‘ಕೈ’ ಟಿಕೆಟ್‌ಗಾಗಿ ಪ್ರಬಲ ಲಾಬಿ; ‘ಕಮಲ’ ಪಾಳೆಯದಲ್ಲಿ ನಿರುತ್ಸಾಹ..!

7
ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ ಕ್ಷೇತ್ರ; ಟಿಕೆಟ್‌ ಪೈಪೋಟಿಯಲ್ಲಿ ಸುನೀಲಗೌಡ ಬಿ.ಪಾಟೀಲ ಹೆಸರು ಮುಂಚೂಣಿಯಲ್ಲಿ

‘ಕೈ’ ಟಿಕೆಟ್‌ಗಾಗಿ ಪ್ರಬಲ ಲಾಬಿ; ‘ಕಮಲ’ ಪಾಳೆಯದಲ್ಲಿ ನಿರುತ್ಸಾಹ..!

Published:
Updated:

ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜೀನಾಮೆಯಿಂದ ತೆರವಾದ, ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ ಕ್ಷೇತ್ರದ ಒಂದು ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಸೋಮವಾರದಿಂದ ಆರಂಭಗೊಂಡಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾವಿನ ನಡುವೆಯೇ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯತ್ವಕ್ಕೂ ಚುನಾವಣೆ ಆರಂಭಗೊಂಡಿದ್ದು, ‘ಕೈ’ ಪಡೆಯಲ್ಲಿ ಕಲರವ ಹೆಚ್ಚಿದೆ. ಕಮಲ ಪಾಳೆಯದಲ್ಲಿ ಇನ್ನೂ ಹುರುಪು ಬಿರುಸುಗೊಂಡಿಲ್ಲ.

ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯರ ಆಯ್ಕೆ ನಡೆಯಲಿದ್ದು, ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವುದರಿಂದ ಕಾಂಗ್ರೆಸ್‌ ಪಾಲಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.

ಅಭ್ಯರ್ಥಿ ಆಯ್ಕೆಯಲ್ಲಿ ಸಿದ್ದರಾಮಯ್ಯ ಮಹತ್ವದ ಪಾತ್ರ ನಿಭಾಯಿಸಲಿದ್ದಾರೆ. ಇದರ ಅರಿವಿರುವ ಅವಳಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಟಿಕೆಟ್‌ಗಾಗಿ ಸಿದ್ದರಾಮಯ್ಯ ಸುತ್ತಲೇ ಗಿರಕಿ ಹೊಡೆಯಲಾರಂಭಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಿಂದ ವಿಜಯಾನಂದ ಕಾಶಪ್ಪನವರ ಪ್ರಮುಖ ಆಕಾಂಕ್ಷಿಯಾಗಿದ್ದರೆ; ಇದಕ್ಕೆ ಸ್ಥಳೀಯರಾದ ಎಸ್‌.ಆರ್‌.ಪಾಟೀಲ, ಎಚ್‌.ವೈ.ಮೇಟಿ, ಆರ್‌.ಬಿ.ತಿಮ್ಮಾಪುರ ಸೇರಿದಂತೆ ಇನ್ನಿತರೆ ಪ್ರಮುಖರು ಅಡ್ಡಿಯಾಗಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ವಿಜಯಪುರ ಜಿಲ್ಲೆಯಿಂದ ಯಥಾಪ್ರಕಾರ ಮಾಜಿ ಶಾಸಕ ಶರಣಪ್ಪ ಸುಣಗಾರ ಮಲ್ಲಿಕಾರ್ಜುನ ಖರ್ಗೆ ಮೊರೆ ಹೊಕ್ಕಿದ್ದಾರೆ. ಗಾಣಿಗ ಸಮಾಜದ ಮುಖಂಡ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಈಗಾಗಲೇ ತಮ್ಮ ಒಡನಾಟ ಬಳಸಿಕೊಂಡು ಸಿದ್ದರಾಮಯ್ಯ ಭೇಟಿಯಾಗಿ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ.

ಕಾಂಗ್ರೆಸ್‌ನ ಪ್ರಭಾವಿ ಮುಖಂಡ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಸಹೋದರ ಸುನೀಲಗೌಡ ಬಿ.ಪಾಟೀಲ ಅಖಾಡಕ್ಕಿಳಿಯಲು ಈಗಾಗಲೇ ಸಕಲ ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ಹಿರಿಯರು, ಅವಳಿ ಜಿಲ್ಲೆಯ ಮುಖಂಡರನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ಬೆಂಬಲ ಕೋರಿದ್ದಾರೆ. ಇದಕ್ಕೆ ಅಣ್ಣನ ಆಶೀರ್ವಾದವೂ ದೊರೆತಿದೆ ಎಂಬುದು ಮೂಲಗಳಿಂದ ಖಚಿತಪಟ್ಟಿದೆ. ಸುನೀಲಗೌಡ ಪ್ರವೇಶ ಅವಳಿ ಜಿಲ್ಲೆಯ ರಾಜಕಾರಣದ ರಂಗೇರಿಸಿದೆ.

ವಿಜಯಪುರ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಬಣ ರಾಜಕಾರಣ ಯಾವ ತಿರುವು ಪಡೆಯಲಿದೆ. ಎಲ್ಲರೂ ಒಟ್ಟಾಗಿ ಚುನಾವಣೆ ಮಾಡುತ್ತಾರೋ ? ಇಲ್ಲಾ ಯಥಾಪ್ರಕಾರ ತಮ್ಮೊಳಗಿನ ಶೀತಲ ಸಮರದ ಜಿದ್ದಿಗೆ ಬೀಳುತ್ತಾರೋ ಎಂಬುದರ ಮೇಲೆ ಟಿಕೆಟ್‌ ಅಂತಿಮಗೊಳ್ಳಲಿದೆ. ಇದಕ್ಕಿಂತಲೂ ಎಂ.ಬಿ.ಪಾಟೀಲ ತಮ್ಮನಿಗಾಗಿ ಎಐಸಿಸಿ ಅಂಗಳದಲ್ಲಿ ತಮ್ಮ ಪ್ರಭಾವ ಬೀರಲಿದ್ದಾರೋ ? ಎಂಬುದು ಇಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಸಿದ್ದರಾಮಯ್ಯ ಮಾಜಿ ಸಚಿವ ಸಿ.ಎಸ್‌.ನಾಡಗೌಡ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾಡಗೌಡ ಸ್ಪರ್ಧೆಯಿಂದ ಕ್ಷೇತ್ರವನ್ನು ಸುಲಭವಾಗಿ ಕೈ ವಶ ಪಡಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಒಂದೆರೆಡು ದಿನಗಳಲ್ಲಿ ಅಭ್ಯರ್ಥಿ ಯಾರು ಎಂಬುದರ ಸ್ಪಷ್ಟ ಚಿತ್ರಣ ಹೊರಹೊಮ್ಮುವ ನಿರೀಕ್ಷೆಯಿದೆ ಎಂದು ಗೊತ್ತಾಗಿದೆ.

ಹುರುಪಿಲ್ಲ:  ಆಕಾಂಕ್ಷಿಗಳನ್ನು ಹೊರತುಪಡಿಸಿದರೆ, ಕಮಲ ಪಾಳೆಯದ ಕಾರ್ಯಕರ್ತರು, ಮುಖಂಡರಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚಿನ ಹುರುಪು ಕಂಡು ಬರುತ್ತಿಲ್ಲ. ಇದು ಬಿಜೆಪಿ ನಾಯಕರ ತಳಮಳಕ್ಕೆ ಕಾರಣವಾಗಿದೆ.

ಯಡಿಯೂರಪ್ಪ ಇದೇ 16ರಂದು ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭವೇ ಅವಳಿ ಜಿಲ್ಲೆಯ ನೇತಾರರ ಜತೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಅಖೈರುಗೊಳಿಸಲಿದ್ದಾರೆ ಎನ್ನಲಾಗುತ್ತಿದೆ.

ಬಿಎಸ್‌ವೈ ಕೆಜೆಪಿ ಸೇರ್ಪಡೆಯಾದ ಸಂದರ್ಭ, ಅವರೊಟ್ಟಿಗೆ ಗುರುತಿಸಿಕೊಂಡು ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉಮೇಶ ಮಹಾಬಲಶೆಟ್ಟಿ, ಇದೀಗ ಮುರಗೇಶ ನಿರಾಣಿ ಬೆಂಬಲದಿಂದ ಟಿಕೆಟ್‌ ಲಾಬಿ ಬಿರುಸುಗೊಳಿಸಿದ್ದಾರೆ.

ಇಳಕಲ್‌ನ ಅರವಿಂದ ಮಂಗಳೂರ ಸಹ ಕಮಲ ಟಿಕೆಟ್‌ಗೆ ಯತ್ನಿಸಿದ್ದು, ಜಗದೀಶ ಶೆಟ್ಟರ್ ಮೂಲಕ ಯತ್ನ ಮುಂದುವರೆಸಿದ್ದಾರೆ. ಪಿ.ಎಚ್‌.ಪೂಜಾರ, ಪ್ರಕಾಶ ತಪಶೆಟ್ಟಿ, ಜಿ.ಎಸ್‌.ನ್ಯಾಮಗೌಡ ಪಕ್ಷ ಗುರುತಿಸಿ ಅವಕಾಶ ಒದಗಿಸಲಿ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಶಂಭು ಕಕ್ಕಳಮೇಲಿ ಹೆಸರು ವಿಜಯಪುರ ಜಿಲ್ಲೆಯಿಂದ ಪ್ರಬಲವಾಗಿ ಕೇಳಿ ಬರುತ್ತಿದೆ. ಸಂಘ ಪರಿವಾರದ ಬೆಂಬಲದಿಂದ ಟಿಕೆಟ್‌ ಗಿಟ್ಟಿಸುವ ಆತ್ಮವಿಶ್ವಾಸವನ್ನು ಶಂಭು ವ್ಯಕ್ತಪಡಿಸುತ್ತಿದ್ದು, ಜಿಲ್ಲೆಯ ಯಾವೊಬ್ಬ ಸ್ಥಳೀಯ ನಾಯಕರು ಸಾಥ್‌ ನೀಡದಿರುವುದಕ್ಕೆ ತಮ್ಮ ಆಪ್ತ ವಲಯದಲ್ಲಿ ಬೇಸರವನ್ನೂ ಹೊರಹಾಕಿದ್ದಾರೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ಗೂಳಪ್ಪ ಶಟಗಾರ ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದು, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಇನ್ನಿತರ ಮುಖಂಡರ ಬಳಿ ಟಿಕೆಟ್‌ಗೆ ಎಡತಾಕುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !