ಪಕ್ಷೇತರರ ಪ್ರಾಬಲ್ಯಕ್ಕೆ ಪಕ್ಷಗಳ ಲಗಾಮು..?

7
ಅಖಾಡಕ್ಕೆ ಧುಮುಕಿದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌; ಮುದ್ದೇಬಿಹಾಳ ಪುರಸಭೆಗೆ ನಾಮಪತ್ರ ಸಲ್ಲಿಕೆಗೆ ಚಾಲನೆ

ಪಕ್ಷೇತರರ ಪ್ರಾಬಲ್ಯಕ್ಕೆ ಪಕ್ಷಗಳ ಲಗಾಮು..?

Published:
Updated:
Deccan Herald

ಮುದ್ದೇಬಿಹಾಳ:  ಇದೇ 29ರಂದು ನಡೆಯಲಿರುವ ಮುದ್ದೇಬಿಹಾಳ ಪುರಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಕೆ ಶುಕ್ರವಾರದಿಂದ ಆರಂಭಗೊಂಡ ಬೆನ್ನಿಗೆ, ಮೂರು ಪ್ರಮುಖ ಪಕ್ಷಗಳಲ್ಲಿನ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ.

ಮೂರು ತಿಂಗಳ ಹಿಂದಷ್ಟೇ ಕ್ಷೇತ್ರದ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದ ಬಿಜೆಪಿಯ ಎ.ಎಸ್‌.ಪಾಟೀಲ ನಡಹಳ್ಳಿ, ಕಾಂಗ್ರೆಸ್‌ನ ಸಿ.ಎಸ್‌.ನಾಡಗೌಡ, ಜೆಡಿಎಸ್‌ನ ಮಂಗಳಾದೇವಿ ಬಿರಾದಾರ ಇದೀಗ ಮತ್ತೊಮ್ಮೆ ಅಖಾಡಕ್ಕೆ ಧುಮುಕಿದ್ದಾರೆ.

ಈ ಹಿಂದಿನ ಎರಡು ಅವಧಿ ಮುದ್ದೇಬಿಹಾಳ ಪುರಸಭೆಯಲ್ಲಿ ಪಕ್ಷೇತರರದ್ದೇ ಪ್ರಾಬಲ್ಯವಿತ್ತು. ಈ ಬಾರಿ ಪಕ್ಷ ಪ್ರಾಬಲ್ಯ ಮೆರೆಯುವ ಜತೆಗೆ, ಅಧಿಕಾರದ ಚುಕ್ಕಾಣಿಯನ್ನು ತಮ್ಮ ಬೆಂಬಲಿಗರಿಗೆ ಕೊಡಿಸಬೇಕು ಎಂಬ ಉಮೇದಿನಿಂದ ಮೂವರು ಮುಖಂಡರು ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದ್ದಾರೆ.

ಮೂವರಿಗೂ ಪ್ರತಿಷ್ಠೆ:

ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರವಿದೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದರಿಂದ ಮೂರು ಪಕ್ಷದ ಮುಂದಾಳುಗಳಿಗೂ ಪುರಸಭೆ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.

ಮೂರು ಪಕ್ಷಗಳಲ್ಲಿ ಸ್ಥಳೀಯ ಮುಖಂಡರದ್ದೇ ಅಂತಿಮ ತೀರ್ಮಾನ. ಕಾಂಗ್ರೆಸ್‌ ಸ್ವತಂತ್ರ ಸ್ಪರ್ಧೆಗೆ ಅಣಿಯಾಗಿದ್ದು, ಮಾಜಿ ಸಚಿವ ಸಿ.ಎಸ್‌.ನಾಡಗೌಡ ಪುರಸಭೆಯಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಪ್ರಭಾವ ಮಸುಕಾಗಿಲ್ಲ ಎಂಬ ಸಂದೇಶ ಸಾರಲು ಸಿದ್ಧತೆ ನಡೆಸಿದ್ದಾರೆ.

ಜೆಡಿಎಸ್‌ ಜತೆ ಹೊಂದಾಣಿಕೆಗೆ ಅಷ್ಟೇನು ಒಲವು ತೋರಿಲ್ಲ. ಗೆಲುವಿನ ತಂತ್ರಗಾರಿಕೆ ರೂಪಿಸಲು ಸ್ವತಃ ಅಖಾಡಕ್ಕಿಳಿದಿದ್ದಾರೆ. ಕಾರ್ಯಕರ್ತರು, ಬೆಂಬಲಿಗರ ಜತೆ ಸರಣಿ ಸಭೆ ನಡೆಸಿದ್ದಾರೆ. ಇದೇ 17ರ ಶುಕ್ರವಾರ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಿದ್ದು, 16ರ ಗುರುವಾರ ರಾತ್ರಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಕೊನೆಯ ದಿನ ನಾಮಪತ್ರ ಸಲ್ಲಿಕೆಗೆ ಯೋಜನೆ ರೂಪಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ತಮ್ಮ ಬೆಂಬಲಿಗರ ಸಭೆ ನಡೆಸಿದ್ದಾರೆ. ಪಕ್ಷದ ಇನ್ನಿತರ ಮುಖಂಡರ ಜತೆಗೂ ಮಾತನಾಡಿದ್ದಾರೆ. ಮುದ್ದೇಬಿಹಾಳ ಮಂಡಲದ ಉಸ್ತುವಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಗಲಿ, ಆರ್‌.ಎಸ್‌.ಪಾಟೀಲ ಕೂಚಬಾಳ ಶಾಸಕರ ಜತೆ ಚರ್ಚಿಸಿ ಇದೇ 15ರೊಳಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಗೊಳಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಜೆಡಿಎಸ್‌ ಸಹ ಭರ್ಜರಿ ತಯಾರಿ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಈಗಾಗಲೇ ಒಂದು ಬಾರಿ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದ್ದಾರೆ. ಸ್ಥಳೀಯ ಮುಖಂಡೆ ಮಂಗಳಾದೇವಿ ಬಿರಾದಾರ ಸಹ ಈಗಾಗಲೇ ಹಲ ಸುತ್ತು ಕಾರ್ಯಕರ್ತರು, ಬೆಂಬಲಿಗರ ಜತೆ ಚುನಾವಣೆ ಕುರಿತಂತೆ ಚರ್ಚಿಸಿದ್ದಾರೆ.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಜತೆ ಸಹ ಈ ಬಗ್ಗೆ ಮಾತನಾಡಿದ್ದು, ಸ್ಥಳೀಯ ಹೊಂದಾಣಿಕೆಗೂ ಸಮ್ಮತಿ ಪಡೆದಿದ್ದಾರೆ ಎನ್ನಲಾಗಿದೆ. ಹೊಂದಾಣಿಕೆ ಅನಿವಾರ್ಯವಾದರೆ, ಕಾಂಗ್ರೆಸ್ಸಿಗರು ಒಲವು ತೋರಿದರೇ ‘ಕೈ’ಗೆ ಸಾತ್‌ ನೀಡಲು ಚಿಂತಿಸಿದ್ದಾರೆ ಎಂಬುದನ್ನು ಜೆಡಿಎಸ್‌ ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !