ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರಾಟ ವಲಯ: ಸಭೆಯಲ್ಲಿ ಸರ್ವ ಸದಸ್ಯರ ನಿರ್ಣಯ

7
ನಗರ ಪಾಲಿಕೆ ಸಾಮಾನ್ಯ ಸಭೆ

ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರಾಟ ವಲಯ: ಸಭೆಯಲ್ಲಿ ಸರ್ವ ಸದಸ್ಯರ ನಿರ್ಣಯ

Published:
Updated:
Prajavani

ಶಿವಮೊಗ್ಗ: ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರಾಟ ವಲಯ ನಿರ್ಮಿಸಲು ಮಂಗಳವಾರ ನಡೆದ ನಗರ ಪಾಲಿಕೆ ಸಾಮಾನ್ಯಸಭೆ ನಿರ್ಣಯ ಅಂಗೀಕರಿಸಿತು.

ಬೀದಿಬದಿ ವ್ಯಾಪಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಗಾಂಧಿ ಬಜಾರ್ ಸೇರಿದಂತೆ ಹಲವು ಭಾಗಗಳಲ್ಲಿ ಅವರನ್ನು ಎತ್ತಂಗಡಿ ಮಾಡಲಾಗಿದೆ. ಕೆಲವು ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಸ್ಮಾರ್ಟ್‌ಸಿಟಿ ಯೋಜನೆ ದೃಷ್ಟಿಯಿಂದಲೂ ಅವರಿಗೆ ವ್ಯವಸ್ಥಿತ ನೆಲೆ ಕಲ್ಪಿಸಬೇಕಾದ ಅಗತ್ಯವಿದೆ ಎಂದು ಹಲವು ಸದಸ್ಯರು ಗಮನ ಸೆಳೆದರು.

ಪುರದಾಳು– ಅನುಪಿನಕಟ್ಟೆಗೆ ಮೂಲಸೌಕರ್ಯ:

ನಗರದಲ್ಲಿ ಸಂಗ್ರಹಿಸುವ ಕಸದ ರಾಶಿಯನ್ನು ಪುರದಾಳು– ಅನುಪಿನಕಟ್ಟೆ ಬಳಿ ಇರುವ ಘನತ್ಯಾಜ್ಯ ಸಂಗ್ರಹ ಘಟಕಕ್ಕೆ ಸುರಿಯಲಾಗುತ್ತದೆ. ಅಲ್ಲಿಗೆ ಈ ಎರಡೂ ಗ್ರಾಮಗಳನ್ನು ದಾಟಿ ಹೋಗಬೇಕು. ಘನತ್ಯಾಜ್ಯ ಘಟಕ ಸ್ಥಾಪಿಸುವ ಸಮಯದಲ್ಲಿ ಅಲ್ಲಿನ ಗ್ರಾಮಸ್ಥರಿಗೆ ರಸ್ತೆ, ಕುಡಿಯುವ ನೀರು, ಆರೋಗ್ಯ ಮತ್ತಿತರ ಮೂಲ ಸೌಕರ್ಯ ಕಲ್ಪಿಸುವ ಭರವಸೆ ನೀಡಲಾಗಿತ್ತು. ಅದರಂತೆ ಅನುಪಿನಕಟ್ಟೆಗೆ ಹೋಗುವ 2.20 ಕಿ.ಮೀ. ರಸ್ತೆ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಉಳಿದ 3.85 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲು ₨ 1.99 ಕೋಟಿ ಬಿಡುಗಡೆಗೆ ವಿಶೇಷ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಅನುದಾನ ದೊರೆತಿಲ್ಲ. ಈಚೆಗೆ ಪುರದಾಳು ಗ್ರಾಮಸ್ಥರು ಕಸ ಸಾಗಣೆ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ನೀಡಿದ ಭರವಸೆಯಂತೆ ಎಸ್‌ಎಫ್‌ಸಿ ಅನುದಾನ ಅಥವಾ ಪಾಲಿಕೆಯ ಅನುದಾನದಲ್ಲಿ ₨ 2.45 ಕೋಟಿಗೆ ಅನುಮೋದನೆ ನೀಡಬೇಕು ಎಂದು ಪಾಲಿಕೆ ಉಪ ಮೇಯರ್ ಚನ್ನಬಸಪ್ಪ, ಸದಸ್ಯರಾದ ಗನ್ನಿ ಶಂಕರ್ ಮತ್ತಿತರರು ಕೋರಿದರು.

ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಅಧಿಕಾರಿಗಳ ಈ ರೀತಿಯ ವರ್ತನೆ ಸಲ್ಲದು ಎಂದು ಎಲ್ಲ ಸದಸ್ಯರೂ ಪಕ್ಷಭೇದ ಮರೆತು ಹರಿಹಾಯ್ದರು.

ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ಜನಪ್ರತಿನಿಗಳ ಗಮನಕ್ಕೆ ಬರುತ್ತಿಲ್ಲ. ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಯೋಜನೆಗೆ ಕೋಟ್ಯಂತರ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿಗಳು ಎಲ್ಲಿ ನಡೆಯುತ್ತಿವೆ ಎಂಬ ವಿವರಗಳೇ ಇಲ್ಲ. ಜನಪ್ರತಿನಿಧಿಗಳ ಗಮನಕ್ಕೆ ತರುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಎಸ್‌. ರುದ್ರೇಗೌಡ್ರು ದೂರಿದರು.

ಸ್ಮಾರ್ಟ್‌ಸಿಟಿ ಯೋಜನೆಗೆ ರಾಜ್ಯದ ಇತರೆ ನಗರಗಳು ಆಯ್ಕೆಯಾಗಿವೆ. ಆಯಾ ನಗರಗಳ ಸ್ಥಿತಿಗತಿಗೆ ಪೂರಕವಾಗಿ ಅರ್ಕಿಟೆಕ್ಟ್‌ ಸಿದ್ಧವಾಗಿವೆ. ಶಿವಮೊಗ್ಗ ನಗರಕ್ಕೂ ಪೂರಕವಾದ ಅನುಗುಣವಾದಂತಹ ಅರ್ಕಿಟೆಕ್ಟ್‌ ರೂಪಿಸಬೇಕು. ಘನತ್ಯಾಜ್ಯ ವಿಲೇವಾರಿಗೆ ಸಂಬಂಸಿದಂತೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಸಲಹೆ ನೀಡಿದರು.

ಅಮೃತ್ ಯೋಜನೆ ಅಡಿ ಕೋಟ್ಯಂತರ ರೂಪಾಯಿ ಕಾಮಗಾರಿ ನಡೆಯುತ್ತಿವೆ. ಆದರೆ, ಜನಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲ. ಸದಸ್ಯರಿಗೆ ಆಗತ್ಯ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಯನೂರು ಮಂಜುನಾಥ್ ಆಯುಕ್ತರಿಗೆ ಸೂಚಿಸಿದರು

ಆಯಾ ವಾರ್ಡ್‌ಗಳ ಸದಸ್ಯರಿಗೆ ಅಮೃತ್ ಯೋಜನೆ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ಆಗಿರುವ ಲೋಪ ಸರಿಪಡಿಸಿಕೊಳ್ಳಬೇಕು ಎಂದು ಆಯುಕ್ತೆ ಚಾರುಲತಾ ಸೋಮಲ್‌ ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ನಗರದಲ್ಲಿ ಕುಡಿಯುವ ನಿರಿನ ಸಮಸ್ಯೆ ಇದೆ. ಕೆಲವು ಬಡಾವಣೆಗಳಲ್ಲಿ ವಾರದಲ್ಲಿ ಒಂದು ದಿನವೂ ನೀರು ಬರುವುದಿಲ್ಲ. ಅಧಿಕಾರಿಗಳು ಸಬೂಬು ಹೇಳುತ್ತಾರೆ. ಈಗಲೇ ಇಂತಹ ಸ್ಥಿತಿ ಇದ್ದರೆ ಬೇಸಿಗೆ ಪರಿಸ್ಥಿತಿ ಏನು ಎಂದು ಸದಸ್ಯರಾದ ರೇಖಾ ರಂಗನಾಥ್, ಯಮುನಾ ಪ್ರಶ್ನಿಸಿದರು.

ಕಸದ ಸಮಸ್ಯೆ, ಹಂದಿ, ನಾಯಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಸದಸ್ಯ ರಮೇಶ್ ಹೆಗ್ಡೆ ಆಗ್ರಹಿಸಿದರು.

ಕಸ ನಿರ್ವಹಣೆಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆ. ದಿನಕ್ಕೆ 160 ಟನ್‌ ಘನತ್ಯಾಜ್ಯ ಸಾಗಣೆ ಮಾಡಲಾಗುತ್ತಿದೆ. ಕಸ ವಿಲೇವಾರಿಯ ಎಲ್ಲ ವಾಹನಗಳಿಗೂ ಜಿಪಿಎಸ್‌ ಅಳವಡಿಸಬೇಕು. ಅಧಿಕಾರಿಗಳು ಬಿಗಿ ಹಿಡಿತ ಇಟ್ಟುಕೊಳ್ಳಬೇಕು ಎಂದು ಸದಸ್ಯ ಎಚ್‌.ಸಿ. ಯೋಗೀಶ್ ಸಲಹೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !