ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಜಿ.ಪಂ ಸಿಇಒ ವಿಕಾಸ್ ಕಿಶೋರ್ ಸುರಳಕರ್ ಸಲಹೆ

ಅಪೌಷ್ಟಿಕ ಮಕ್ಕಳತ್ತ ಗಮನ ಹರಿಸಿ

Published:
Updated:
Prajavani

ವಿಜಯಪುರ: ಗರ್ಭಿಣಿ ತಾಯಂದಿರ ಮರಣ ಪ್ರಮಾಣ ತಗ್ಗಿಸುವ ಜತೆಗೆ ಗರ್ಭಿಣಿಯರು, ಬಾಣಂತಿಯರು ಹಾಗೂ ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿಗೆ ಗಮನ ಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಕಿಶೋರ್ ಸುರಳಕರ್ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಪೋಷಣ್ ಅಭಿಯಾನ ಮಾಸಾಚರಣೆ-2019’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾತೃವಂದನಾ, ಮಾತೃಶ್ರೀ, ಜನನಿ ಸುರಕ್ಷಾ ಯೋಜನೆ ಸೇರಿ ವಿವಿಧ ಯೋಜನೆಗಳ ಮೂಲಕ ಸರ್ಕಾರ ಸೌಲಭ್ಯ ಕಲ್ಪಿಸುತ್ತಿದ್ದು, ಇವುಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದರು.

‘ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ನಿರಂತರ ಪರಿಶೀಲನಾ ಕಾರ್ಯ ನಡೆಯಬೇಕು. ಮಗುವಿನ ಆರೋಗ್ಯ ವೃದ್ಧಿಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ವಿಶೇಷ ಗಮನ ನೀಡಬೇಕು. ಇಲ್ಲವಾದಲ್ಲಿ ಸೂಕ್ತಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಎಚ್.ಸುರಪುರ ಮಾತನಾಡಿ, ‘ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯವನ್ನು ಬಾಣಂತಿ, ಗರ್ಭಿಣಿಯರಿಗೆ ದೊರಕಿಸಲು ಇಲಾಖೆ ಹೆಚ್ಚು ಕಾರ್ಯ ಪ್ರವೃತ್ತವಾಗಿದ್ದು, ಪ್ರಮುಖವಾಗಿ ಪೋಷಣ್ ಅಭಿಯಾನದಡಿ ಪ್ರಸೂತಿ ಬಾಣಂತಿಯರಿಗೆ ಆಯಾ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಪೋಷಕಾಂಶ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಡಾ.ಎಲ್.ಎಚ್.ಬಿದರಿ ಮಾತನಾಡಿದರು. ಕಾಶಿಬಾಯಿ ಖ್ಯಾಡಗಿ ಉಪನ್ಯಾಸ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ಬಿ.ಕುಂಬಾರ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕೆ.ಕೆ.ಚವ್ಹಾಣ, ರತ್ನಾಕರ ಇದ್ದರು.

Post Comments (+)