ಬದಲಾದ ರಾಜಕೀಯ ಚಿತ್ರಣ

ಬುಧವಾರ, ಜೂನ್ 19, 2019
23 °C
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

ಬದಲಾದ ರಾಜಕೀಯ ಚಿತ್ರಣ

Published:
Updated:
Prajavani

ಸಾಗರ: ಲೋಕಸಭೆ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ 22,996 ಮತಗಳ ಮುನ್ನಡೆ ದೊರಕಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಕೇವಲ ಆರು ತಿಂಗಳ ಹಿಂದೆ ನಡೆದಿದ್ದ ಲೋಕಸಭೆ ಉಪ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಅವರು ಗೆದ್ದಿದ್ದರೂ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ 8 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ದೊರಕಿತ್ತು.

ಈ ಬಾರಿಯೂ ಮೈತ್ರಿಕೂಟದ ಅಭ್ಯರ್ಥಿಗೆ ಮುನ್ನಡೆ ದೊರಕುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಬಿಜೆಪಿ ಕ್ಷೇತ್ರದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿದ್ದು, ಇಲ್ಲಿನ ಶಾಸಕ ಎಚ್.ಹಾಲಪ್ಪ ಹರತಾಳು ರಾಜಕೀಯವಾಗಿ ಮತ್ತಷ್ಟು ಪ್ರಬಲರಾಗುವ ಸೂಚನೆಗಳು ದಕ್ಕಿವೆ.

ಉಪ ಚುನಾವಣೆಯಲ್ಲಿ ದೊರಕದ ಮುನ್ನಡೆ ಈ ಬಾರಿ ಬಿಜೆಪಿಗೆ ಯಾಕೆ ದೊರಕಿದೆ ಎನ್ನುವ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ ಶೇ 67ರಷ್ಟು ಮಾತ್ರ ಮತದಾನವಾಗಿತ್ತು. ಹೇಗಿದ್ದರೂ ಕೆಲವೇ ತಿಂಗಳ ನಂತರ ಮತ್ತೆ ಚುನಾವಣೆ ನಡೆಯಲಿದೆ ಎನ್ನುವ ಕಾರಣಕ್ಕೆ ಒಂದಿಷ್ಟು ಮತದಾರರು ಮತಗಟ್ಟೆಗೆ ಬರಲು ಉತ್ಸಾಹ ತೋರಿರಲಿಲ್ಲ. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ 78 ರಷ್ಟು ಮತದಾನವಾದಾಗಲೇ ಮುನ್ನಡೆ ಖಚಿತ ಎಂಬ ವಿಶ್ವಾಸದಲ್ಲಿ ಬಿಜೆಪಿ ಮುಖಂಡರು ಇದ್ದರು.

‘ಉಪ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಷಯ ಚರ್ಚೆಗೆ ಬಂದಿರಲೇ ಇಲ್ಲ. ಈ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ವಿಷಯದ ಜೊತೆಗೆ ಪುಲ್ವಾಮಾ ದಾಳಿ ವಿಷಯವೂ ಸೇರಿಕೊಂಡಿದ್ದು, ನಮ್ಮ ಹಿನ್ನಡೆಗೆ ಕಾರಣವಾಯಿತು’ ಎಂಬ ಅಭಿಪ್ರಾಯವನ್ನು ಕೆಲವು ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

ಜಾತಿವಾರು ಮತ ಗಳಿಕೆ ವಿಷಯ ಬಂದಾಗ ಈಡಿಗರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು  ಕೈಹಿಡಿಯುತ್ತಾರೆ ಎಂಬುದು ಈ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಲೆಕ್ಕಾಚಾರವಾಗಿತ್ತು. ಆದರೆ ಬೂತ್‌ವಾರು ಮತ ಗಳಿಕೆ ಅಂಕಿ ಅಂಶಗಳನ್ನು ಗಮನಿಸಿದರೆ ಈಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳ ಮತಗಟ್ಟೆಗಳಲ್ಲೂ ಬಿಜೆಪಿ ಶೇ 30ರಿಂದ 40ರಷ್ಟು ಮತ ಪಡೆದಿರುವುದು ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಹೊಡೆದಿರುವುದು ಸ್ಪಷ್ಟವಾಗುತ್ತದೆ.

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಮುಖ್ಯಮಂತ್ರಿ ಎಚ್.ಡಿ .ಕುಮಾರಸ್ವಾಮಿ ಅವರು ಸಾಗರದಲ್ಲಿ ನಡೆಸಿದ ಬಹಿರಂಗ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದನ್ನು ಗಮನಿಸಿದ ಮೈತ್ರಿಕೂಟದವರು ಈ ಬಾರಿಯೂ ತಮಗೆ ಮುನ್ನಡೆ ದೊರಕಲಿದೆ ಎಂದು ಬೀಗಿದ್ದರು. ಆದರೆ ಮುಖ್ಯಮಂತ್ರಿಗಳ ಈ ಸಭೆ ಕೂಡ ಮೈತ್ರಿ ಅಭ್ಯರ್ಥಿ ಪರವಾಗಿ ಮತವಾಗಿ ಪರಿವರ್ತನೆಗೊಳ್ಳಲಿಲ್ಲ ಎನ್ನುವುದು ಖಾತ್ರಿಯಾಗಿದೆ.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಇಬ್ಬರೂ ಸೇರಿ ಮೈತ್ರಿಕೂಟದ ಪರವಾಗಿ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಪ್ರಚಾರ ನಡೆಸಿದ್ದರೂ ಅವರ ಅಭ್ಯರ್ಥಿ ಪರವಾದ ಅಭಿಪ್ರಾಯ ಮೂಡಿಸುವಲ್ಲಿ ವಿಫಲರಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರು ಸೋತಾಗಲೇ ಕಾಂಗ್ರೆಸ್‌ಗೆ ಆಘಾತ ಉಂಟಾಗಿತ್ತು. ನಂತರ ನಡೆದ ಆವಿನಹಳ್ಳಿ ಜಿ.ಪಂ ಕ್ಷೇತ್ರದ ಉಪ ಚುನಾವಣೆಯಲ್ಲಿನ ಗೆಲುವು ಹಾಗೂ ಲೋಕಸಭೆ ಉಪ ಚುನಾವಣೆಯಲ್ಲಿನ ಮುನ್ನಡೆ ಪಕ್ಷಕ್ಕೆ ಕೊಂಚ ಚೇತರಿಕೆ ನೀಡಿತ್ತು. ಈಗ ಕ್ಷೇತ್ರದಲ್ಲಿ ಬಿಜೆಪಿ ಪಡೆದಿರುವ ಮುನ್ನಡೆಯ ಪ್ರಮಾಣ ನೋಡಿದರೆ ಕಾಂಗ್ರೆಸ್‌ಗೆ ಭವಿಷ್ಯದ ದಿನಗಳು ಕಠಿಣದ ಹಾದಿಯಾಗಲಿವೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !