ಮಂಗಳವಾರ, ನವೆಂಬರ್ 19, 2019
27 °C
ಆಳು–ಸಾಗಾಣಿಕೆ ವೆಚ್ಚವೇ ಅಧಿಕ

ಮಳೆಯಿಂದ ಕಪ್ಪು ಬಣ್ಣ; ದರ ಕುಸಿತ–ರೈತನಿಗೆ ಕಣ್ಣೀರು ತರಿಸಿದ ಈರುಳ್ಳಿ

Published:
Updated:
Prajavani

ವಿಜಯಪುರ: ಮಾರುಕಟ್ಟೆಯಲ್ಲಿ ದರ ಏರಿಳಿತದಿಂದ ಗ್ರಾಹಕರ ಜೇಬಿಗೆ ಭಾರವಾಗಿದ್ದ ಈರುಳ್ಳಿ, ಎಡೆಬಿಡದೆ ಸುರಿದ ಮಳೆಯಿಂದಾಗಿ ರೈತರ ಪಾಲಿಗೆ ಕಣ್ಣೀರು ತರಿಸಿದೆ.

ಜಿಲ್ಲೆಯಲ್ಲಿ ಸೆಪ್ಟೆಂಬರ್ ಕೊನೆ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದೆ. ಅಲ್ಲದೆ, ಕಪ್ಪು ಬಣ್ಣಕ್ಕೆ ತಿರುಗಿದೆ. ಕೆಲವೆಡೆ ಒಣಗಲು ಹಾಕಿದಲ್ಲೇ ಮೊಳಕೆ ಒಡೆದಿವೆ. ಕೈತುಂಬ ಆದಾಯದ ನಿರೀಕ್ಷೆಯಲ್ಲಿದ್ದ ರೈತರ ಪಾಲಿಗೆ ಈರುಳ್ಳಿ ನಷ್ಟ ಉಂಟು ಮಾಡಿದೆ.

ಎರಡು–ಮೂರು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದ ಕೆಲ ರೈತರು ಈರುಳ್ಳಿಯನ್ನು ಕೀಳುವ ಗೋಜಿಗೆ ಹೋಗಿಲ್ಲ. ಆಳು–ಸಾಗಾಣಿಕೆ ವೆಚ್ಚವೇ ಅಧಿಕವಾಗಿ, ಬರುವ ಲಾಭ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಹೊಲದಲ್ಲೇ ಬಿಟ್ಟಿದ್ದಾರೆ. ಇನ್ನು ಕೆಲವರು ಗಳೆ ಹೊಡೆದು, ಅದನ್ನೇ ಗೊಬ್ಬರವಾಗಿ ಮಾರ್ಪಡಿಸಿದ್ದಾರೆ.

‘ನೀವು ನಿನ್ನೆ ಬರಬೇಕಾಗಿತ್ತು. ಮಾಲ್ (ಉತ್ಪನ್ನ) ನೋಡಬಹುದಾಗಿತ್ತು. ಮಳೆಯಿಂದ ಪೂರ್ತಿ ಹಾಳಾಗಿದೆ. ಕ್ವಿಂಟಲ್‌ಗೆ ₹100 ರಂತೆ ಮಾರಾಟ ಮಾಡಿದೆ. ರೈತರ ಹಣೆಬರಹ ಏನೂ ಕೇಳಂಗಿಲ್ಲರೀ’ ಎಂದು ನಾಗಠಾಣದ ರೈತ ಮಲ್ಲಪ್ಪ ಮಸಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಷ ಸಂಪೂರ್ಣ ನಷ್ಟವಾಗಿದೆ. ಈರುಳ್ಳಿ ಕೀಳಲು, ಒಣಗಿಸಲು ಮತ್ತು ಸಾಗಾಟಕ್ಕೆ ಮಾಡಿದ ಖರ್ಚೂ ಬಂದಿಲ್ಲ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು’ ಎಂದು ತಿಡಗುಂದಿಯ ರೈತ ಶರಣಪ್ಪ ಪೂಜಾರಿ ಅಳಲು ತೋಡಿಕೊಂಡರು.

‘ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ಈರುಳ್ಳಿಗೆ ಕ್ವಿಂಟಲ್‌ಗೆ ₹2,500 ರಿಂದ ₹2,800 ಹಾಗೂ ಸಾಧಾರಣ ಈರುಳ್ಳಿಗೆ ₹1,500 ರಿಂದ ₹1,800 ದರ ಇದೆ’ ಎಂದು ದೋಂಡಿರಾಮ ಗಾಯಕವಾಡ ಹೇಳಿದರು.

‘ಆರಂಭದಲ್ಲಿ ದರ ಚೆನ್ನಾಗಿತ್ತು. ಆದರೆ, ಮಳೆಯಿಂದಾಗಿ ಬೆಳೆ ಹಾಳಾಗಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ತಿಳಿಸಿದರು.

‘ತಿಂಗಳ ಹಿಂದೆ ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ಈರುಳ್ಳಿ ಆವಕವಾದ ಪರಿಣಾಮ ದರ ಕುಸಿತವಾಗಿದೆ. ಸದ್ಯ ಸ್ಥಳೀಯವಾಗಿ ಬೆಳೆದಿರುವ ಈರುಳ್ಳಿ ಸಾಕಷ್ಟು ಪ್ರಮಾಣದಲ್ಲಿ ಆವಕವಾಗುತ್ತಿದೆ. ಆದರೆ, ಧಾರಣೆ ಇಲ್ಲ. ಅಲ್ಲದೆ, ಬಹಳಷ್ಟು ಈರುಳ್ಳಿ ಹಾಳಾಗಿದೆ’ ಎಂದು ಎಪಿಎಂಸಿ ಮೂಲಗಳು ಹೇಳುತ್ತವೆ.

‘ಕೆಲವು ಹೋಟೆಲ್‌ ಮತ್ತು ಖಾನಾವಳಿಯವರು ಕಪ್ಪು ಬಣ್ಣಕ್ಕೆ ತಿರುಗಿದ ಈರುಳ್ಳಿಯನ್ನು ₹2 ರಿಂದ ₹3 ಕೆ.ಜಿಯಂತೆ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ, ಉತ್ತಮ ಈರುಳ್ಳಿಗೂ ಬೆಲೆ ಸಿಗದಂತಾಗಿದೆ’ ಎಂದು ವರ್ತಕರೊಬ್ಬರು ಹೇಳಿದರು.

ಪ್ರತಿಕ್ರಿಯಿಸಿ (+)