ಶಿವಮೊಗ್ಗ: ಬಿಜೆಪಿ ಒಗ್ಗಟ್ಟಿಗೆ ಗೆಲುವು,ಕಾಂಗ್ರೆಸ್–ಜೆಡಿಎಸ್‌ಗೆ ಎಚ್ಚರಿಕೆ ಗಂಟೆ!

7
ಪಾಲಿಕೆ ಚುನಾವಣೆ: ಬಿಜೆಪಿ ಸಂಘಟಿತ ಪ್ರಯತ್ನಕ್ಕೆ ಸಂದ ಅಭೂತಪೂರ್ವ ಜಯ

ಶಿವಮೊಗ್ಗ: ಬಿಜೆಪಿ ಒಗ್ಗಟ್ಟಿಗೆ ಗೆಲುವು,ಕಾಂಗ್ರೆಸ್–ಜೆಡಿಎಸ್‌ಗೆ ಎಚ್ಚರಿಕೆ ಗಂಟೆ!

Published:
Updated:

ಶಿವಮೊಗ್ಗ: ಕಾಂಗ್ರೆಸ್– ಜೆಡಿಎಸ್ ಪಕ್ಷಗಳ ಸೋಲಿನ ಪಯಣ ನಗರ ಪಾಲಿಕೆಯಲ್ಲೂ ಮುಂದುವರಿದಿದೆ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರ ನಡುವಿನ ಸಮನ್ವಯದ ಕೊರತೆ, ಪರಸ್ಪರ ಕಾಲೆಳೆಯುವಿಕೆಯ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಎದುರು ಭಾರಿ ಅಂತರದಲ್ಲಿ ಸೋಲು ಕಂಡಿದ್ದರು. ಅಂದು ಪಾಲಿಕೆ ಸದಸ್ಯರಾಗಿದ್ದ ಹಲವರು, ವಿಧಾನಸಭಾ ಚುನಾವಣೆಗೆ ಸಂಬಂಧವೇ ಇಲ್ಲದಂತೆ ನಿರ್ಲಿಪ್ತವಾಗಿದ್ದರು. ಕಾಲ ಈಗ ಅವರಿಗೂ ಪಾಠ ಕಲಿಸಿದೆ.

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ನಡೆದಿದ್ದ ಮೇಯರ್ ಚುನಾವಣೆ ಮತ್ತು ಆ ನಂತರದ ಬೆಳವಣಿಗೆಗಳು ಪಕ್ಷದ ಮುಖಂಡರ ಮಧ್ಯೆ ಕಂದಕ ಹೆಚ್ಚಿಸಿತ್ತು. ಅದು ಚುನಾವಣೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿತ್ತು.

ಪಾಲಿಕೆಯಲ್ಲೂ ಅದೇ ಎಡವಟ್ಟು

ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಭ್ಯರ್ಥಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗೆಲವು ಕಾಣುವುದು ಸಹಜ. ಮತದಾರರು ಅಭಿವೃದ್ಧಿ ಕಾರಣಗಳಿಗಾಗಿ ಆಡಳಿತ ಪಕ್ಷ ಬೆಂಬಲಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದ್ದರೂ ನಿರೀಕ್ಷಿತ ಗೆಲುವು ಎರಡೂ ಪಕ್ಷಗಳಿಗೆ ಸಾಧ್ಯವಾಗಲಿಲ್ಲ.

ಟಿಕೆಟ್‌ ಹಂಚಿಕೆಯಲ್ಲಿ ಕಾಂಗ್ರೆಸ್ ಚಾಣಾಕ್ಷ ನಡೆ ಪ್ರದರ್ಶಿಸಲಿಲ್ಲ. ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪಿ.ವಿ. ವಿಶ್ವನಾಥ್ (ಕಾಶಿ), ಯುವ ಕಾಂಗ್ರೆಸ್ ಮುಖಂಡ ರಂಗನಾಥ್ ಸೇರಿದಂತೆ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಕೈ ತಪ್ಪಿದ್ದು ಆರಂಭದಲ್ಲೇ ಪಕ್ಷದ ಹಿನ್ನಡೆಗೆ ಮುನ್ನುಡಿ ಬರೆದಿತ್ತು. ರಂಗನಾಥ ಪಕ್ಷದ ವಿರುದ್ಧ ಬಂಡಾಯ ಎದ್ದು ಪತ್ನಿ ರೇಖಾ ಅವರನ್ನು ಕಣಕ್ಕೆ ಇಳಿಸಿ, ಗೆಲುವು ಸಾಧಿಸಿರುವುದು ಅದಕ್ಕೆ ಉದಾಹರಣೆ.

ಮೀಸಲಾತಿಯ ಪ್ರಯೋಜನವೂ ಆ ಪಕ್ಷದ ನೆರವಿಗೆ ಬರಲಿಲ್ಲ. ಕಾಂಗ್ರೆಸ್ ಹಿರಿಯ ಮುಖಂಡ ಎಸ್‌.ಕೆ. ಮರಿಯಪ್ಪ, ಮಾಜಿ ಶಾಸಕ ಎಚ್‌.ಎಂ. ಚಂದ್ರಶೇಖರಪ್ಪ ಪುತ್ರ ಎಚ್‌.ಸಿ. ಯೋಗೇಶ್, ದೇಶಿಯ ವಿದ್ಯಾಶಾಲಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜಶೇಖರ್ ಸೇರಿದಂತೆ ಕೆಲವರಿಗೆ ಪ್ರಸ್ತುತ ಅವರೇ ಪ್ರತಿನಿಧಿಸುತ್ತಿದ್ದ ವಾರ್ಡ್‌ಗಳು ದೊರಕಿದ್ದವು. ಯೋಗೇಶ್‌ ಯಶಸ್ಸು ಕಂಡರೂ, ಮೂರು ದಶಕಗಳ ನಂತರ ಮೊದಲ ಬಾರಿ ಮರಿಯಪ್ಪ ಸೋಲು ಕಂಡಿದ್ದಾರೆ. ರಾಜಶೇಖರ್ ವಿಜೇತ ಅಭ್ಯರ್ಥಿಯಷ್ಟೇ ಸಮ ಮತ ಪಡೆದರೂ, ಲಾಟರಿ ಅದೃಷ್ಟ ಅವರ ಕೈ ಹಿಡಿಯಲಿಲ್ಲ.

ಜೆಡಿಎಸ್‌ಗೆ ಹೀನಾಯ ಸೋಲು

ಐದು ವರ್ಷ ಪಾಲಿಕೆಯ ಆಡಳಿತ ಪಕ್ಷದ ಭಾಗವಾಗಿದ್ದ ಜೆಡಿಎಸ್ ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಗಾಂಧಿನಗರದಿಂದ ಸ್ಪರ್ಧಿಸಿದ್ದ ಹಾಲಿ ಮೇಯರ್ ನಾಗರಾಜ ಕಂಕಾರಿ 294 ಮತಗಳ ಅಂತರದಿಂದ, ಹರಿಗೆಯಿಂದ ಸ್ಪರ್ಧಿಸಿದ್ದ ಸತ್ಯನಾರಾಯಣ ರಾಜು ಲಾಟರಿ ಮೂಲಕ ಗೆದ್ದು ಪಕ್ಷದ ಮಾನ ಉಳಿಸಿದ್ದಾರೆ. ವಿಧಾನಸಭಾ ಚುನಾವಣೆಗೂ ಮೊದಲು ಆರಂಭವಾಗಿದ್ದ ಪಕ್ಷದ ಪತನದ ಹಾದಿ ಈ ಚುನಾವಣೆಯಲ್ಲೂ ಮುಂದಿವರಿದಿದೆ. ಸೂಕ್ತ ಅಭ್ಯರ್ಥಿಗಳ ಆಯ್ಕೆಯಲ್ಲಿ ಯೋರದ ಜಾಣ್ಮೆ, ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ, ಪಕ್ಷದ ಮುಖಂಡರ ಮಧ್ಯೆ ಇರುವ ಶೀತಲಸಮರ ಆ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಪ್ರಮುಖ ಕಾರಣಗಳು.

ಬಿಜೆಪಿಯ ಸಂಘಟಿತ ಪ್ರಯತ್ನ

ವಿಧಾನಸಭಾ ಚುನಾವಣೆಯಲ್ಲಿ ತೋರಿದ ಸಂಘಟಿತ ಪ್ರಯತ್ನವನ್ನೇ ಬಿಜೆಪಿ ಈ ಚುನಾವಣೆಯಲ್ಲೂ ತೋರಿತು. ಟಿಕೆಟ್ ಹಂಚಿಕೆಯಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರದೇ ಅಂತಿಮ ನಿರ್ಧಾರವಾಗಿತ್ತು. ಕೆಲವರು ಬಂಡಾಯ ಎದ್ದರೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ್ರು, ಈಶ್ವರಪ್ಪ ಸಮನ್ವಯದಲ್ಲಿ ಭಿನ್ನಮತ ಶಮನ ಮಾಡಲಾಗಿತ್ತು. ಪಕ್ಷದ ಮುಖಂಡರು, ಕಾರ್ಯಕರ್ತರು  ಭಿನ್ನಾಭಿಪ್ರಾಯ ಮರೆತು ಅಭ್ಯರ್ಥಿಗಳ ಯಶಸ್ಸಿಗೆ ಶ್ರಮಿಸಿದ್ದರು. ಪ್ರತಿ ವಾರ್ಡ್‌ನಲ್ಲೂ ತಂಡವಾಗಿ ಮನೆಮನೆ ಸುತ್ತಿ ಮತದಾರರ ತಲುಪಿದ್ದರು.

ಹಿಂದಿನ ಸೋಲು ಕೆಜೆಪಿ–ಬಿಜೆಪಿ ಮತ ವಿಭಜನೆಯ ಪರಿಣಾಮ. ಅದು ನಿಜವಾದ ಸೋಲಲ್ಲ ಎಂಬ ಸಂದೇಶ ಈ ಚುನಾವಣೆ ಮೂಲಕ ಪಕ್ಷ ಮತ್ತೆ ನೀಡಿದೆ. ಆ ಮೂಲಕ ಮುಂಬರುವ ಲೋಕಸಭಾ ಚುನಾವಣೆಯ ತಯಾರಿಗೆ ನಾಂದಿ ಹಾಡಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !