ಅಭ್ಯರ್ಥಿ ಆಯ್ಕೆ ಕಸರತ್ತಿಗೆ ಅಧಿಕೃತ ಚಾಲನೆ ಇಂದು..!

7
ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ ಕ್ಷೇತ್ರ; ಬೆಂಗಳೂರಿನಲ್ಲಿಂದು ರಾಷ್ಟ್ರೀಯ ಪಕ್ಷಗಳ ಸಭೆ

ಅಭ್ಯರ್ಥಿ ಆಯ್ಕೆ ಕಸರತ್ತಿಗೆ ಅಧಿಕೃತ ಚಾಲನೆ ಇಂದು..!

Published:
Updated:

ವಿಜಯಪುರ: ಸ್ಥಳೀಯ ಸಂಸ್ಥೆಗಳಿಂದ ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ನ ಒಂದು ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ರಾಷ್ಟ್ರೀಯ ಪಕ್ಷಗಳೆರೆಡೂ ಗುರುವಾರ ಬೆಂಗಳೂರಿನಲ್ಲಿ ಸಭೆ ನಡೆಸಲಿವೆ.

ಕಾಂಗ್ರೆಸ್‌, ಬಿಜೆಪಿ ಎಂಎಲ್‌ಸಿ ಚುನಾವಣೆಗೆ ಸಂಬಂಧಿಸಿದಂತೆ ನಡೆಸುತ್ತಿರುವ ಮೊದಲ ಅಧಿಕೃತ ಸಭೆಯಿದು. ಈ ಸಭೆಯಲ್ಲೇ ಅಭ್ಯರ್ಥಿಯ ಆಯ್ಕೆ ನಡೆಯುವುದು ಕಷ್ಟ ಸಾಧ್ಯ. ಯಾರ್‌್ಯಾರು ಆಕಾಂಕ್ಷಿಗಳಿದ್ದಾರೆ ಎಂಬುದರ ಕುರಿತ ಚರ್ಚೆ ನಡೆಯಲಿದೆಯಷ್ಟೇ.

ಅಭ್ಯರ್ಥಿ ಘೋಷಣೆ ಯಥಾ ಪ್ರಕಾರ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಸೋಮವಾರ (ಆ 20) ಪ್ರಕಟಗೊಳ್ಳುವುದು ಬಹುತೇಕ ಖಚಿತ. ಬಿಜೆಪಿಯವರು ಯಾರನ್ನು ಕಣಕ್ಕಿಳಿಸಲು ಚಿಂತಿಸಿದ್ದಾರೆ. ಸಂಭವನೀಯ ಅಭ್ಯರ್ಥಿ ಯಾರಾಗಲಿದ್ದಾರೆ ? ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ಸಿಗರು ತಲ್ಲೀನರಾಗಿದ್ದರೆ; ಬಿಜೆಪಿಯವರು ಇದೇ ಲೆಕ್ಕಾಚಾರದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವಳಿ ಜಿಲ್ಲೆಯಲ್ಲಿನ ಅಪವಿತ್ರ ಮೈತ್ರಿಯ ಘಟಬಂಧನಕ್ಕೆ ಒಳಪೆಟ್ಟು ನೀಡಬೇಕು. ಗೆಲುವಿನ ಸಾಧ್ಯತೆಯಿರುವ, ಚುನಾವಣೆಯನ್ನು ಸರಳವಾಗಿ ನಿಭಾಯಿಸುವ ಶಕ್ತಿಯಿರುವ ವ್ಯಕ್ತಿಯನ್ನೇ ಅಖಾಡಕ್ಕಿಳಿಸಬೇಕು ಎಂಬ ಚಿಂತನೆ ಕಮಲ ಪಾಳೆಯದ್ದು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ, ಬಾದಾಮಿ ಶಾಸಕ ಸಿದ್ದರಾಮಯ್ಯ ಈಗಲೇ ಅಭ್ಯರ್ಥಿ ಘೋಷಣೆ ಮಾಡುವುದು ಬೇಡ. ಪೂರ್ವಭಾವಿ ಸಭೆಗಳು ನಡೆಯಲಿ. ಅಂತಿಮ ದಿನವೇ ಗೆಲ್ಲುವ ಅಭ್ಯರ್ಥಿ ಅಖಾಡಕ್ಕಿಳಿಸೋಣ ಎಂದು ತಮ್ಮ ಆಪ್ತ ವಲಯದಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಅವಳಿ ಜಿಲ್ಲೆಯ ಎರಡೂ ಪಕ್ಷಗಳ ಜಿಲ್ಲಾ ಘಟಕ, ಸ್ಥಳೀಯ ಪ್ರಭಾವಿ ಮುಖಂಡರಲ್ಲಿ ಹೊಂದಾಣಿಕೆಯಿಲ್ಲ. ಮನೆಯೊಂದು ಮೂರು ಬಾಗಿಲು ಎನ್ನುವಂತಹ ಸ್ಥಿತಿ. ಪಕ್ಷದೊಳಗಿನ ಒಗ್ಗಟ್ಟಿಗಿಂತ ಎದುರಾಳಿಗಳ ಜತೆಗೆ ಕೈಜೋಡಿಸುವವರೇ ಹೆಚ್ಚು. ಇದು ಎರಡೂ ಪಕ್ಷದ ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ರಾಜಕಾರಣದ ತೇರನ್ನು ಸಿದ್ದರಾಮಯ್ಯ ಸುಸೂತ್ರವಾಗಿ ಎಳೆಯಲಿದ್ದಾರೆ. ಆದರೂ ಸ್ಥಳೀಯ ಬಣ ರಾಜಕಾರಣಕ್ಕೆ ಇತಿಶ್ರೀ ಹಾಕಲು ಸಾಧ್ಯವಿಲ್ಲ. ಇನ್ನೂ ವಿಜಯಪುರದ ಚಿತ್ರಣವೇ ವಿಭಿನ್ನ. ಮೂವರು ಶಾಸಕರಿದ್ದರೂ; ಬಣ ರಾಜಕಾರಣ, ಶೀತಲ ಸಮರಕ್ಕೆ ಕೊನೆಯಿಲ್ಲದಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !