ಸೂಪರ್‌ವೈಸರ್‌ ಹತ್ಯೆ: ಆರೋಪಿಗಳ ಬಂಧನ

7
ಕಳ್ಳತನ ಪತ್ತೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಕೊಲೆ

ಸೂಪರ್‌ವೈಸರ್‌ ಹತ್ಯೆ: ಆರೋಪಿಗಳ ಬಂಧನ

Published:
Updated:

ರಾಮನಗರ: ಕಳ್ಳತನವನ್ನು ಪತ್ತೆಮಾಡಿದ್ದಕ್ಕೆ ಪ್ರತಿಕಾರವಾಗಿ ಸೂಪರ್‌ವೈಸರ್ ಅನ್ನು ಭೀಕರವಾಗಿ ಹತ್ಯೆ ಮಾಡಿ, ದೇಹವನ್ನು ತುಂಡಾಗಿ ಕತ್ತರಿಸಿ ಎಸೆದಿದ್ದ ಆರೋಪಿಗಳನ್ನು ಕಗ್ಗಲೀಪುಠ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪುಲಿವೆಂದಲ ತಾಲ್ಲೂಕಿನ ಗಂಗಾರಪುವಂಡಪಲ್ಲಿ ನಿವಾಸಿ ನಾಗೇಶ್ವರ ರೆಡ್ಡಿ (32) ಕೊಲೆಗೀಡಾದ ವ್ಯಕ್ತಿ. ಬೆಂಗಳೂರಿನ ಉತ್ತರಹಳ್ಳಿಯ ಗಾಂಧಿನಗರದಲ್ಲಿ ವಾಸವಿರುವ, ಬಿಹಾರದ ನಿವಾಸಿಗಳಾದ ಮೊಹಮ್ಮದ್ ಏಜಾಜ್‌ ಷರೀಫ್‌ (25) ಹಾಗೂ ಮೊಹಮ್ಮದ್‌ ಪ್ಯಾರು (38) ಬಂಧಿತರು. ಆರೋಪಿಗಳ ಬಳಿಯಿಂದ ಕಬ್ಬಿಣ ಖರೀದಿಸುತ್ತಿದ್ದ ಉತ್ತರಹಳ್ಳಿ ಗಾಂಧಿ ನಗರ ನಿವಾಸಿ ಸುಹೇಲ್‌ ಅಹಮ್ಮದ್ (36) ಹಾಗೂ ಸುಬ್ರಹ್ಮಣ್ಯಪುರ ಕದಿರೇನಹಳ್ಳಿ ನಿವಾಸಿ ಇಸ್ಲಾಯಿಲ್ ಎಂಬುವರನ್ನೂ ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಆಯುಧ, ಕಳ್ಳತನವಾಗಿದ್ದ ಮೂರುವರೆ ಟನ್‌ ತೂಕದ ಕಬ್ಬಿಣದ ಸಾಮಗ್ರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ರಸ್ತೆಯ ಬೈಪಾಸ್ ರಸ್ತೆಯ ಕಾಮಗಾರಿಯ ಸೂಪರ್‌ವೈಸರ್ ಆಗಿ ನಾಗೇಶ್ವರ ರೆಡ್ಡಿ ಕಾರ್ಯ ನಿರ್ವಹಿಸುತ್ತಿದ್ದರು. ಅದೇ ಕಂಪನಿಯಲ್ಲಿ ಆರೋಪಿ ಮೊಹಮ್ಮದ್‌ ಏಜಾಜ್‌ ಜೀಪ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಕಾಮಗಾರಿಗೆ ಬಳಸುತ್ತಿದ್ದ ಕಬ್ಬಿಣ, ಸೆಂಟರಿಂಗ್ ಸಾಮಗ್ರಿಯನ್ನು ಮತ್ತೊಬ್ಬ ಆರೋಪಿ ಪ್ಯಾರು ಜೊತೆ ಸೇರಿಕೊಂಡು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ.

ಇದನ್ನು ಪತ್ತೆಹಚ್ಚಿದ ನಾಗೇಶ್ವರ ರೆಡ್ಡಿ ಆರೋಪಿಗಳನ್ನು ಕೆಲಸದಿಂದ ತೆಗೆಸಿದ್ದು, ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದರು.

ಇದರಿಂದ ರೊಚ್ಚಿಗೆದ್ದ ಇಬ್ಬರು ಆರೋಪಿಗಳು ಇದೇ ತಿಂಗಳ 6ರಂದು ಮುಂಜಾನೆ ನಾಲ್ಕರ ಸುಮಾರಿಗೆ ನಿದ್ದೆಯ ಮಂಪರಿನಲ್ಲಿದ್ದ ನಾಗೇಶ್ವರ್ ಮೇಲೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದರು. ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಮೃತರ ಕಾಲುಗಳನ್ನು ಕತ್ತರಿಸಿ, ಅದನ್ನು ಮ್ಯಾನ್‌ಹೋಲ್‌ಗೆ ಎಸೆದಿದ್ದರು. ಬಳಿಕ ದೇಹವನ್ನು ಗೋಣಿಚೀಲದಲ್ಲಿ ತುಂಬಿ ಕಗ್ಗಲೀಪುರ ಕೆರೆ ಏರಿ ಬಳಿ ಬಿಸಾಡಿದ್ದರು.

ಅಪರಿಚಿತ ದೇಹ ಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದರು.
ಹಾರೋಹಳ್ಳಿ ಸಿಪಿಐ ಆರ್. ಪ್ರಕಾಶ್‌, ಕಗ್ಗಲೀಪುರ ಎಸ್‌.ಐ. ಬಿ.ಟಿ. ಗೋವಿಂದ, ಸಿಬ್ಬಂದಿಯಾದ ಎಲ್. ಅನಂತಕುಮಾರ್, ಶಿವಕುಮಾರ್, ನಾಗರಾಜು, ಲಿಂಗರಾಜು, ಶಿವರಾಜ್‌ ತೇಲಿ, ಆಸೀಮ್‌ ಪಾಷ, ವಿರೂಪಾಕ್ಷ ಆರೋಪಿಗಳ ಪತ್ತೆಯಲ್ಲಿ ಶ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !