ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್ 27 ರಿಂದ ರಾಜ್ಯಶಾಸ್ತ್ರ ಅಧ್ಯಾಪಕರ ಸಮ್ಮೇಳನ

Last Updated 25 ಡಿಸೆಂಬರ್ 2018, 12:34 IST
ಅಕ್ಷರ ಗಾತ್ರ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಡಿ.27 ಮತ್ತು 28ರಂದು ರಾಜ್ಯಶಾಸ್ತ್ರ ಅಧ್ಯಾಪಕರ ಸಮ್ಮೇಳನ ಆಯೋಜಿಸಲಾಗಿದೆ.

ರಾಜ್ಯಶಾಸ್ತ್ರ ವಿಭಾಗ, ರಾಜ್ಯಶಾಸ್ತ್ರ ಅಧ್ಯಾಪಕರ ಸಂಘ, ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠ, ಅಬ್ದುಲ್ ನಜೀರ್ ಸಾಬ್ ಅಧ್ಯಯನ ಪೀಠಗಳ ಸಹಯೋಗದಲ್ಲಿ ನಡೆಯುವ 18ನೇ ಸಮ್ಮೇಳನದಲ್ಲಿ ಪ್ರಭುತ್ವ, ಧರ್ಮ ಹಾಗೂ ರಾಜಕಾರಣ ಕುರಿತು ವ್ಯಾಪಕ ಚರ್ಚೆ ನಡೆಸಲಾಗುವುದು ಎಂದು ರಾಜ್ಯಶಾಸ್ತ್ರ ಅಧ್ಯಾಪಕರ ವೇದಿಕೆ ಅಧ್ಯಕ್ಷ ಪ್ರೊ.ಎಚ್.ಎನ್.ಧರ್ಮೇಗೌಡಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಮಕಾಲೀನ ಭಾರತೀಯ ರಾಜಕಾರಣ ಬದಲಾವಣೆಯ ಪಥದಲ್ಲಿದೆ. ಸಾಮಾಜಿಕ, ಧಾರ್ಮಿಕ ಸಮಸ್ಯೆಗಳು. ಭಾರತದ ಸಮುದಾಯಗಳು, ಧಾರ್ಮಿಕ ಗುಂಪುಗಳು, ಧರ್ಮ ಮತ್ತು ರಾಜಕಾರಣ, ರಾಷ್ಟ್ರೀಯತೆ, ದೇಶಭಕ್ತಿಯ ಹಿಂದಿನ ಸೈದ್ಧಾಂತಿಕ ಚರ್ಚೆಗಳು, ಕೇಸರೀಕರಣ, ಅಸಹಿಷ್ಣುತೆ, ಪ್ರಾದೇಶಿಕತೆ, ಜನಾಂಗೀಯ, ಜಾತಿ ಸಂಘಟನೆಗಳು, ರಾಜಕಾರಣದ ಅಸ್ಮಿತೆ, ಏಕರೂಪ ನಾಗರಿಕ ಸಂಹಿತೆ, ಗೋಹತ್ಯೆ ನಿಷೇಧ, ಮುಸ್ಲಿಂ ವೈಯಕ್ತಿಕ ಕಾನೂನು, ತ್ರಿವಳಿ ತಲಾಕ್, ಮಹಿಳೆಯರ ದೇವಾಲಯ ಪ್ರವೇಶ... ಹೀಗೆ ಹಲವು ಭೂತ, ವರ್ತಮಾನ ಮತ್ತು ಭವಿಷ್ಯತ್‌ ವಿಚಾರಗಳಿಗೆ ಉತ್ತರ ಕಂಡುಕೊಳ್ಳಲು ಸಮ್ಮೇಳನ ಪ್ರಯತ್ನಿಸಲಿದೆ ಎಂದರು.

ಸುಮಾರು 4 ಸಮಾನಾಂತರ ವೇದಿಕೆಗಳಲ್ಲಿ ನಿರಂತರ ಚರ್ಚೆಗಳು ಮುಂದುವರಿಯುತ್ತವೆ. ರಾಜಕೀಯ ಮುಖಂಡರಾದ ಡಾ.ಬಿ.ಎಲ್. ಶಂಕರ್, ವೈ.ಎಸ್.ವಿ. ದತ್ತಾ, ಆಯನೂರು ಮಂಜುನಾಥ್, ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾದ ಆರ್.ಎಲ್.ಎಂ. ಪಾಟೀಲ್, .ಎಚ್.ಎಲ್. ರಾಜಶೇಖರ್, .ಜೆ.ಎಸ್. ಸದಾನಂದ, ರಾಜಾರಾಮ್ ತೊಲ್ಪಾಡಿ, ಪಿ.ಎಲ್. ಧರ್ಮ, ಮುಸಾಫರ್ ಅಸಾದಿ, ಪಾಲೇಕರ್, ಕೆ.ಜಿ. ಸುರೇಶ್, ಡಾ.ನಂದಕಿಶೋರ್ ಅನಿಸಿಕೆ ಹಂಚಿಕೊಳ್ಳಲಿದ್ದಾರೆ ಎಂದು ವಿವರ ನೀಡಿದರು.

ರಾಜನೀತಿ ನಿರೂಪಕರು ಮತ್ತು ರಾಜಕೀಯ ವಿಜ್ಞಾನಗಳ ಮಧ್ಯೆ ಗಂಭೀರ ಚರ್ಚೆ ಹುಟ್ಟುಹಾಕುವುದು ಸಮ್ಮೇಳನದ ಪ್ರಮುಖ ಆಶಯ. ಅದಕ್ಕಾಗಿ ಎರಡು ವಿಶೇಷ ಅಧಿವೇಶನ ಆಯೋಜಿಸಲಾಗುತ್ತಿದೆ. ಮೊದಲ ದಿನದ ಅಧಿವೇಶನದಲ್ಲಿ ರಾಜಕೀಯ ಪಕ್ಷಗಳ ವಕ್ತಾರರು, ರಾಜಕಾರಣಿಗಳು ಭಾಗವಹಿಸುತ್ತಾರೆ. 2ನೇ ದಿನದ ಅಧಿವೇಶನದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ರಾಜ್ಯಶಾಸ್ತ್ರಜ್ಞರು ಚರ್ಚೆ ಮಾಡುತ್ತಾರೆ. ಪ್ರತಿಕ್ರಿಯೆ ಮಂಡಿಸುತ್ತಾರೆ. ಸುಮಾರು 12 ಸಮಾನಾಂತರ ಗೋಷ್ಠಿಗಳಲ್ಲಿ ಸಂಶೋಧಕರು ಪ್ರಬಂಧ ಮಂಡಿಸಲಿದ್ದಾರೆ ಎಂದರು.

ಡಿ. 27ರಂದು ಬೆಳಿಗ್ಗೆ 11.30ಕ್ಕೆ ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿ ಜೋಗನ್ ಶಂಕರ್ ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯಶಾಸ್ತ್ರ ವಿಭಾಗದ ಆಹ್ವಾನಿತ ಜಿ. ಹರಗೋಪಾಲ್ ಆಶಯ ಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.

ಡಿ. 28ರಂದು ಸಂಜೆ 4ಕ್ಕೆ ಸಮಾರೋಪ ನಡೆಯಲಿದೆ. ಅಧ್ಯಾಪಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆರ್.ಎಲ್.ಎಂ. ಪಾಟೀಲ್, ಎಚ್.ಎಂ. ರಾಜಶೇಖರ್, ಕೆ.ಚಂದ್ರಶೇಖರ್, ಯು.ವೆಂಕಟೇಶ್, ಕುಬೇಂದ್ರನಾಯ್ಕ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪ್ರಮುಖರಾದ ಜೆ.ಎಸ್. ಸದಾನಂದ, ಎ. ಷಣ್ಮುಖ, ವೀರೇಶ್, ಬೆಂಗೇರಿ, ಶಂಕರ್, ಚಂದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT