ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರು ಮನಸ್ಸು ಮಾಡಿದರೆ ಕನ್ನಡ ಶಾಲೆ ಉಳಿವು: ಸಾಹಿತಿ ವಿಜಯಾ ಶ್ರೀಧರ್

14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ
Last Updated 2 ಮಾರ್ಚ್ 2020, 11:07 IST
ಅಕ್ಷರ ಗಾತ್ರ

ಶಿವಮೊಗ್ಗ: ಜನರು ಮನಸ್ಸು ಮಾಡಿದರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯುತ್ತವೆ. ಕನ್ನಡ ಮಾಧ್ಯಮದಲ್ಲಿ ಓದಿದ ಸಾಕಷ್ಟು ಜನರು ಉನ್ನತ ಹುದ್ದೆಯಲ್ಲಿದ್ದಾರೆ. ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಲು ಮುಂದಾಗಬೇಕು ಎನ್ನುವುದು 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ವಿಜಯಾ ಶ್ರೀಧರ್ಅವರ ಅಭಿಪ್ರಾಯ.

ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರೇ ಸಿದ್ಧರಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕರು ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ, ಆಂಗ್ಲ ಮಾಧ್ಯಮದಲ್ಲಿಯೇ ಮಕ್ಕಳು ಓದಬೇಕು. ಆಗ ವಿಪುಲ ಉದ್ಯೋಗಾವಕಾಶ ದೊರಕುತ್ತದೆ. ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತದೆ ಎನ್ನುವ ಮನೋಭಾವವನ್ನು ಬಹುತೇಕ ಪೋಷಕರು ಹೊಂದಿದ್ದಾರೆ ಎಂದು
ಬೇಸರ ವ್ಯಕ್ತಪಡಿಸಿದರು.

ಒಂದರಿಂದ ಏಳನೇ ತರಗತಿಯವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು. ಕನ್ನಡ ಕೇವಲ ಭಾಷೆಯಲ್ಲ. ಅದೊಂದು ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ. ಹಾಗಾಗಿ ಕನ್ನಡ ನಾಡಿನಲ್ಲಿ ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಕನ್ನಡ ಕಲಿಯಲೇಬೇಕುಎಂಬುದು ಅವರ ಅನಿಸಿಕೆ.

ಮಾರ್ಚ್‌ 2ರಿಂದ ಆರಂಭವಾಗುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಜತೆ ಅವರು ಮಾತುಕತೆ ನಡೆಸಿದರು.

*ಮಕ್ಕಳು ಕನ್ನಡದಿಂದ ದೂರವಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಏನು?

ಶಾಲೆಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಕನ್ನಡ ಪತ್ರಿಕೆಗಳನ್ನು ಓದಿಸಿದಾಗ ಕನ್ನಡದ ಬಗ್ಗೆ ಪ್ರೀತಿ ಹುಟ್ಟುತ್ತದೆ. ಶಿಕ್ಷಕರು ಸಹ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಕನ್ನಡ ಕಥೆ ಪುಸ್ತಕಗಳನ್ನು ಓದಲು ನೀಡಬೇಕು. ಆಗ ಮಕ್ಕಳು ಕನ್ನಡಕ್ಕೆ ಹತ್ತಿರವಾಗುತ್ತಾರೆ.

*ಮಹಿಳೆಯರ ನೋವು, ಸಂಕಷ್ಟಗಳಿಗೆ ಸಾಹಿತ್ಯದಲ್ಲಿ ಉತ್ತರ ಇದೆಯೇ?

ಹೌದು.. ಸಾಹಿತ್ಯದ ಮೂಲಕ ಮಹಿಳೆಯ ದುಃಖ, ದುಮ್ಮಾನಗಳನ್ನು ಹೇಳಿಕೊಳ್ಳಲು ಅವಕಾಶವಿದೆ. ಬೇರೆ ಸ್ತ್ರೀಯರ ನೋವನ್ನು ಅರ್ಥ ಮಾಡಿಕೊಳ್ಳಲೂ ಅದೊಂದು ಮಾರ್ಗವಾಗಿದೆ.

*ಸಾಹಿತ್ಯ ಸಮ್ಮೇಳನಗಳು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಾಗುತ್ತಿವೆ. ಈ ಬಗ್ಗೆ ನಿಮ್ಮ ಅನಿಸಿಕೆ.

ಸರ್ಕಾರದಿಂದ ಅನುದಾನ ಪಡೆದರೆ ತಪ್ಪಿಲ್ಲ. ಅದು ಸಮಾಜದ ಹಕ್ಕು. ಅದೇನೂ ಅಪರಾಧವಲ್ಲ. ಸಾಹಿತ್ಯ ಸಮ್ಮೇಳನದಿಂದ ಕನ್ನಡದ ಭಾಷೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತದೆ.

*ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗ ಮೀಸಲಾತಿ ನೀಡಬೇಕೆ?

ನೀಡಿದರೆ ಒಳ್ಳೆಯದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ, ಭವಿಷ್ಯದಲ್ಲಿ ಮಕ್ಕಳು ಕನ್ನಡ ಓದುವ ಉತ್ಸಾಹ ತೋರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT