ಮಂಗಳವಾರ, ಅಕ್ಟೋಬರ್ 15, 2019
29 °C
ರೈತ ಸಂಪರ್ಕ ಕೇಂದ್ರದ ವಿರುದ್ಧ ರೈತರ ಆರೋಪ

ಕಳಪೆ ಬಿತ್ತನೆ ಬೀಜ ಪೂರೈಕೆ

Published:
Updated:
Prajavani

ಮುದ್ದೇಬಿಹಾಳ: ತಾಲ್ಲೂಕಿನ ದೇವೂರ ಗ್ರಾಮದ ಶಾಂತಾಬಾಯಿ ಗಡ್ಡಿ ಎಂಬುವವರು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಲು ಖರೀದಿಸಿರುವ ಕಡಲೆ ಬೀಜದಲ್ಲಿ ಸಣ್ಣದಾಗಿರುವ ಕಳಪೆ ಕಾಳು ಬಂದಿರುವುದಾಗಿ ಆರೋಪಿಸಿದ್ದಾರೆ.

ಅವರು ಖರೀದಿಸಿರುವ 20 ಕೆ.ಜಿ ಪ್ಯಾಕೆಟ್‌ನಲ್ಲಿ ಒಂದೂವರೆ ಕೆ.ಜಿ ಸಣ್ಣದಾಗಿರುವ, ಕಡ್ಡಿ ಇರುವ, ಒಡೆದಿರುವ ಬೇಳೆ ಇರುವ ಕಡಲೆ ಬೀಜಗಳು ಇವೆ. ಇದನ್ನು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ತೋರಿಸಿದ್ದಾರೆ. ಆದರೆ, ಮೊದಲು ರೈತ ಬಸವರಾಜ ಸಂಗಣ್ಣ ಕಟ್ಟಿಮನಿ ಅವರ ಆರೋಪಗಳನ್ನು ನಿರಾಕರಿಸಿದ ಅಧಿಕಾರಿಗಳು, ‘ಇವು ನಮ್ಮ ಬಿತ್ತನೆ ಬೀಜಗಳಲ್ಲ, ನೀವು ಮನೆಯ ಬೀಜ ಕೂಡಿಸಿರಬೇಕು’ ಎಂದಿದ್ದಾರೆ. ಮನೆಯಿಂದ ತಂದಿದ್ದ ರಶೀದಿ ತೋರಿಸಿದ ನಂತರ ಕಳಪೆ ಬೀಜಗಳನ್ನು ವಶಕ್ಕೆ ಪಡೆದ ಸಿಬ್ಬಂದಿ, ಅದಕ್ಕೆ ಯಾವುದೇ ಸ್ವೀಕೃತಿ ನೀಡದೇ, ಅವುಗಳನ್ನು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಪಡೆದಿದ್ದಾರೆ.

ರೈತ ಸಣ್ಣದಾಗಿರುವ ಕಾಳುಗಳ ಬಗ್ಗೆ ದೂರುವಾಗ ಅಲ್ಲಿಯೇ ಇದ್ದ ಅನೇಕ ರೈತರು ಅವರ ಪರವಾಗಿ ವಾದಿಸಿದ್ದಾರೆ. ರಾಜು ದಡ್ಡಿ ಎಂಬುವರು, ‘ಹೌದು, ಮೂರು ವರ್ಷಗಳ ಹಿಂದೆ ಸಹ ಇದೇ ರೀತಿ ಸಣ್ಣನೆಯ ಕಾಳು ಬಿತ್ತನೆಯ ಬೀಜದ ಪ್ಯಾಕೆಟ್‌ನಲ್ಲಿ ಬಂದಿದ್ದವು. ಬಿತ್ತನೆಯ ಬೀಜಗಳನ್ನು ಸಂಸ್ಕರಿಸಿ, ಸಣ್ಣನೆಯ ಕಾಳು ಬೇರೆ ಮಾಡಿ, ಆರೋಗ್ಯವಂತ ಕಾಳುಗಳನ್ನು ಬೀಜ ನಿಗಮದಿಂದ ರೈತ ಸಂಪರ್ಕ ಕೇಂದ್ರಕ್ಕೆ ನೀಡಬೇಕು ಎಂಬ ನಿಯಮ ಇದೆ. ಆದರೆ, ರೈತರು ಬಿತ್ತನೆ ಬೀಜಗಳನ್ನು ಖರೀದಿಸಿದ ನಂತರ ನೇರವಾಗಿ ಬಿತ್ತಲು ಜಮೀನಿಗೆ ಒಯ್ಯುವುದರಿಂದ ಆ ಸಮಯದಲ್ಲಿ ದೂರು ನೀಡಲು ಬಹಳಷ್ಟು ಜನ ರೈತರು ಮನಸ್ಸು ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ದೇವೂರದ ರೈತ ಬಸವರಾಜ ಕಟ್ಟಿಮನಿ, ‘ಬಹಳಷ್ಟು ರೈತರು ತಾವು ಒಯ್ದಿರುವ ಬಿತ್ತನೆಯ ಬೀಜದ ಪ್ಯಾಕೆಟ್‌ಗಳನ್ನು ಇನ್ನೂ ಒಡೆದಿಲ್ಲ. ಮಳೆ ಇನ್ನೂ ನಿಂತಿಲ್ಲ. ಹೀಗಾಗಿ ಹಿಂಗಾರು ಬಿತ್ತನೆಗೆ ರೈತರು ರೈತ ಸಂಪರ್ಕ ಕೇಂದ್ರದಿಂದ ಬೀಜಗಳನ್ನು ಒಯ್ದು ಇಟ್ಟುಕೊಂಡಿದ್ದಾರೆ. ಒಡೆದ ನಂತರ ಅವರಿಗೆ ಈ ಬಗ್ಗೆ ಗೊತ್ತಾಗಬಹುದು’ ಎಂದು ಹೇಳಿದರು.

Post Comments (+)