ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಗೌರವ ಗರಿಷ್ಠ ಮಟ್ಟಕ್ಕೆ ಏರಿಕೆ

ಎನ್‌ಡಿಎ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಅಭಿಯಾನ
Last Updated 25 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ದೇಶದ ಜನರ ಆತ್ಮಗೌರವ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಈ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಂದಾಗಿ 22 ಕೋಟಿ ಬಡ ಕುಟುಂಬಗಳು ಪ್ರಯೋಜನ ಪಡೆದಿವೆ. ಬಡವರಪರ ಸರ್ಕಾರವೊಂದು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಒಂದು ನಿದರ್ಶನದಂತೆ ತಮ್ಮ ಸರ್ಕಾರ ಕೆಲಸ ಮಾಡಿದೆ ಎಂದು ಶಾ ಪ್ರತಿಪಾದಿಸಿದ್ದಾರೆ.

ಕೇಂದ್ರ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವಕ್ಕೆ ಸಂಬಂಧಿಸಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಅವರು ಮಾತನಾಡಿದರು.

‘ಸಾಫ್‌ ನಿಯತ್‌, ಸಹೀ ವಿಕಾಸ್‌’ (ಪರಿಶುದ್ಧ ಉದ್ದೇಶ, ಸರಿಯಾದ ಅಭಿವೃದ್ಧಿ) ಎಂಬ ಘೋಷಣೆಯನ್ನು ಈ ಸಂದರ್ಭದಲ್ಲಿ ಅವರು ಅನಾವರಣಗೊಳಿಸಿದರು. ಸರ್ಕಾರದ ಸಾಧನೆಗಳನ್ನು ದೇಶದಾದ್ಯಂತ ಪ್ರಚಾರ ಮಾಡಲು ಈ ಘೋಷಣೆ ಬಳಕೆಯಾಗಲಿದೆ.

2019ರ ಲೋಕಸಭಾ ಚುನಾವಣೆಗೆ ಪಕ್ಷ ಸಿದ್ಧತೆ ತೊಡಗಿದೆ ಎಂಬುದನ್ನು ಶಾ ಅವರು ಈ ಮೂಲಕ ಸೂಚಿಸಿದ್ದಾರೆ.

ಪರಿವರ್ತನೆ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ‘ಭಾರತ ಪರಿವರ್ತನೆಯ 48 ತಿಂಗಳು’ ಎಂಬ ವಿಚಾರದಲ್ಲಿ ವಿಷಯ ಮಂಡನೆ ಮಾಡಿದರು.

2014ರಲ್ಲಿ ನೈರ್ಮಲ್ಯ ಸೌಲಭ್ಯ ಹೊಂದಿದ್ದವರ ಪ್ರಮಾಣ ಶೇ 38 ಮಾತ್ರ. ಆದರೆ 2018ರಲ್ಲಿ ಇದು ಶೇ 88ಕ್ಕೆ ಏರಿದೆ. ಒಟ್ಟು 7.25 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 3.6 ಲಕ್ಷ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲಾಗಿದೆ ಎಂದು ನಿರ್ಮಲಾ ಹೇಳಿದರು.

ಜನಧನ ಖಾತೆಗಳು, ಒಟ್ಟು ದೇಶೀ ಉತ್ಪನ್ನದಲ್ಲಿ ಏರಿಕೆ, ರೈತರ ಆದಾಯ ದ್ವಿಗುಣಗೊಳಿಸಲು ನಡೆಸಿದ ಪ್ರಯತ್ನಗಳ ಬಗ್ಗೆಯೂ ಅವರು ಮಾತನಾಡಿದರು.

ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ ಮತ್ತು ಸುಷ್ಮಾ ಸ್ವರಾಜ್‌ ಅವರು ಉಪಸ್ಥಿತರಿದ್ದರು.

ಅಮೇಠಿ ಗೆಲುವಿನ ವಿಶ್ವಾಸ: ‘ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿಕೂಟವನ್ನು ಎದುರಿಸುವುದು ಬಿಜೆಪಿಗೆ ದೊಡ್ಡ ಸವಾಲಾಗುತ್ತದೆ. ಆದರೆ ಅಮೇಠಿ ಅಥವಾ ರಾಯ್‌ಬರೇಲಿಯಲ್ಲಿ ಒಂದನ್ನು ಗೆದ್ದೇ ಗೆಲ್ಲುತ್ತೇವೆ’ ಎಂದು ಬಿಜೆಪಿ ಮುಖಂಡರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

**

ವೈಫಲ್ಯಗಳ ಬಗ್ಗೆ ಕಾಂಗ್ರೆಸ್‌ ಅಭಿಯಾನ

ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಹೇಳಿಕೊಳ್ಳಲು ಬಿಜೆಪಿ ಹೊರಟಿರುವಾಗಲೇ, ವೈಫಲ್ಯಗಳ ಬಗ್ಗೆ ಸಾಮಾಜಿಕ ಜಾಲತಾಣದ ಅಭಿಯಾನವನ್ನು ಕಾಂಗ್ರೆಸ್‌ ಪಕ್ಷ ಆರಂಭಿಸಿದೆ. ಕೃಷಿ ಕ್ಷೇತ್ರದ ಸಂಕಷ್ಟ, ಏರುತ್ತಲೇ ಇರುವ ತೈಲ ಬೆಲೆ, ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

ವಿವಿಧ ಸಮಸ್ಯೆಗಳಿಂದಾಗಿ ದೇಶದ ಜನರು ಎದುರಿಸುತ್ತಿರುವ ಕಷ್ಟಗಳನ್ನು ವಿವರಿಸುವ ವಿಡಿಯೊವೊಂದನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ‘4 ಸಾಲ್‌ ದೇಶ್‌ ಬೆಹಾಲ್‌’ (ನಾಲ್ಕು ವರ್ಷ, ದೇಶಕ್ಕೆ ಸಂಕಷ್ಟ) ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಕಾಂಗ್ರೆಸ್‌ ಅಭಿಯಾನ ನಡೆಸುತ್ತಿದೆ.

**

ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಏನನ್ನಾದರೂ ಹೇಳುವುದಿದ್ದರೆ ಅದು ಖಾಲಿ ಘೋಷಣೆಗಳು ಮತ್ತು ಪೊಳ್ಳು ಭರವಸೆಗಳು ಮಾತ್ರ.

ಅಶೋಕ್‌ ಗೆಹ್ಲೋಟ್‌ , ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT