ಶುಕ್ರವಾರ, ನವೆಂಬರ್ 15, 2019
22 °C
ವಿಜಯಪುರ: ಸಕಾಲಕ್ಕೆ ಬಾರದ ವಸತಿ ಯೋಜನೆಗಳ ಅನುದಾನ l ಫಲಾನುಭವಿಗಳ ಮುಗಿಯದ ಪರದಾಟ

ಕನಸಾಗಿಯೇ ಉಳಿದ ಗುಡಿಸಲು ಮುಕ್ತ ಬದುಕು

Published:
Updated:
Prajavani

ವಿಜಯಪುರ: ಗುಡಿಸಲು ಮುಕ್ತ ರಾಜ್ಯ ನಿರ್ಮಾಣವಾಗಬೇಕು ಎನ್ನುವ ಕಲ್ಪನೆಯನ್ನು ಇಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ವಸತಿ ಯೋಜನೆಗಳ ಅನುದಾನ ಸಕಾಲಕ್ಕೆ ಬಾರದೆ ಮನೆಗಳ ನಿರ್ಮಾಣ ಪೂರ್ಣಗೊಳ್ಳದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ವಸತಿರಹಿತ, ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಮಾಡಿ, ಗ್ರಾಮಸಭೆಗಳಲ್ಲಿ ಆಯ್ಕೆ ಮಾಡಿ, ಅನುಮೋದಿಸಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಎಲ್ಲಾ ಪಂಚಾಯಿತಿಗಳು ಎರಡು ವರ್ಷ ಗಳ ಹಿಂದೆ ಪಟ್ಟಿಯನ್ನು ರವಾನಿಸಿವೆ.

ಮನೆಗಳ ನಿರ್ಮಾಣದ ಗುರಿಯನ್ನು ಪಂಚಾಯಿತಿಗಳು ಪೂರ್ಣಗೊಳಿಸಬೇಕಾದರೆ, ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿರುವ ಪಟ್ಟಿಯಲ್ಲಿನ ಫಲಾನುಭವಿಗಳನ್ನೇ ಆಯ್ಕೆ ಮಾಡಬೇಕು. ಒಮ್ಮೆ ಒಬ್ಬ ಫಲಾನುಭವಿಯನ್ನು ಆಯ್ಕೆ ಮಾಡಿದ ಬಳಿಕ ಮನೆಯ ನಿರ್ಮಾಣಕ್ಕೆ ಒಂದು ಬಾರಿ ಅನುದಾನ ಬಿಡುಗಡೆಯಾಗಿ ನಂತರ, ಸದರಿ ಫಲಾನುಭವಿ ತನ್ನ ಮನೆಯ ಕೆಲಸವನ್ನು ಪೂರ್ಣಗೊಳಿಸದಿದ್ದರೆ ಪುನಃ ಸದರಿ ಗ್ರಾಮದಲ್ಲಿನ ಇತರ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅನುದಾನ ಸಿಗುವುದಿಲ್ಲ.

ಸರ್ಕಾರವೇ ನಿಗದಿತ ಸಮಯಕ್ಕೆ ಅನುದಾನ ಬಿಡುಗಡೆ ಮಾಡದೆ ಇರುವ ಕಾರಣ ಸಾಕಷ್ಟು ಫಲಾನುಭವಿ ಗಳು ಮನೆ ನಿರ್ಮಾಣದ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಉಳಿದ ಫಲಾನುಭವಿಗಳು ಮನೆ ನಿರ್ಮಾಣ ಮಾಡಲಾಗದೆ ಪರದಾಡುವಂತಾಗಿದೆ.

ಪುರಸಭೆಯ ವ್ಯಾಪ್ತಿಯಲ್ಲಿ ವಾಜಪೇಯಿ ಆವಾಸ್ ಯೋಜನೆ, ಅಂಬೇಡ್ಕರ್ ಆವಾಸ್ ಯೋಜನೆಗಳ ಮೂಲಕ ಮನೆಗಳ ನಿರ್ಮಾಣಕ್ಕೆ ಸಹಾಯಧನ ಕೊಡಲು ಅವಕಾಶವಿದೆ. ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಅಂಬೇಡ್ಕರ್ ಆವಾಸ್ ಯೋಜನೆಯಡಿ ಮಾತ್ರವೇ ಸಹಾಯಧನ ಬಿಡುಗಡೆ ಮಾಡಲಿಕ್ಕೆ ಅವಕಾಶವಿದೆ. ವಾಜಪೇಯಿ ಆವಾಸ್ ಯೋಜನೆಯಡಿ ಇತರ ಎಲ್ಲ ವರ್ಗದ ಜನರಿಗೆ ಅನುದಾನ ಸಿಗುತ್ತಿದೆ.

ಜನರಿಂದ ಬರುವ ಅರ್ಜಿ, ಸ್ಥಳೀಯ ಪುರಸಭಾ ಸದಸ್ಯರು ನೀಡಿ ರುವ ವಸತಿ ರಹಿತ, ನಿವೇಶನ ರಹಿತ ಫಲಾನುಭವಿಗಳ ಅರ್ಜಿಗಳನ್ನು ಪಟ್ಟಿ ಮಾಡಿ, ಶಾಸಕರ ನೇತೃತ್ವದ ಸಮಿತಿಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಜಿಲ್ಲಾಧಿಕಾರಿ ಕಚೇರಿಯ ಮೂಲಕ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿಕೊಡಲಾಗಿದೆ. ಬೇಡಿಕೆ ಪಟ್ಟಿಯನ್ನು ಆಧರಿಸಿ ಗುರಿಯನ್ನು ನೀಡಿದರೂ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿರುವ ಕಾರಣ ಸಾಕಷ್ಟು ಫಲಾನುಭವಿಗಳಿಗೆ ಸರಿಯಾಗಿ ಅನುದಾನ ಬಿಡುಗಡೆಯಾಗದೆ ಕಾರಣ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಗ್ರಾಮ ಪಂಚಾಯಿತಿ ಹಂತದಲ್ಲಿ ತಳಪಾಯದ ಪೋಟೊ ತೆಗೆದು ಜಿ.ಪಿ.ಎಸ್. ಗುರುತು ಮಾಡಬೇಕು. ಮನೆಯ ನಿರ್ಮಾಣದ ಜಾಗವನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ನಂತರ ರಾಜೀವ್‌ಗಾಂಧಿ ವಸತಿನಿಗಮದಲ್ಲಿ ಆಡಿಟ್ ಆದ ಮೇಲೆ ಮೊದಲ ಕಂತಿನ ಹಣ ಫಲಾನುಭವಿ ಖಾತೆಗೆ ಜಮಾ ಆಗುತ್ತದೆ. ನಂತರ ಗೋಡೆಗಳ ನಿರ್ಮಾಣ, ಲಿಂಟಲ್ ಹಂತದ ಪೋಟೊ ತೆಗೆಸಬೇಕು. ನಂತರ ಛಾವಣಿ ಹಂತ, ನಂತರ ಪೂರ್ಣಗೊಂಡ ನಂತರ ಅಂತಿಮ ಬಿಲ್ಲಿನ ಕಂತು (ಒಟ್ಟು ನಾಲ್ಕು ಕಂತುಗಳಲ್ಲಿ) ಹಣ ಬಿಡುಗಡೆಯಾಗುತ್ತದೆ.

ಎರಡು ವರ್ಷಗಳಿಂದ ಅಂಬೇಡ್ಕರ್ ಆವಾಸ್ ಯೋಜನೆಯಡಿ ಒಂದೇ ಒಂದು ಮನೆಗೆ ಅನುದಾನ ಕೊಟ್ಟಿಲ್ಲ. ಅದಕ್ಕೂ ಮುಂಚೆ ಮನೆಗಳು ನಿರ್ಮಾಣ ಮಾಡಿಕೊಂಡಿರುವವರಿಗೂ ಕೆಲವರಿಗೆ ಹಣ ಬಿಡುಗಡೆಯಾಗದೆ ಮನೆಗಳ ನಿರ್ಮಾಣ ಅಪೂರ್ಣಗೊಂಡು ಫಲಾನುಭವಿಗಳು ಪರದಾಡುತ್ತಿದ್ದಾರೆ. ಪೂರ್ಣಗೊಳಿಸಿಕೊಳ್ಳಲು ಹಣವೂ ಇಲ್ಲದೆ, ಸರ್ಕಾರದಿಂದಲೂ ಬಿಡುಗಡೆಯಾಗದೆ ಬಕಪಕ್ಷಿಗಳಂತೆ ಕಾದು ಕುಳಿತುಕೊಳ್ಳಬೇಕಾಗಿರುವ ಸ್ಥಿತಿ ನಿರ್ಮಾಣವಾಗಿದೆ.

ಬಸವ ವಸತಿ ಯೋಜನೆ: ಪಂಚಾಯಿತಿ ಹಂತದಲ್ಲಿ ಬಸವ ವಸತಿ ಯೋಜನೆಯಡಿ ಎಲ್ಲ ಸಮುದಾಯಗಳಿಗೆ ಮನೆಗಳ ನಿರ್ಮಾಣಕ್ಕೆ ಅನುದಾನ ಸಿಗುತ್ತಿತ್ತು. ಈಗ ಕೇವಲ ಸಾಮಾನ್ಯ ವರ್ಗದ ಜನರಿಗೆ ಮಾತ್ರವೇ ಈ ಯೋಜನೆಯಡಿ ಅವಕಾಶ ಕಲ್ಪಿಸಿಕೊಟ್ಟಿರುವ ಕಾರಣದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಆರ್ಥಿಕ ಹೊಂದಾಣಿಕೆಯ ಕೊರತೆಯ ಕಾರಣದಿಂದಾಗಿ ಬಡವರ ಮನೆಗಳ ನಿರ್ಮಾಣದ ಕನಸು ಭಗ್ನಗೊಳ್ಳುತ್ತಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಾದ ನಂತರ ಬಂದ ಸರ್ಕಾರಗಳು, ವಸತಿ ಯೋಜನೆಯ ಕುರಿತು ಗಮನಹರಿಸಿಲ್ಲ. ಅನುದಾನವೂ ಬಿಡುಗಡೆ ಮಾಡುತ್ತಿಲ್ಲ. ಮನೆಗಳಿಗೆ ಬಿಡುಗಡೆಯಾಗಬೇಕಾದ ನಾನಾ ಕಂತಿನ ಹಣ ಇದುವರೆಗೂ ಬಿಡುಗಡೆಯಾಗಿಲ್ಲ.

ಕೇಂದ್ರ ಸರ್ಕಾರದ ಬಜೆಟ್ ಘೋಷಣೆಯಂತೆ ರಾಜ್ಯದ
ಅಂಬೇಡ್ಕರ್ ವಸತಿ ಯೋಜನೆಗೆ ಅನುದಾನ ಬಿಡುಗಡೆಯಾಗದಿರುವ ಕಾರಣ ರಾಜ್ಯ ಸರ್ಕಾರ ಯೋಜನೆಯ ಬಗ್ಗೆ ಕಾಳಜಿವಹಿಸುತ್ತಿಲ್ಲ. ಈ ಹಣ ಬಿಡುಗಡೆಗೆ ಕೋರಿ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಪುರಸಭೆಯ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಫಲಾನುಭವಿಗಳೂ ಕೂಡಾ ಸ್ವತಃ ತಾವೇ ಮನವಿಗಳನ್ನು ಸಲ್ಲಿಸಿದ್ದರೂ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ.

ಕೆಲವು ಫಲಾನುಭವಿಗಳು ಹೇಳುವ ಪ್ರಕಾರ, ಖಾತೆಗಳಿಗೆ ಹಣ ಜಮೆಯಾದ ನಂತರ ಪುನಃ ಇದ್ದಕಿದ್ದಂತೆ ವಾಪಸ್‌ ಪಡೆಯಲಾಗಿದೆ. ಖಾತೆಗಳಲ್ಲಿ ಹಣ ಇದ್ದಕಿದ್ದಂತೆ ವಾಪಸಾಗಿರುವುದರಿಂದ ಕೆಲವು ಬ್ಯಾಂಕುಗಳಲ್ಲಿ ಫಲಾನುಭವಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಮಧ್ಯೆ ವಾಗ್ವಾದಗಳೂ ನಡೆದಿವೆ. ಆದರೆ, ಈ ಬಗ್ಗೆ ರಾಜೀವ್‌ಗಾಂಧಿ ವಸತಿ ನಿಗಮದ ಅಧಿಕಾರಿಗಳು, ಇದು ತಾಂತ್ರಿಕ ಸಮಸ್ಯೆಯಿಂದ ಆಗಿದೆ ಎಂದು ಹೇಳಿದ್ದರೆ ಹೊರತು ಪುನಃ ಯಾವಾಗ ವಾಪಸ್‌ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತದೆ ಎನ್ನುವ ಬಗ್ಗೆ ಖಾತರಿ ಪಡಿಸಿಲ್ಲ ಎಂದು ಮುಖಂಡ ಅಶೋಕ್‌ ಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆರಿಗೆ ಹಣ ಎಲ್ಲಿ ಹೋಯಿತು?

ಸರ್ಕಾರ ಎಲ್ಲಾ ಯೋಜನೆಗಳಿಗೂ ಕೋಟ್ಯಂತರ ರೂಪಾಯಿ ಅನುದಾನ ಕೊಡುತ್ತಿದೆ. ಬಡವರ ಮನೆಗೆ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಜನರು ಕಟ್ಟುತ್ತಿರುವ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ. ಸರ್ಕಾರ ಬಡವರ ಪರ ಗಮನಹರಿಸಲಿ.

  ಕೆ.ಮಂಜುನಾಥ್ ಸ್ಥಳೀಯ ನಿವಾಸಿ

ಜನರಿಗೆ ಅನ್ಯಾಯ

ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡಲು ಆಗುತ್ತಿಲ್ಲ. ಬಡವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ಬಿಡುಗಡೆ ಮಾಡಬೇಕಾಗಿರುವ ಅನುದಾನ ಬಿಡುಗಡೆ ಮಾಡದೆ ಇರುವ ಕಾರಣ ತುಂಬಾ ಜನಕ್ಕೆ ಅನ್ಯಾಯವಾಗುತ್ತಿದೆ.
 ರಘು ಹಳಿಯೂರು ಗ್ರಾಮ ಪಂಚಾಯಿತಿ ಸದಸ್ಯ

ಮನೆ ಕಟ್ಟಿಕೊಳ್ಳುವುದು ಹೇಗೆ?

ಹೊಸ ಸರ್ಕಾರಗಳು ಬಂದಾಗಲೆಲ್ಲಾ ಸರ್ಕಾರದಲ್ಲಾದರೂ ಹೊಸ ಯೋಜನೆಗಳು ಜಾರಿಯಾಗುತ್ತವೆ ಎನ್ನುವ ನಂಬಿಕೆ ಜನರಲ್ಲಿರುತ್ತದೆ. ಬಡವರು ಈ ಸರ್ಕಾರದಲ್ಲಿ ಅನುದಾನ ಹೆಚ್ಚು ಮಾಡ್ತಾರೆ ಎಂಬ ಆಶಾಭಾವನೆಯಿಂದ ಕಾಯುತ್ತಾರೆ. ಆದರೆ, ಬಂದ ಸರ್ಕಾರ ಅನುದಾನ ಹೆಚ್ಚಿಸುವುದಿರಲಿ ಯೋಜನೆ ಕೈ ಬಿಟ್ಟರೆ ಮನೆ ಕಟ್ಟಿಕೊಳ್ಳುವುದು ಹೇಗೆ?

ಶಿವಕುಮಾರ್ ಮಂಡಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ

ಅನುದಾನ ಹೆಚ್ಚಿಸಿ

ಸರ್ಕಾರಗಳು, ಬಡವರ ಮನೆಗಳ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವುದರ ಪರಿಣಾಮವಾಗಿ ಅಂಬೇಡ್ಕರ್ ಆವಾಸ್ ಯೋಜನೆಯಡಿ ಬಡವರಿಗೆ ಹಣ ಬಿಡುಗಡೆಯಾಗಿಲ್ಲ. ಈ ವರ್ಷಕ್ಕೆ ಗುರಿಯನ್ನೂ ಕೊಟ್ಟಿಲ್ಲ ಹೀಗಾದರೆ ರಾಜ್ಯ ಗುಡಿಸಲು ಮುಕ್ತವಾಗಲು ಸಾಧ್ಯವೇ?     ರವಿಕುಮಾರ್ ಸ್ಥಳೀಯ ನಿವಾಸಿ

ನಿವೇಶನವೇ ಸಿಕ್ಕಿಲ್ಲ

ಪಟ್ಟಣದಲ್ಲಿ ಶೇ 40ರಷ್ಟು ಮಂದಿ ಬಾಡಿಗೆ ಮನೆಗಳಲ್ಲೆ ವಾಸವಾಗಿದ್ದಾರೆ. ಪುರಸಭೆಯಿಂದ ಇದುವರೆಗೂ ನಿವೇಶನ ನೀಡಿಲ್ಲ. ಮನೆ ಕಟ್ಟುವುದೆಲ್ಲಿ? ಸರ್ಕಾರ ಬಡವರ ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಬಾಕಿ ಉಳಿಸಿಕೊಂಡಿರುವ ಹಣ ಬಿಡುಗಡೆ ಮಾಡಬೇಕು.

ರಜನಿ ಕನಕರಾಜು ಸ್ಥಳೀಯ ನಿವಾಸಿ

ಪ್ರತಿಕ್ರಿಯಿಸಿ (+)