಹುಡುಕಿ ಬಡ್ತಿ ತಡೆ, ಇನ್‌ಕ್ರಿಮೆಂಟ್‌ಕಟ್‌ನಂಥ ಸವಾಲುಗಳನ್ನು ಎದುರಿಸಿಯೂ ಮೂರು ಜನ ಮಕ್ಕಳಿಗೆ ಉತ್ತಮ ಶಿಕ್ಷಣ ‌ಕೊಡಿಸಿ ಮಕ್ಕಳನ್ನೇ ಅಕ್ಷರಶಃ ಆಸ್ತಿಯನ್ನಾಗಿ ಮಾಡಿದ ಧೀಮಂತ ನಮ್ಮಪ್ಪ.

ಡಿಪೊದಲ್ಲಿ ನಿವೃತ್ತಿ ಅಂಗವಾಗಿ ಒಂದು ಸಣ್ಣ ಬೀಳ್ಕೊಡುಗೆ ಇರುತ್ತದೆ ‌ಎಂದುಕೊಂಡ ನನ್ನ ಎಣಿಕೆಯನ್ನು ಹುಸಿ ಮಾಡುವಂತೆ ಹೂಗಳಿಂದ ಅಲಂಕೃತಗೊಂಡ ಒಂದು ಹೊಸ ಬಸ್ ಬಸವನಬಾಗೇವಾಡಿ ಡಿಪೊದಿಂದ ಮನೆಯವರೆಗೆ ಅಪ್ಪನನ್ನು ಹೊತ್ತುಕೊಂಡು ‌ತರಲು ಅಣಿಯಾಗಿ ನಿಂತಿತ್ತು.

ಆ ಬಸ್ಸಿಗೆ ನನ್ನಪ್ಪನ ಮೇಲಧಿಕಾರಿ, ಸಹಾಯಕ ಸಾರಿಗೆ ನಿಯಂತ್ರಕರಾದ ಎ.ಎಸ್‌.ಪಾಟೀಲರು ಚಾಲಕರಾಗಿದ್ದರು. ಜೀವಮಾನವಿಡೀ ನೆನಪಿನಲ್ಲಿ ಉಳಿಯುವಂಥ ಇಂಥದ್ದೊಂದು ಪ್ಲಾನ್ ರೂಪಿಸಿದವರುಘಟಕ ವ್ಯವಸ್ಥಾಪಕ ವಿನಾಯಕ ಸಾಲಿಮಠ. ಗ್ರ್ಯಾಚ್ಯುಯಿಟಿಯ ಮೊದಲ ‌ಕಂತಿನ ₹ 2 ಲಕ್ಷದ ಚೆಕ್ ಸ್ಥಳದಲ್ಲೇ ಹಸ್ತಾಂತರಿಸಿದರು. ಕಾರ್ಮಿಕರನ್ನು ಇಷ್ಟು ಚಂದ ನಡೆಸಿಕೊಳ್ಳುವ ಅವರ ಸಹೃದಯ ನಡತೆಗೊಂದುನಮಸ್ಕಾರ.

ಬಸ್ಸಿನ ಮುಂಭಾಗದಲ್ಲಿ ಕಟ್ಟಿದ್ದ ಮೈಕ್‌ನಲ್ಲಿಕನ್ನಡತನ ಬಿಂಬಿಸುವ ಗಾನಗಳ ರಸದೌತಣ. ಅಂತೂ ಬಸ್ ನಮ್ಮ ‌ಮನೆ ಬಳಿ ಬಂದೇ ‌ಬಿಟ್ತು. ಸಿಟಿ ಬಸ್ಸೇ ಇರದ ನಮ್ಮೂರಲ್ಲಿ ಮನೆತನಕ ಬಸ್ ಬಂದಿದ್ದು ನೋಡಿ ಓಣಿಯ ಜನರಿಗೆಲ್ಲಾಆಶ್ಚರ್ಯ, ‌ಅಭಿಮಾನ!

ಬಸ್ಸಿನಲ್ಲಿ ‌ಅಪ್ಪನೊಂದಿಗೆ ಬಂದಿದ್ದ ಮಹಿಳಾ ಸಿಬ್ಬಂದಿ ಹಾಗೂ ಮಗಳು ಅನನ್ಯ ಅಪ್ಪನಿಗೆ ಆರತಿ ಮಾಡಿ ಒಳಗೆ ಕರೆತಂದರು.ಸೇವೆಯಲ್ಲಿದ್ದಾಗಲೂ ಕೃಷಿಯ ಬಗ್ಗೆ ಭಾರಿ ಆಸಕ್ತಿ ಹೊಂದಿರುವ ಅಪ್ಪ ನಾಳೆಯಿಂದಲೇ ಹೊಲದಲ್ಲಿ ಪೂರ್ಣ ಪ್ರಮಾಣದ ‌ರೈತನಾಗುವ ಹಂಬಲದಲ್ಲಿದ್ದಾರೆ‌.

ನಿಮ್ಮ ಹಾರೈಕೆಗಳು ಅವರ ಮೇಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT