ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ; ಜಿಲ್ಲೆಗೆ ಸಿಗದ ಪ್ರಾತಿನಿಧ್ಯ

ಕಾರ್ಯಕರ್ತರಲ್ಲಿ ನಿರಾಸೆ; ಜಿಲ್ಲೆ ಕಡೆಗಣನೆಗೆ ಬೇಸರ
Last Updated 20 ಆಗಸ್ಟ್ 2019, 12:13 IST
ಅಕ್ಷರ ಗಾತ್ರ

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಪುಟದ 17 ಸಚಿವರ ಪೈಕಿ ಜಿಲ್ಲೆಯ ಒಬ್ಬರಿಗೂ ಪ್ರಾತಿನಿಧ್ಯ ಸಿಕ್ಕಿಲ್ಲ. ಜಿಲ್ಲೆಯನ್ನು ಕಡೆಗಣಿಸಿರುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಗರಿಗೆದರಿವೆ.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹಾಗೂ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಈ ಪೈಕಿ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಅದು ಈಡೇರಿಲ್ಲ.

‘ಬಸನಗೌಡ ಅವರು ತಲಾ ಎರಡು ಅವಧಿಗೆ ಸಂಸದ, ಶಾಸಕರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಪ್ರಭಾವಿ ಲಿಂಗಾಯತ ನಾಯಕ. ಹೀಗಾಗಿ ಅವರಿಗೆ ಸಚಿವ ಸ್ಥಾನ ಖಚಿತ’ ಎಂದೇ ಹೇಳಲಾಗಿತ್ತು. ಆದರೆ, ಮೊದಲ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರುವುದು ಕಾರ್ಯಕರ್ತರು, ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

‘ವಿವಾದಾತ್ಮ ಹೇಳಿಕೆಗಳು, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದು, ಶಾಸಕ ಎಂ.ಬಿ.ಪಾಟೀಲ ಬಗೆಗಿನ ಮೃಧು ಧೋರಣೆ ಮತ್ತು ಇವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಕೈಗೊಂಡ ನೀರಾವರಿ ಯೋಜನೆಗಳ ಬಗ್ಗೆ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿರುವುದು ಸಚಿವ ಸ್ಥಾನಕ್ಕೆ ಮುಳ್ಳಾಗಿರಬಹುದು’ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಸಚಿವ ಸ್ಥಾನದ ವಿಷಯ ಮುನ್ನಲೆಗೆ ಬಂದಾಗಲೆಲ್ಲ, ‘ನಾನು ಯಾರ ಬಳಿಯೂ ಹೋಗಿ ನನ್ನ ಬಯೋಡಾಟಾ ಕೊಟ್ಟು ಅವಕಾಶ, ಅನುಕೂಲ ಕಲ್ಪಿಸಿಕೊಡುವಂತೆ ಕೇಳಿಕೊಂಡಿಲ್ಲ’ ಎಂದೇ ಬಸನಗೌಡ ಪಾಟೀಲ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿ ನೀಡಿದ್ದರು.

‘2008 ಮತ್ತು 2012ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್.ಕೆ.ಬೆಳ್ಳುಬ್ಬಿ ಹಾಗೂ 2006ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಈ ಬಾರಿ ಒಬ್ಬರಿಗೂ ಸಚಿವ ಸ್ಥಾನ ಕೊಟ್ಟಿಲ್ಲ. ಸಂಪುಟ ವಿಸ್ತರಣೆ ವೇಳೆ ಜಿಲ್ಲೆಗೆ ಅವಕಾಶ ಸಿಗಬಹುದು’ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಸಂಪುಟ ರಚನೆ ಬೆನ್ನಲ್ಲೇ ಯತ್ನಾಳ ಅವರು, ‘ನಮ್ಮ ರಾಜ್ಯ ಮಹಾಪೂರ ಮತ್ತು ಮಳೆಯಿಂದ ತತ್ತರಿಸಿ ಹೋಗಿದೆ. ಜನತೆ ಅತ್ಯಂತ ನೋವು ಅನುಭವಿಸುತ್ತಿದ್ದಾರೆ. ಆ ಕಡೆಗೆ ನಮ್ಮ ಗಮನ ಕೊಡಬೇಕು. ಸಚಿವ ಸಂಪುಟ ಅಸಮಾಧಾನ ಈಗ ಬೇಡ. ನೂತನ ಸಚಿವರು ತಕ್ಷಣ ಕ್ರಿಯಾಶೀಲರಾಗಬೇಕು. ಹಾರ, ತುರಾಯಿಯಲ್ಲಿ ಸಮಯ ವ್ಯರ್ಥ ಮಾಡದೆ ಕೆಲಸ ಪ್ರಾರಂಭವಾಗಲಿ’ ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ಜೆಡಿಎಸ್‌ನ ಎಂ.ಸಿ.ಮನಗೂಳಿ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಜೆಡಿಎಸ್‌ನ ದೇವಾನಂದ ಚವ್ಹಾಣ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT