ಮತ್ತಿಬ್ಬರಿಗೆ ಮಂಗನ ಕಾಯಿಲೆ ಶಂಕೆ

7
ಅರಲಗೋಡು: ಎರಡು ಮಂಗಗಳ ಸಾವು

ಮತ್ತಿಬ್ಬರಿಗೆ ಮಂಗನ ಕಾಯಿಲೆ ಶಂಕೆ

Published:
Updated:
Prajavani

ಕಾರ್ಗಲ್: ಇಲ್ಲಿಗೆ ಸಮೀಪದ ಅರಲಗೋಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಮತ್ತಿಬ್ಬರಲ್ಲಿ ಶಂಕಿತ ಮಂಗನ ಕಾಯಿಲೆ ಜ್ವರ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

‘ರೋಗಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಜ್ವರ ನಿಯಂತ್ರಣದಲ್ಲಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದುವರೆಗೆ 52 ಜನರಲ್ಲಿ ಮಂಗನಕಾಯಿಲೆ ರೋಗ ಪತ್ತೆಯಾಗಿದೆ. ಎಲ್ಲರೂ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ 19 ಮಂದಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 33 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ’ ಎಂದು ಮಂಗನಕಾಯಿಲೆ ಸಹಾಯವಾಣಿ ಮುಖ್ಯಸ್ಥೆ ವಾಣಿಶ್ರೀ ಮಾಹಿತಿ ನೀಡಿದ್ದಾರೆ.

ಅರಲಗೋಡು ಗ್ರಾಮದ ಮಹಬಲಗಿರಿ ಹೆಗಡೆಯವರ ತೋಟ ದಲ್ಲಿ ಶನಿವಾರ ಎರಡು ಮಂಗಗಳು ಮೃತಪಟ್ಟಿವೆ.

‘ಈಗಾಗಲೇ ತಮ್ಮ ಕೋವಿನಲ್ಲಿಯೇ 13 ಮಂಗಗಳು ಸತ್ತಿವೆ. ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 70ಕ್ಕೂ ಅಧಿಕ ಮಂಗಗಳು ಸತ್ತು ಹೋಗಿವೆ. ಆದರೆ, ವಿವಿಧ ಇಲಾಖೆ ಗಳು ನೀಡುತ್ತಿರುವ ಲೆಕ್ಕಗಳು ಕೇವಲ 29. ಈ ರೀತಿ ವಾಸ್ತವವನ್ನು ಏಕೆ ಮರೆಮಾಚಲಾಗುತ್ತಿದೆ’ ಎಂದು ಮಹ ಬಲಗಿರಿ ಹೆಗಡೆ ಪ್ರಶ್ನೆ ಮಾಡುತ್ತಿದ್ದಾರೆ.

ಅರಣ್ಯ ಇಲಾಖೆಯಿಂದ ಕೂಂಬಿಂಗ್: ಶರಾವತಿ ವನ್ಯಜೀವಿ ಅಭಯಾರಣ್ಯದಲ್ಲಿ ಸಾಯುತ್ತಿರುವ ಮಂಗಗಳನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯ 60 ಸಿಬ್ಬಂದಿ ಕೂಂಬಿಂಗ್ ಆರಂಭಿಸಿದ್ದಾರೆ ‌ಎಂದು ವಲಯ ಅರಣ್ಯಾಧಿಕಾರಿ ವಿನೋದ ಅಂಗಡಿ ತಿಳಿಸಿದ್ದಾರೆ.

ಇಲ್ಲಿಗೆ ಸಮೀಪದ ಶರಾವತಿ ವನ್ಯಜೀವಿ ಅಭಯಾರಣ್ಯದಲ್ಲಿ ಮಂಗನಕಾಯಿಲೆ ನಿಯಂತ್ರಣಕ್ಕಾಗಿ ಕರಪತ್ರಗಳ ವಿತರಣೆ, ಬ್ಯಾನರ್ ಅಳವಡಿಕೆ ಮತ್ತು ಪ್ರಚಾರ ಕಾರ್ಯಗಳ ಮೂಲಕ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯ ಒತ್ತುವರಿ, ಕಾಡುನಾಶ, ಕೃಷಿ ಚಟುವಟಿಕೆಗಳಲ್ಲಿ ಹೇರಳವಾಗಿ ರಾಸಾಯನಿಕಗಳ ಬಳಕೆ ಪ್ರಕೃತಿಯಲ್ಲಿನ ಬದಲಾವಣೆಗಳಿಗೆ ಕಾರಣವಾಗಿವೆ. ಬೆಟ್ಟ ಗುಡ್ಡಗಳಲ್ಲಿರುವ ಹುಲ್ಲುಗಾವಲಿಗೆ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚುತ್ತಿದೆ. ನೈಸರ್ಗಿಕವಾದ ಹುಲ್ಲು ನಾಶವಾಗಿ, ಲಂಡನ್ ಮಟ್ಟಿಗಳು ಬೆಳೆಯುತ್ತಿದೆ. ಪ್ರಸ್ತುತ ಅರಣ್ಯದಲ್ಲಿರುವ ಲಂಡನ್ ಮಟ್ಟಿಗಳಲ್ಲಿಯೇ ಅತಿ ಹೆಚ್ಚು ಉಣಗುಗಳು ಕಂಡು ಬರುತ್ತಿದ್ದು, ಉಣಗು ಸಂತತಿಗಳು ಹೇರಳವಾಗಿ ಬೆಳೆಯಲು ಕಾರಣವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !