ಹೊಂಗನೂರು ಕೆರೆ ಪ್ರವಾಸಿತಾಣ ಮಾಡಲು ಯೋಜನೆ

ಶನಿವಾರ, ಮೇ 25, 2019
22 °C

ಹೊಂಗನೂರು ಕೆರೆ ಪ್ರವಾಸಿತಾಣ ಮಾಡಲು ಯೋಜನೆ

Published:
Updated:
Prajavani

ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಕೆರೆಯನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಚಂದ್ರು ತಿಳಿಸಿದರು.

ತಾಲ್ಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಹೊಂಗನೂರು ಕೆರೆಗೆ ಕಾಯಕಲ್ಪ ಸಭೆಯಲ್ಲಿ ಅವರು ಮಾತನಾಡಿದರು.

600 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆಯನ್ನು ಸುಮಾರು ₹3 ಕೋಟಿ ವೆಚ್ಚದಲ್ಲಿ ಸ್ವಚ್ಚತೆ ಮಾಡಲಾಗುವುದು. ಕೆರೆಗೆ ಹೊಂದಿಕೊಂಡಂತೆ ವಾಕಿಂಗ್ ಪಾರ್ಕ್ ನಿರ್ಮಿಸಲಾಗುವುದು. ಕೆರೆಯಲ್ಲಿ ಹಸಿರುಗುಡ್ಡಗಳ ನಿರ್ಮಾಣ, ನೀರಿನ ಕಾರಂಜಿ, ಮಕ್ಕಳು ವಿಹರಿಸಲು ದೋಣಿಗಳ ವ್ಯವಸ್ಥೆ, ಪ್ರವಾಸಿಗರಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಈ ಯೋಜನೆಗೆ ಅನುದಾನ ನೀಡಲು ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಶಿಫಾರಸು ಮಾಡಿದ್ದಾರೆ. ಇಲಾಖೆ ವತಿಯಿಂದ ಅನುದಾನ ಬಿಡುಗಡೆಯಾಗಲಿದೆ. ಸಂಬಂಧಿಸಿದ ಎಂಜಿನಿಯರ್ ಗಳು ಕೆರೆಯ ಅಭಿವೃದ್ಧಿಗೆ ಬೇಕಾದ ನೀಲನಕ್ಷೆಯನ್ನು ನೀಡಿದ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.

ತಾಲ್ಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಹೊಂಗನೂರು ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕನಕಪುರದಲ್ಲಿ ಕಾನಕಾನಹಳ್ಳಿ ಕೆರೆಯನ್ನು ಪ್ರವಾಸಿತಾಣವನ್ನಾಗಿ ಮಾಡಿರುವ ರೀತಿಯಲ್ಲಿಯೇ ಈ ಕೆರೆಯ ಅಭಿವೃದ್ಧಿ ನಡೆಯಲಿದೆ. ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರ ಸಹಕಾರ ಈ ಯೋಜನೆಗೆ ಅವಶ್ಯಕವಾಗಿದೆ. ಗ್ರಾಮದ ಕೆರೆಯು ಅಭಿವೃದ್ಧಿಗೊಂಡರೆ ಹೊಂಗನೂರು ಗ್ರಾಮಕ್ಕೆ ವಿಶೇಷ ಸ್ಥಾನಮಾನ ಸಿಗಲಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ (ಇಒ) ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ (ಎಇಇ) ಚನ್ನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಮೀರಾ ಖಾನಂ, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಯತೀಶ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !