ಪಿಡಿಒ ವೇತನ ಬಡ್ತಿ ತಡೆ ಹಿಡಿದ ತಿಪ್ಪೆಗುಂಡಿ!

7

ಪಿಡಿಒ ವೇತನ ಬಡ್ತಿ ತಡೆ ಹಿಡಿದ ತಿಪ್ಪೆಗುಂಡಿ!

Published:
Updated:

ರಾಮನಗರ: ಸಣ್ಣ ತಿಪ್ಪೆಯೊಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರ ಎರಡು ವರ್ಷಗಳ ವೇತನ ಬಡ್ತಿಯನ್ನು ತಡೆ ಹಿಡಿದಿರುವ ಪ್ರಸಂಗ ತಾಲ್ಲೂಕಿನ ಹರೀಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ವಿವಾದಿತ ಸ್ಥಳದಲ್ಲಿ ತಿಪ್ಪೆ ಹಾಕುವ ವಿಚಾರವಾಗಿ ಪಾದರಹಳ್ಳಿ ಗ್ರಾಮದಲ್ಲಿ ಅಕ್ಕಪಕ್ಕದ ಮನೆಗಳ ನಡುವೆ ಉಂಟಾದ ವ್ಯಾಜ್ಯ ಕೊನೆಗೆ ಪಿಡಿಒ ತಲೆಗೆ ಅಂಟುಬಿದ್ದು, ವೇತನ ಬಡ್ತಿಯನ್ನು ತಡೆಹಿಡೆಯುವಂತೆ ಮಾಡಿದೆ.

ಗ್ರಾಮದ ನಿವಾಸಿ ರಮೇಶ್ ಎಂಬುವವರು ನೀಡಿದ ದೂರಿನಲ್ಲಿ ಹಿನ್ನೆಲೆಯಲ್ಲಿ ಪಿಡಿಒ ವಿರುದ್ಧ ಸರ್ಕಾರವು ಈಚೆಗೆ ಈ ಆದೇಶ ಹೊರಡಿಸಿದೆ.

ಹರೀಸಂದ್ರ ಪಿಡಿಒ ಆಗಿದ್ದ ವೆಂಕಟೇಶ್ ಎರಡು ವರ್ಷ ವೇತನ ಬಡ್ತಿ ತಡೆಗೆ ಗುರಿಯಾಗಿರುವ ಅಧಿಕಾರಿ. ‘ಪಂಚಾಯಿತಿ ವ್ಯಾಪ್ತಿಯ ಹರೀಸಂದ್ರ ಗ್ರಾಮದಲ್ಲಿ ಖಾನೇಷು ಮಾರಿ ನಂ:804, ಮನೆಯ ಹಿಂಭಾಗದಲ್ಲಿ ಕೆಲವರು ತಿಪ್ಪೆ ಹಾಕಿ, ಕಳ್ಳಿ ಬೇಲಿಯನ್ನು ಬೆಳೆಸಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ರೋಗ ರುಜಿನಗಳು ಹರಡುತ್ತಿವೆ. ಇದನ್ನು ತಡೆಗಟ್ಟಿ ಕ್ರಮ ವಹಿಸಿ’ ಎಂದು ರಮೇಶ್‌ ಸ್ಥಳೀಯ ಪಿಡಿಒಗೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ಎರಡು ಬಾರಿ ಸಂಬಂಧಿಸಿದವರಿಗೆ ನೋಟಿಸ್ ನೀಡಿದ ಪಿಡಿಒ ವೆಂಕಟೇಶ್‌, ದಂಡ ಇಲ್ಲವೇ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೇ ಸುಮ್ಮನಾಗಿದ್ದರು. ಇದರಿಂದ ಬೇಸರಗೊಂಡ ದೂರುದಾರರು ಲೋಕಾಯುಕ್ತರು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದರು. ಉಪ ಲೋಕಾಯುಕ್ತರು ದೂರು ಆಧರಿಸಿ ತನಿಖೆಗೆ ಶಿಫಾರಸು ಮಾಡಿದ್ದರು.

‘ದೂರದಾರರ ಅರ್ಜಿ ಪರಿಶೀಲಿಸಿ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಅಂತಹ ಯಾವುದೇ ಚಟುವಟಿಕೆಗಳು ಕಂಡುಬಂದಿರಲಿಲ್ಲ. ಅಲ್ಲದೆ, ಈ ಸ್ಥಳದ ವಿವಾದವು ನ್ಯಾಯಾಲಯದಲ್ಲಿ ಇರುವ ಕಾರಣ ಯಾವುದೇ ಕ್ರಮ ಕೈಗೊಳ್ಳಲು ಆಗಿಲ್ಲ’ ಎಂದು ಪಿಡಿಒ ತನಿಖಾಧಿಕಾರಿಗಳಿಗೆ ಲಿಖಿತ ವಿವರಣೆ ನೀಡಿದ್ದರು.

ಆದರೆ ಇದನ್ನು ಒಪ್ಪದ ತನಿಖಾಧಿಕಾರಿಗಳು ಪಿಡಿಒ ವಿರುದ್ಧ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಾವಳಿ 1966ರ ನಿಯಮದಡಿ ನಿರ್ದಿಷ್ಟಪಡಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎರಡು ವಾರ್ಷಿಕ ವೇತನ ಹಿಂಪಡೆಯಬಹುದು ಎಂದು ವರದಿ ನೀಡಿದ್ದರು. ವರದಿ ಆಧರಿಸಿ ಉಪ ಲೋಕಾಯುಕ್ತರು ಕ್ರಮಕ್ಕೆ ಶಿಫಾರಸು ಮಾಡಿದ್ದರು.

ಉಪ ಲೋಕಾಯುಕ್ತರ ಶಿಫಾರಸು ಆಧರಿಸಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಎರಡು ವರ್ಷಗಳ ವೇತನ ಬಡ್ತಿಯನ್ನು ತಡೆ ಹಿಡಿದು ಆದೇಶ ಹೊರಡಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !