ತೇರಿನ ಮನೆಯ ಬಾಗಿಲು ಸರಿಪಡಿಸುವಂತೆ ಒತ್ತಾಯ

7

ತೇರಿನ ಮನೆಯ ಬಾಗಿಲು ಸರಿಪಡಿಸುವಂತೆ ಒತ್ತಾಯ

Published:
Updated:
Deccan Herald

ಕನಕಪುರ: ಕಸಬಾ ಹೋಬಳಿ ಕಲ್ಲಹಳ್ಳಿ ಗ್ರಾಮದಲ್ಲಿರುವ ಚಿಕ್ಕತಿರುಪತಿಯ ಶ್ರೀ ವೆಂಕಟರಮಣಸ್ವಾಮಿ ದೇವರ ರಥದ ಮನೆ ಬಾಗಿಲು ಹಾಳಾಗಿ ಎರಡು ವರ್ಷವಾದರೂ ಅದಕ್ಕೆ ಇನ್ನೂ ರಿಪೇರಿ ಭಾಗ್ಯ ಬಂದಿಲ್ಲವೆಂಬುದು ಕಲ್ಲಹಳ್ಳಿ ಗ್ರಾಮದ ಜನತೆಯ
ಆರೋಪವಾಗಿದೆ.

ದೇವಾಲಯದ ಹಳೆಯ ರಥಕ್ಕೆ ಬದಲಾಗಿ ಬೃಹತ್‌ ರಥವನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ಮಾಡಿಸಲಾಗಿದೆ. ಅದರ ಸುರಕ್ಷತೆಗಾಗಿ ದೇವಾಲಯದ ಮುಂಭಾಗದಲ್ಲೇ ರಥದ ಮನೆಯನ್ನು ₹10 ರಿಂದ ₹15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಅದಕ್ಕೆ ಅಳವಡಿಸಿರುವ ಕಬ್ಬಿಣ ರೋಲಿಂಗ್‌ ಶಟರ್‌ ಹಾಳಾಗಿ ಮಳೆಯ ನೀರು, ಬಿಸಿಲು ರಥಕ್ಕೆ ಬೀಳುತ್ತಿದ್ದರೂ ಅದರ ರಿಪೇರಿಗೆ ಸಂಬಂಧಪಟ್ಟವರು ಮುಂದಾಗಿಲ್ಲ ಎಂದು ಜನರು ಆರೋಪಿಸಿದ್ದಾರೆ.

ಬಾಗಿಲು ಸರಿಪಡಿಸುವ ಗೋಜಿಗೂ ಹೋಗಿಲ್ಲ. ದೇವಾಲಯದಿಂದ ವಾರ್ಷಿಕವಾಗಿ ಸುಮಾರು ₹50 ಲಕ್ಷ ಹುಂಡಿಯ ಹಣ ಬರುತ್ತದೆ. ಈ ಹಣದಲ್ಲಿ ಮಾಡಿದರೆ ಸಾಕು ಶೀಘ್ರವೇ ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತೇರಿನ ಮನೆ ಬಾಗಿಲು ತೆರೆದಿರುವುದರಿಂದ ಯಾರಾದರು ಕಿಡಿಗೇಡಿಗಳು ಏನಾದರೂ ಅನಾಹುತ ಮಾಡಿದರೆ ತೇರನ್ನು ರಕ್ಷಣೆ ಮಾಡುವುದಾದರೂ ಹೇಗೆ. ಸುಮಾರು ಒಂದು ಕೋಟಿಯಷ್ಟು ಖರ್ಚುಮಾಡಿ ನಿರ್ಮಿಸಿರುವ ತೇರನ್ನು ಸರಿಯಾದ ರೀತಿಯಲ್ಲಿ ರಕ್ಷಣೆ ಮಾಡಿ ಜೋಪಾನ ಮಾಡುತ್ತಿಲ್ಲ. ಇದನ್ನು ಸಂಪೂರ್ಣ ನಿರ್ಲಕ್ಷ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹೊಸದಾಗಿ ರಥ ನಿರ್ಮಾಣ ಮಾಡಿದ ಮೇಲೆ ಅದರ ಜೋಪಾನಕ್ಕೆ ತೇರಿನ ಮನೆಯನ್ನು ಕಟ್ಟಿಸಿ ಸುಮಾರು ₹4 ಲಕ್ಷ ವೆಚ್ಚದಲ್ಲಿ ಕಬ್ಬಿಣದ ರೋಲಿಂಗ್‌ ಶಟರ್‌ ಮಾಡಿಸಲಾಯಿತು. ಅದನ್ನು ಸರಿಯಾಗಿ ಮಾಡದ ಕಾರಣ ಬಾಗಿಲು ತೆರೆಯಲಾಗದೆ 2 ವರ್ಷಗಳ ಹಿಂದೆ ತುಂಡರಿಸಿ ತೆಗೆಯಲಾಯಿತು. ಅದನ್ನು ಸರಿಪಡಿಸುವಂತೆ ಮುಜರಾಯಿ ಇಲಾಖೆ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕಲ್ಲಹಳ್ಳಿ ದೇವಸ್ಥಾನ ಸಮಿತಿ ಸದಸ್ಯ ಮಲ್ಲರಾಜೇ ಅರಸು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !