ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಕರೆಗೆ ₹40 ಲಕ್ಷ, ಕಾಯಂ ನೌಕರಿ ಕೊಡಿ’

ಸೇಡಂ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ರೈತರ, ಕಂಪನಿ ಅಧಿಕಾರಿಗಳ ಸಭೆ
Last Updated 28 ಫೆಬ್ರುವರಿ 2020, 9:59 IST
ಅಕ್ಷರ ಗಾತ್ರ

ಚಿತ್ತಾಪುರ: ಓರಿಯೆಂಟ್ ಸಿಮೆಂಟ್ ಕಂಪನಿ ಸ್ಥಾಪನೆಗೆ ಭೂಮಿ ನೀಡಿರುವ ರೈತರ ಪ್ರತಿ ಎಕರೆಗೆ ₹40 ಲಕ್ಷ ನೀಡಬೇಕು. ಭೂಮಿ ನೀಡಿದ ಎಲ್ಲಾ ರೈತ ಕುಟುಂಬಗಳಿಗೆ ಕಾಯಂ ನೌಕರಿ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಗುರುವಾರ ಇಲ್ಲಿ ಆಗ್ರಹಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ಸೇಡಂ ಉಪ ವಿಭಾಗಾಧಿಕಾರಿ ರಮೇಶ ಕೋಲಾರ ಅಧ್ಯಕ್ಷತೆಯಲ್ಲಿ ನಡೆಸಿದ ಇಟಗಾ ಗ್ರಾಮದ ರೈತರು, ರೈತ ಮುಖಂಡರು, ಓರಿಯೆಂಟ್ ಸಿಮೆಂಟ್ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಇಲ್ಲಿವರೆಗೂ ಕಂಪನಿಯವರು ರೈತರೊಂದಿಗೆ ಯಾವುದೇ ರೀತಿಯ ಲಿಖಿತ ಒಪ್ಪಂದ ಮಾಡಿಕೊಳ್ಳದೆ ಮಾತುಗಳ ಮೂಲಕ ಭರವಸೆ ನೀಡಿ ಅನ್ಯಾಯ ಮಾಡುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದಲ್ಲೇ ರೈತರ ಕುಟುಂಬಗಳಿಗೆ ನೌಕರಿ ನೀಡಿದ್ದಾರೆ. ವೇತನ ಮಂಡಳಿಯ ವೇತನ ನೀಡಬೇಕು. ಇನ್ನೂ 200ಕ್ಕೂ ಅಧಿಕ ರೈತ ಕುಟುಂಬಗಳಿಗೆ ನೌಕರಿ ನೀಡಿಲ್ಲ. ಎಲ್ಲರಿಗೂ ಕೂಡಲೇ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.

ಭೂಮಿ ನೀಡಿದ ರೈತರ ಮನೆಯಲ್ಲಿ ಅನಕ್ಷರಸ್ಥರು, ಕೌಶಲ ರಹಿತರು ಇದ್ದರೆ ಅವರು ಒಪ್ಪಿಗೆ ನೀಡುವ ಸಂಬಂಧಿಕರಿಗೆ ಯಾವುದೇ ತಕರಾರು ಇಲ್ಲದೆ ಕಾನೂನು ಪ್ರಕಾರ ಕಾಯಂ ನೌಕರಿ ಒದಗಿಸಬೇಕು. ಈ ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಂತೆ ಕಂಪನಿ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ನೌಕರಿಯಿಂದ ವಜಾ ಮಾಡಿರುವ 13 ಜನ ಕಾರ್ಮಿಕರನ್ನು ಮತ್ತೆ ನೌಕರಿಗೆ ತೆದುಕೊಳ್ಳಬೇಕು. ಗ್ರಾಮದ ಪಕ್ಕದಲ್ಲೆ ಇರುವ ಕಂಪನಿಯ ಗಣಿ ಕ್ವಾರಿಯಿಂದ ತೀವ್ರ ಸಮಸ್ಯೆ, ತೊಂದರೆ ಆಗುತ್ತಿದೆ. ಗಣಿ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮೀಕ್ಷೆ ನಡೆಸಬೇಕು. ನೈಸರ್ಗಿಕ ನೀರಿನ ಬುಗ್ಗಿ ಕಬಳಿಸಿರುವ ಕಂಪನಿಯಿಂದ ಗ್ರಾಮದಲ್ಲಿನ ಬಾವಿ, ಕೊಳವೆ ಬಾವಿ ಬತ್ತಿವೆ. ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಗ್ರಾಮದ ಜಾನುವಾರುಗಳಿಗೆ ಹುಲ್ಲುಗಾವಲು ಇಲ್ಲವಾಗಿದೆ. ಜನರ ಬದುಕನ್ನು ಕಂಪನಿ ಕಸಿದುಕೊಂಡು ಜನರಿಗಾಗಿ ಏನೂ ವ್ಯವಸ್ಥೆ ಮಾಡಿಲ್ಲ. ಪ್ರಾದೇಶಿಕ ಕಾರ್ಮಿಕ ಆಯುಕ್ತರ ಕಚೇರಿ ಬಳ್ಳಾರಿಯಲ್ಲಿದೆ. ಕಾರ್ಮಿಕರ ಸಮಸ್ಯೆಗಳಿಗೆ ಅಲ್ಲಿಗೆ ಹೊಗಿ ಬರಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರ ಸಭೆಯನ್ನು ಕಲಬುರ್ಗಿಯಲ್ಲೇ ನಡೆಸಬೇಕು ಎಂದು ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಸಿಪಿಐ ಪಂಚಾಕ್ಷರಿ ಸಾಲಿಮಠ, ಓರಿಯೆಂಟ್ ಸಿಮೆಂಟ್ ಕಂಪೆನಿ ಅಧಿಕಾರಿಗಳಾದ ಸಾಜೀ ಕುಮಾರ, ನಿಂಗಣ್ಣಗೌಡ, ಸಿಐಟಿಯು ಜಿಲ್ಲಾ ಸಂಚಾಲಕ ಅಯ್ಯಪ್ಪ ಯನಗುಂಟಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಅಶೋಕ ಮ್ಯಾಗೇರಿ, ರೈತರಾದ ಸಿದ್ದಣಗೌಡ ಮಾಲಿಪಾಟೀಲ, ಶಿವರಾಯ ಡಿಗ್ಗಿ, ತಮ್ಮಣ್ಣ ಡಿಗ್ಗಿ, ಮಹ್ಮದ್ ಸಲೀಂ, ನಾಗೇಂದ್ರ ಡಿಗ್ಗಿ, ಪ್ರಭು, ಸಾಬಣ್ಣ ಮತ್ತು ಗ್ರಾಮದ ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT