ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಶ್ರೀಗಳಿಗೆ ಭಕ್ತರ ಶ್ರದ್ಧಾಂಜಲಿ

ಸ್ವಯಂಪ್ರೇರಿತವಾಗಿ ಅಂಗಡಿ–ಮುಂಗಟ್ಟು ಬಂದ್ ಮಾಡಿ ಗೌರವ ಅರ್ಪಣೆ
Last Updated 22 ಜನವರಿ 2019, 13:26 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಹೆಮ್ಮೆಯ ಪುತ್ರ, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ನಿಧನಕ್ಕೆ ಜನರು ಕಂಬನಿ ಮಿಡಿದಿದ್ದು, ಮಂಗಳವಾರ ಅಲ್ಲಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀಗಳ ಗೌರವಾರ್ಥ ಕೆಲವೆಡೆ ವ್ಯಾಪಾರ–ವಹಿವಾಟು ಬಂದ್ ಆಗಿತ್ತು.

ರಾಮನಗರದಲ್ಲಿ ವಿವಿಧ ಸಂಘ–ಸಂಸ್ಥೆಗಳ ನೇತೃತ್ವದಲ್ಲಿ ಸಾರ್ವಜನಿಕರು ಶಿವಕುಮಾರ ಶ್ರೀಗಳ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇಟ್ಟು ಮೆರವಣಿಗೆ ಮಾಡಿದರು. ಜೂನಿಯರ್ ಕಾಲೇಜು ಮೈದಾನದ ಬಳಿ ರಥದಲ್ಲಿ ಶಿವಕುಮಾರ ಸ್ವಾಮೀಜಿ ಭಾವಚಿತ್ರ ಇಟ್ಟು ಅದಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಮೆರವಣಿಗೆಯು ಎಂ.ಜಿ ರಸ್ತೆ, ಹಳೆ ಬಸ್ ನಿಲ್ದಾಣ, ಐಜೂರು ವೃತ್ತ, ಕೆಂಪೇಗೌಡ ಸರ್ಕಲ್ ಮಾರ್ಗವಾಗಿ ಸಾಗಿತು. ಭಕ್ತರು ಶಿವಗೀತೆಗಳನ್ನು ಹಾಡುವ ಮೂಲಕ ಗೌರವ ಸಲ್ಲಿಸಿದರು.

ಮೆರವಣಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವರ್ತಕರೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಹಳೆ ಬಸ್ ನಿಲ್ದಾಣದ ಬಳಿ ಬೆಳ್ಳಿರಥದೆದುರು ಸಾರ್ವಜನಿಕರು ಎರಡು ನಿಮಿಷ ಮೌನ ಆಚರಿಸಿದರು.

ಮುಖಂಡರಾದ ಕೆ.ಶೇಷಾದ್ರಿ, ರಾಜಶೇಖರ್, ಎಸ್.ಆರ್.ನಾಗರಾಜು, ಶಿವಕುಮಾರಸ್ವಾಮಿ, ಪ್ರವೀಣ್ ಗೌಡ, ಕೇತೋಹಳ್ಳಿ ಶಂಕರಯ್ಯ, ರುದ್ರದೇವರು, ಶಿವಾನಂದ, ನಗರಸಭೆ ಸದಸ್ಯ ಪಿ.ಮಂಜುನಾಥ್, ಕುಮಾರ್ ಗೂಳಿಗೌಡ, ಚಿಕ್ಕವೀರೇಗೌಡ, ಚಿಕ್ಕಣ್ಣ, ಮುಕುಂದರಾಜ್, ಶಿವಕುಮಾರ್ ಬಾಬು, ಚಂದ್ರಶೇಖರ್, ಕೆ.ಎಸ್. ಶಂಕರಯ್ಯ, ಎ.ಜೆ. ಸುರೇಶ್‌, ವಿಭೂತಿಕೆರೆ ಶಿವಲಿಂಗಯ್ಯ ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಅಂಗಡಿ ಮುಂಗಟ್ಟು ಬಂದ್: ಶಿವಕುಮಾರ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ರಾಮನಗರದ ಕೆಲವು ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಗೌರವ ಸೂಚಿಸಿದರು.

ಎಂ.ಜಿ. ರಸ್ತೆಯಲ್ಲಿನ ಬಹುತೇಕ ವ್ಯಾಪಾರ ಮಳಿಗೆಗಳು ಬಾಗಿಲು ಮುಚ್ಚಿದ್ದವು. ಹಳೆಯ ಬಸ್ ನಿಲ್ದಾಣ, ಐಜೂರು ವೃತ್ತ, ಕೆಂಪೇಗೌಡ ವೃತ್ತ, ಜಾಲಮಂಗಲ ರಸ್ತೆ ಐಜೂರು ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಕೆಲವು ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿಗಳ ಬಾಗಿಲು ಹಾಕಿದ್ದರು.

**
ಸರ್ಕಾರಿ ರಜೆಯಲ್ಲೂ ಕಾಯಕ!

ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಂಗಳವಾರ ರಜೆ ಘೋಷಣೆ ಮಾಡಿತ್ತು. ಹೀಗಾಗಿ ಶಾಲೆ–ಕಾಲೇಜು, ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು ಬಾಗಿಲು ಮುಚ್ಚಿದ್ದವು. ಆದರೆ ಜಿಲ್ಲಾ ಪಂಚಾಯಿತಿ ಭವನದಲ್ಲಿರುವ ಕೆಲವು ಕಚೇರಿಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುವ ಮೂಲಕ ಕಾಯಕ ನಿಷ್ಠೆ ಮೆರೆದರು. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌, ತೋಟಗಾರಿಕೆ ಹಾಗೂ ಶಿಕ್ಷಣ ಇಲಾಖೆ ಕಚೇರಿಗಳ ಬಾಗಿಲು ತೆರೆದಿದ್ದವು.

‘ಇದೇ 26ರಂದು ರಾಮನಗರದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಹೀಗಾಗಿ ಇಂದು ಕಾರ್ಯ ನಿರ್ವಹಿಸುತ್ತಿದ್ದೇವೆ’ ಎಂದು ಇಲಾಖೆಯ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT