ಆನಂದ್ ಸಿಂಗ್‌ ಮೇಲೆ ಹಲ್ಲೆ: ಶಾಸಕ ಗಣೇಶ್‌ಗಾಗಿ ಪೊಲೀಸರ ಹುಡುಕಾಟ

7

ಆನಂದ್ ಸಿಂಗ್‌ ಮೇಲೆ ಹಲ್ಲೆ: ಶಾಸಕ ಗಣೇಶ್‌ಗಾಗಿ ಪೊಲೀಸರ ಹುಡುಕಾಟ

Published:
Updated:

ರಾಮನಗರ: ಶಾಸಕ ಆನಂದ್ ಸಿಂಗ್‌ ಮೇಲೆ ಹಲ್ಲೆ ನಡೆಸಿರುವ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಗಣೇಶ್‌ ವಿರುದ್ಧ ಇಲ್ಲಿನ ಬಿಡದಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಪ್ರಕರಣವು ಗಂಭೀರ ಸ್ವರೂಪ ಪಡೆಯುತ್ತಲೇ ಆರೋಪಿ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ರೆಸಾರ್ಟ್‌ ವಾಸ್ತವ್ಯ ಮುಕ್ತಾಯದ ಬಳಿಕ ಅವರು ತಮ್ಮ ಕ್ಷೇತ್ರಕ್ಕೂ ಹೋಗಿಲ್ಲ.

ಗಣೇಶ್‌ ಪತ್ತೆಯಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಮೂರು ತನಿಖಾ ತಂಡಗಳು ರಚನೆಯಾಗಿವೆ. ‘ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಸದ್ಯದಲ್ಲಿಯೇ ಬಂಧಿಸಲಾಗುವುದು’ ಎಂದು ಎಸ್ಪಿ ಬಿ. ರಮೇಶ್ ತಿಳಿಸಿದರು.

ಬಂಧನಕ್ಕೆ ಕೈ ನಾಯಕರ ಸಮ್ಮತಿ?: ಹಲ್ಲೆಗೆ ಒಳಗಾದ ಶಾಸಕ ಆನಂದ ಸಿಂಗ್ ಕೊಲೆ ಯತ್ನ ಆರೋಪ ಮಾಡಿರುವ ಕಾರಣ ಆರೋಪಿ ಶಾಸಕನ ಬಂಧನಕ್ಕೆ ಕಾಂಗ್ರೆಸ್ ನಾಯಕರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ತನಿಖೆಯೂ ಚುರುಕಾಗಿದೆ.

ಆರಂಭದಲ್ಲಿ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್‌ನ ಮುಖಂಡರು ಪ್ರಯತ್ನಿಸಿದ್ದರು. ರೆಸಾರ್ಟ್‌ ಒಳಗೆ ಹಲ್ಲೆ ನಡೆದೇ ಇಲ್ಲ ಎಂದು ಬಿಂಬಿಸಲು ಯತ್ನಿಸಿದ್ದರು. ಆನಂದ್ ಸಂಬಂಧಿಕರ ಮದುವೆಗೆ ಹೋಗಿದ್ದಾರೆ. ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ ಎಂದೆಲ್ಲ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಆದರೆ ಆನಂದ್‌ ಸಿಂಗ್‌ ಪೊಲೀಸರಿಗೆ ತಮ್ಮ ಮೇಲೆ ಕೊಲೆ ಯತ್ನ ನಡೆದಿರುವುದಾಗಿ ಹೇಳಿಕೆ ನೀಡಿದ್ದರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆನಂದ್ ಕುಟಂಬದವರು ಒತ್ತಾಯಿಸಿದ್ದರು. ನಂತರವಷ್ಟೇ ಕಾಂಗ್ರೆಸ್‌ ಕ್ರಮಕ್ಕೆ ಮುಂದಾಗಿದ್ದು, ಪಕ್ಷಕ್ಕೆ ಆಗಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಗಣೇಶ್‌ರನ್ನು ಪಕ್ಷದಿಂದ ಅಮಾನತು ಮಾಡಿದೆ.

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !