ಶುಕ್ರವಾರ, ಸೆಪ್ಟೆಂಬರ್ 17, 2021
22 °C

ರಸ್ತೆಯಲ್ಲಿ ರಾಗಿ ಪೈರು ನಾಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ತಾಲ್ಲೂಕಿನ ಕಸಬಾ ಹೋಬಳಿಯ ಗಜ್ಜರಹಳ್ಳಿಯಲ್ಲಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ರಸ್ತೆಯಲ್ಲಿ ರಾಗಿ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಗಜ್ಜರಹಳ್ಳಿ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಚರಂಡಿ, ರಸ್ತೆ ಇಲ್ಲದೆ ಜನರು ಪರದಾಡುವಂತಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ‌ ನೀರು ನಿಂತು ಸಂಚಾರಕ್ಕೆ‌ ಕಷ್ಟವಾಗುತ್ತಿದೆ. ಮಕ್ಕಳು, ಹಿರಿಯ ನಾಗರಿಕರು ಸಂಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಶಕ್ತಿ ಕೇಂದ್ರದ ಅಧ್ಯಕ್ಷ ಜಿ.ವಿ.ಶ್ರೀನಿವಾಸ್ ಮಾತನಾಡಿ, ಗಜ್ಜರಹಳ್ಳಿಗೆ ಡಾಂಬರು ರಸ್ತೆ, ಸಿ.ಸಿ ರಸ್ತೆ, ಚರಂಡಿ ನಿರ್ಮಾಣದ ಅವಶ್ಯಕತೆಯಿದೆ. ಅಧಿಕಾರಿಗಳು ಹಾಗೂ ಶಾಸಕರು ಈ ಬಗ್ಗೆ ಗಮನಹರಿಸಬೇಕು
ಎಂದರು.

ತಾವರೆಕೆರೆ ಗ್ರಾ.ಪಂ ಉಪಾಧ್ಯಕ್ಷ ಜಿ.ಎಲ್.ನಿತ್ಯಾನಂದ ಮಾತನಾಡಿ, ಮಳೆಗಾಲದಲ್ಲಿ ಊರಿನ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗುತ್ತವೆ. ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಭರವಸೆ ನೀಡಿದ್ದ ಶಾಸಕರು ಈವರೆಗೆ ತಿರುಗಿಯೂ ನೋಡಿಲ್ಲ. 2021-22ನೇ ಸಾಲಿನ ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ ತಾಲ್ಲೂಕಿನ ಸುಮಾರು 60 ಹಳ್ಳಿಗಳ ಕಾಲೊನಿಗಳಲ್ಲಿ ಸಿ.ಸಿ ರಸ್ತೆ, ಚರಂಡಿ ಹಾಗೂ ಹಲವು ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿ ಈಗಾಗಲೇ ಹಲವೆಡೆ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಗಜ್ಜರಹಳ್ಳಿ ಗ್ರಾಮದ ಮುಖ್ಯ ರಸ್ತೆ ಹಾಗೂ ಕಾಲೊನಿಗಳಲ್ಲಿ ಸಿ.ಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರೂ ಗ್ರಾಮವನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಾಜಪ್ಪ, ರಾಮಕೃಷ್ಣಪ್ಪ, ಗೋಪಾಲ ಕೃಷ್ಣ, ಚಂದ್ರೇಗೌಡ, ಜಿ.ಎಸ್.ರಂಗನಾಥ್, ಮಹೇಶ್, ನರಸಿಂಹಯ್ಯ, ನವೀನ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು