ಅಂಚೆ ಇಲಾಖೆ ಸಮಸ್ಯೆ; ಗ್ರಾಹಕರು ಹೈರಾಣ

7
ತಾಳಿಕೋಟೆ ಪಟ್ಟಣಿಗರಲ್ಲಿ ಅಸಮಾಧಾನ; ಇಲಾಖೆ ಕಾರ್ಯವೈಖರಿ ಬಗ್ಗೆ ಬೇಸರ

ಅಂಚೆ ಇಲಾಖೆ ಸಮಸ್ಯೆ; ಗ್ರಾಹಕರು ಹೈರಾಣ

Published:
Updated:
Deccan Herald

ತಾಳಿಕೋಟೆ: ಪಟ್ಟಣದಲ್ಲಿನ ಅಂಚೆ ಕಚೇರಿ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸೇವೆ ಒದಗಿಸದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಅಂಚೆ ಕಚೇರಿಯೊಳಗೆ ಕಾಲಿಡುತ್ತಿದ್ದಂತೆ; ಸೇವೆಯ ಬದಲು ಸಿಬ್ಬಂದಿ ಸಬೂಬು ಹೇಳುವುದು, ಕೌಂಟರ್‌ ಮುಂಭಾಗ ಸಹಕಾರವಿರಲಿ ಎಂದು ತಗುಲು ಹಾಕುವ ನಾಮಫಲಕ ಗ್ರಾಹಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.

ಪ್ರಿಂಟರ್ ಕೆಟ್ಟು ಹಾಳಾಗಿದ್ದು, ಎರಡು ತಿಂಗಳಿಂದ ದುರಸ್ತಿ ಕಂಡಿಲ್ಲ. ಇದರ ಪರಿಣಾಮ ಪಿಂಚಣಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಪಿಂಚಣಿದಾರರ ಸಂಕಷ್ಟ ಸಂಬಂಧಿಸಿದ ಯಾರೊಬ್ಬರಿಗೂ ತಿಳಿಯದಾಗಿದೆ.

ಈ ಕಚೇರಿಗೆ ಸಂಬಂಧಿಸಿದಂತೆ ತಿಂಗಳಲ್ಲಿ ಕನಿಷ್ಠ 15ರಿಂದ 20 ಸಾವಿರ ಜನರು ವಹಿವಾಟು ನಡೆಸುತ್ತಿದ್ದಾರೆ. ಇದರಲ್ಲಿ ಬಹುತೇಕರು ಇಲ್ಲಿನ ಅವ್ಯವಸ್ಥೆಗೆ ರೋಸಿ ಹೋಗಿದ್ದಾರೆ. ಇನ್ನಾದರೂ ಇಲಾಖೆಯ ಸಿಬ್ಬಂದಿ ಎಚ್ಚೆತ್ತುಕೊಂಡು, ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎನ್ನುತ್ತಾರೆ ಪಟ್ಟಣದ ಅನಿಲ ಇರಾಜ.

ಇದೀಗ ಆನ್‌ಲೈನ್‌ ವಹಿವಾಟಿನ ಕಾಲ. ಇದೇ ತಿಂಗಳು ಅಂಚೆ ಇಲಾಖೆ ಬ್ಯಾಂಕಿಂಗ್‌ ಸೇವೆಗೆ ತೆರೆದುಕೊಳ್ಳುತ್ತಿದೆ. ಇಂತಹ ಹೊತ್ತಿನಲ್ಲೂ ಗ್ರಾಹಕರಿಗೆ ಸಮರ್ಪಕ ಸೇವೆ ಒದಗಿಸದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಿದ್ಧಾರ್ಥ ಕಟ್ಟಿಮನಿ ಅಸಮಾಧಾನ ವ್ಯಕ್ತಪಡಿಸಿದರು.

ಸಂಕಟದಲ್ಲಿ ಸಿಬ್ಬಂದಿ:

ಹೆಸ್ಕಾಂ ಐಡಿಪಿಡಿಎಸ್ ಯೋಜನೆಯಡಿ ಪಟ್ಟಣದಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳ ಬದಲಾವಣೆ ನಡೆಸಿದೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹತ್ತು ನಿಮಿಷ, ಅರ್ಧ ಗಂಟೆಗೊಮ್ಮೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸಹಜವಾಗಿದೆ.

ಅಂಚೆ ಇಲಾಖೆಯಲ್ಲಿ ವಿದ್ಯುತ್‌ ಕಡಿತಗೊಂಡಾಗ ಪರ್ಯಾಯ ವ್ಯವಸ್ಥೆ ಇಲ್ಲದಿರುವುದು ಗ್ರಾಹಕರಿಗೆ ಸೇವೆ ಸಿಗುವಲ್ಲಿ ವಿಳಂಬವಾಗಿದೆ. ವ್ಯವಹಾರಕ್ಕಾಗಿ ಬಂದವರು ಕಚೇರಿ, ಸಿಬ್ಬಂದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮರಳುವ ದೃಶ್ಯಾವಳಿ ಸಾಮಾನ್ಯವಾಗಿದೆ.

ಅಂಚೆ ಇಲಾಖೆಯ ಎಲ್ಲ ವ್ಯವಹಾರಗಳು ಇದೀಗ ಆನ್‌ಲೈನ್‌. ವಿದ್ಯುತ್ ಸಂಪರ್ಕ ಕಡಿತವಾಗುತ್ತಿದ್ದಂತೆ ಗಣಕ ಯಂತ್ರಗಳು ಸ್ಥಗಿತಗೊಳ್ಳುತ್ತವೆ. ಮತ್ತೆ ಆರಂಭವಾಗುವುದಕ್ಕೆ ಐದರಿಂದ ಹತ್ತು ನಿಮಿಷ ಸಮಯ ತೆಗೆದುಕೊಳ್ಳುತ್ತವೆ. ಆಗ ಸರ್ವರ್ ಇರುವುದಿಲ್ಲ. ಇದರಿಂದಾಗಿ ನೋಟಿಸ್ ಬೋರ್ಡ್‌ನಲ್ಲಿ ಸರ್ವರ್‌ ತೊಂದರೆಯಿದೆ ಸಹಕರಿಸಿ ಎಂಬ ಸೂಚನಾ ಫಲಕ ಆಗಾಗ್ಗೆ ಪ್ರತ್ಯಕ್ಷವಾಗುತ್ತದೆ. ಇದಕ್ಕೆ ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯುತ್‌ಗೆ ಪರ್ಯಾಯವಾಗಿ ಇಲಾಖೆ ಕೊಟ್ಟಿರುವ ಜನರೇಟರ್ ದುರಸ್ತಿಗೆ ಬಂದು ನಾಲ್ಕು ವರ್ಷ ಕಳೆದಿದೆ. ಎರಡು ವರ್ಷದ ಹಿಂದೆ ಒಮ್ಮೆ ದುರಸ್ತಿ ಭಾಗ್ಯ ಕಂಡಿದ್ದ ಜನರೇಟರ್ ಒಂದು ವಾರವೂ ಕೆಲಸ ನಿರ್ವಹಿಸಲಿಲ್ಲವೆಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

ಇನ್ನೂ ಗಣಕಯಂತ್ರಕ್ಕೆ ಜೋಡಣೆಯಾಗಿರುವ ಬ್ಯಾಟರಿಗಳು (ಯುಪಿಎಸ್) ಒಂದೂವರೆ ತಿಂಗಳಿಂದ ತೊಂದರೆ ನೀಡುತ್ತಿವೆ ಎಂಬುದು ಸ್ಥಳೀಯ ಸಿಬ್ಬಂದಿ ಅಳಲು. ನೋಂದಾಯಿತ ಅಂಚೆ ಹಾಗೂ ವೇಗದ ಅಂಚೆ ಕೆಲಸಗಳು ಮಾತ್ರ ಯಾವ ಅಡೆತಡೆಯಿಲ್ಲದೆ ನಡೆದಿವೆ ಎಂದು ಅವರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !