21ಕ್ಕೆ ಸುಂದರೇಶ್ ನೆನಪು; ಹಲವು ಸಮಸ್ಯೆಗಳ ಚರ್ಚೆ

7

21ಕ್ಕೆ ಸುಂದರೇಶ್ ನೆನಪು; ಹಲವು ಸಮಸ್ಯೆಗಳ ಚರ್ಚೆ

Published:
Updated:
Deccan Herald

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಡಿ. 21ರ ಬೆಳಿಗ್ಗೆ 10ಕ್ಕೆ ರೈತ ಸಂಘದ ಸಂಸ್ಥಾಪಕ ಎನ್.ಡಿ. ಸುಂದರೇಶ್‌ ಅವರ ನೆನಪಿನ ಸಭೆ ಆಯೋಜಿಸಲಾಗಿದೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿರುವ ಈ ಸಭೆಯಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ಕುರಿತು ಚರ್ಚಿಸಲಾಗುವುದು. ಸಂಪೂರ್ಣ ಸಾಲ ಮನ್ನಾ, ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಂಬಲ ಬೆಲೆ ನೀಡಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ವಿಮಾ ಕಂಪನಿಗಳು ರೈತರ ಪರವಾಗಿರಬೇಕು ಎಂಬುದು ಸೇರಿದಂತೆ ಹಲವು ವಿಷಯಗಳ ಮೇಲೆ ಚರ್ಚೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಮಧ್ಯಾಹ್ನ 2ಕ್ಕೆ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಾಜ್ಯ ಸಮಿತಿಯ ಪೂರ್ಣ ಸಭೆ ನಡೆಯಲಿದೆ. ಮುಖಂಡರು, ರಾಜ್ಯ ಸಮಿತಿ ಪದಾಧಿಕಾರಿಗಳು, 26 ಜಿಲ್ಲೆಗಳ ಜಿಲ್ಲೆ ಮತ್ತು ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದರು.

ಕೇಂದ್ರ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸದ ಪರಿಣಾಮ ಈಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ರೈತರು ಬಿಜೆಪಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ರೈತರ ಪರವಾಗಿ ಕೆಲವು ನಿರ್ಣಯ ಕೈಗೊಳ್ಳಲು ಮುಂದಾಗಿರುವುದು ಸ್ವಾಗತರ್ಹ ಎಂದು ಶ್ಲಾಘಿಸಿದರು.

ರಾಜ್ಯದ ಮುಖ್ಯಮಂತ್ರಿ ರೈತರ ಪರ ಇದ್ದರೂ, ಸಾಲಮನ್ನಾ ವಿಷಯದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಸಾಲ ಪಡೆದ ಎಲ್ಲಾ ರೈತರಿಗೂ ಮನ್ನಾ ಲಾಭ ದೊರೆಯಬೇಕು. ಯಾವುದೇ ರೈತರನ್ನು ಹೊರಗುಳಿಸಿಸಬಾರದು ಎಂದು ಎಚ್ಚರಿಸಿದರು.

ಬೆಂಬಲ ಬೆಲೆ ಯೋಜನೆ ಅಡಿ ಮೆಕ್ಕೆಜೋಳ, ಇತರೆ ದವಸ ಧಾನ್ಯಗಳ ಖರೀದಿ ಕೇಂದ್ರ ಆರಂಭಿಸಿಲ್ಲ. ಭತ್ತ ಖರೀದಿ ಕೇಂದ್ರ ಆರಂಭ ಮಾಡಿದ್ದರೂ ಸಣ್ಣ ಮತ್ತು ಅತಿಸಣ್ಣ ರೈತರಿಂದ ಮಾತ್ರ ಖರೀದಿ ಮಾಡುತ್ತಿದ್ದಾರೆ. ಇದು ರೈತರನ್ನು ಒಡೆದು ಆಳುವ ತಂತ್ರ. ತಾರತಮ್ಯ ಮಾಡದೇ ಎಲ್ಲ ರೈತರಿಂದ ಭತ್ತ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಡಾ.ಬಿ.ಎಂ. ಚಿಕ್ಕಸ್ವಾಮಿ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಎಸ್. ಶಿವಮೂರ್ತಿ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !