ಭಾನುವಾರ, ನವೆಂಬರ್ 17, 2019
20 °C
ಬಿಎಲ್‌ಡಿಇ ಸಂಸ್ಥೆಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಾರಂಭ

ಪ್ರಸವ ಪೂರ್ವ ಕೌನ್ಸೆಲಿಂಗ್ ಕೇಂದ್ರ

Published:
Updated:
Prajavani

ವಿಜಯಪುರ: ಪ್ರಸವ ಪೂರ್ವ ತೊಂದರೆಗಳನ್ನು ಗಮನಿಸಿ, ಪ್ರಸವ ಪೂರ್ವದಲ್ಲಿಯೇ ಸಮಾಲೋಚನೆ ಮೂಲಕ ಪರಿಹಾರ ಕಂಡುಕೊಳ್ಳುವ ಕೇಂದ್ರವನ್ನು ಬಿಎಲ್‌ಡಿಇ ಸಂಸ್ಥೆಯ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ.

ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಡಾ.ಎಂ.ಎಸ್.ಬಿರಾದಾರ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಸ್.ವಿ.ಪಾಟೀಲ ಕನಮಡಿ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಅರವಿಂದ ಪಾಟೀಲ, ‘ಬಿಎಲ್‌ಡಿಇ ಆಸ್ಪತ್ರೆಯಲ್ಲಿ 2010ರಲ್ಲಿ 20 ಹಾಸಿಗೆ ಸಾಮರ್ಥ್ಯದ ಚಿಕ್ಕಮಕ್ಕಳ ತುರ್ತು ನಿಗಾ ಘಟಕ (ಎನ್‌ಐಸಿಯು)ವನ್ನು ಆರಂಭಿಸಲಾಗಿತ್ತು. ಹೊಸದಾಗಿ ಇನ್ನೊಂದು ಘಟಕವನ್ನು ಆರಂಭಿಸಲಾಗಿದ್ದು, 40 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಅತ್ಯಂತ ಕಡಿಮೆ ಶುಲ್ಕದಲ್ಲಿ 24/7 ಸೇವೆ ನೀಡಲಾಗುತ್ತಿದೆ’ ಎಂದರು.

‘ನವಜಾತ ಶಿಶುಗಳ ರಕ್ಷಣೆಗಾಗಿ ಸಂಚಾರಿ ಇನ್‌ಕ್ಯುಬೇಟರ್‌ ಸೌಲಭ್ಯ ಲಭ್ಯವಿದ್ದು, ನಗರ ಹಾಗೂ ಸುತ್ತಲಿನ ಪ್ರದೇಶಗಳ ಯಾವುದೇ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿಗೆ ಕರೆತರಲು ಇನ್‌ಕ್ಯುಬೇಟರ್‌ ಅನ್ನು ಉಪಯೋಗಿಸಲಾಗುತ್ತಿದೆ’ ಎಂದು ಹೇಳಿದರು.

‘ನವಜಾತ ಶಿಶುಗಳಲ್ಲಿ ಶ್ರವಣದೋಷವನ್ನು ಪತ್ತೆ ಹಚ್ಚುವ ಸೌಲಭ್ಯ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಇದನ್ನು ಉಚಿತವಾಗಿ ಮಾಡಲಾಗುತ್ತಿದೆ. ನವಜಾತ ಶಿಶುಗಳ ಆರೈಕೆಗಾಗಿ ಶೀತಲೀಕರಣ ಯಂತ್ರ ಸೌಲಭ್ಯ ಲಭ್ಯವಿದ್ದು, ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಸಾರ ಗುಣಮಟ್ಟದ ಆರೈಕೆ ಹಾಗೂ ಚಿಕಿತ್ಸೆ ನೀಡಲು ಅಮೆರಿಕದ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ನಮ್ಮ ಆಸ್ಪತ್ರೆಯಲ್ಲಿ ಜನಿಸುವ ಎಲ್ಲಾ ಹೆಣ್ಣು ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಪ್ರೋತ್ಸಾಹದ ಮೇರೆಗೆ ಮಗು ಬೆಳೆದು 18 ವರ್ಷವಾಗುವವರೆಗೆ ಪ್ರತಿ ಬಾರಿ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ₹1ಸಾವಿರ ರಿಯಾಯಿತಿ ನೀಡಲಾಗುತ್ತಿದೆ’ ಎಂದು ಹೇಳಿದರು.

ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಡಾ.ಮಹಾಂತೇಶ ಬಿರಾದಾರ, ಡಾ.ಎಂ.ಎಂ.ಪಾಟೀಲ, ಡಾ.ಸಿದ್ದು ಚರಕಿ ಇದ್ದರು.  

ಪ್ರತಿಕ್ರಿಯಿಸಿ (+)