ಜೆಡಿಎಸ್, ದೇವೇಗೌಡರ ಕುಟುಂಬಕ್ಕೆ ತಕ್ಕಪಾಠ: ಆಯನೂರು ಮಂಜುನಾಥ್ ಭವಿಷ್ಯ

ಬುಧವಾರ, ಏಪ್ರಿಲ್ 24, 2019
27 °C

ಜೆಡಿಎಸ್, ದೇವೇಗೌಡರ ಕುಟುಂಬಕ್ಕೆ ತಕ್ಕಪಾಠ: ಆಯನೂರು ಮಂಜುನಾಥ್ ಭವಿಷ್ಯ

Published:
Updated:
Prajavani

ಶಿವಮೊಗ್ಗ: ರಾಷ್ಟ್ರೀಯ ಪಕ್ಷ ಬಿಜೆಪಿ ವಿರುದ್ಧ ಹಗುರ ಮಾತು ಆಡುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಹಾಗೂ ಅವರ ಕುಟುಂಬ ವರ್ಗಕ್ಕೆ ಜನರು ಈ ಚುನಾವಣೆ ಮೂಲಕ ತಕ್ಕಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

‘ದೇವೇಗೌಡರೇ ನಿಮ್ಮ ಅಹಂಕಾರ ಬಿಡಿ. ನಿಮ್ಮ ಕುಟುಂಬದ ಮೂರು ಜನರು ಸೇರಿದಂತೆ ಜೆಡಿಎಸ್‌ನ ಯಾವ ಅಭ್ಯರ್ಥಿಯೂ ಗೆಲ್ಲುವುದಿಲ್ಲ’– ಇದು ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಅವರ ಖಡಕ್ ಮಾತುಗಳಾಗಿದ್ದವು.

ಬಿಜೆಪಿ ರಾಜ್ಯದಲ್ಲಿ ಒಂದಂಕಿ ದಾಟುವುದಿಲ್ಲ ಎನ್ನುವ ದೇವೇಗೌಡರ ಪಕ್ಷಕ್ಕೆ ಈ ಬಾರಿ ಒಂದು ಸೀಟೂ ದಕ್ಕುವುದಿಲ್ಲ. ಅಜ್ಜ, ಮೊಮ್ಮಕ್ಕಳು ಸೇರಿ ಎಲ್ಲ ಅಭ್ಯರ್ಥಿಗಳೂ ಸೋಲುತ್ತಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಛೇಡಿಸಿದರು.

ಮೊದಲು ಬಿಜೆಪಿ ಕಾಂಗ್ರೆಸ್‌ ಮುಕ್ತ ಕರ್ನಾಟಕ ಗುರಿ ಇಟ್ಟುಕೊಂಡಿತ್ತು. ಆ ಕೆಲಸವನ್ನು ಈಗಾಗಲೇ ದೇವೇಗೌಡರು ಮಾಡಿ ಮುಗಿಸಿದ್ದಾರೆ. ಹಾಗಾಗಿ, ಜೆಡಿಎಸ್‌ ಮುಕ್ತ ಕರ್ನಾಟಕದ ಗುರಿ ಇಟ್ಟುಕೊಂಡಿದ್ದೇವೆ. ದೇವೇಗೌಡರಿಗೆ ಅಹಂಕಾರ ಬಂದಿದೆ. ಜೆಡಿಎಸ್‌ ಅಧಿಕಾರ ಹಿಡಿಯುವ ಸ್ವಂತ ಶಕ್ತಿ ಇಲ್ಲದ ಪರಾವಲಂಬಿ ಪಕ್ಷ. ದೇವೇಗೌಡರು ಪ್ರಧಾನಿ, ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದೇ ಇನ್ನೊಬ್ಬರ ಆಶ್ರಯದಿಂದ. ಇಂತಹ ಪರದೇಶಿಗಳು ಬಿಜೆಪಿ ಕುರಿತು ಮಾತನಾಡುತ್ತಾರೆ ಎಂದು ಟೀಕಿಸಿದರು.

ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಿಸಲು ಕಾಂಗ್ರೆಸ್ ಸಾಕು. ಒಬ್ಬರಿಗೊಬ್ಬರು ಕಾಲೆಳೆದುಕೊಂಡು ಅವರವರೇ ಮುಳುಗುತ್ತಾರೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಸೇರಿದ ತೀರ್ಥಹಳ್ಳಿ ತಾಲ್ಲೂಕು ಜೆಡಿಎಸ್ ಮುಖಂಡ ಆರ್‌.ಮದನ್‌, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡರ ಸರ್ವಾಧಿಕಾರಿ ನಡವಳಿಕೆಯಿಂದ ಬೇಸತ್ತು ಪಕ್ಷ ತೊರೆದಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ. ಹಲವಾರು ಮುಖಂಡರು, ತಾಲ್ಲೂಕು ಪದಾಧಿಕಾರಿಗಳು ಬಿಜೆಪಿಗೆ ಸೇರಿದ್ದಾರೆ. ಈ ಬಾರಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚಿನ ಮತ ದೊರಕಿಸಲು ಶ್ರಮಿಸುತ್ತೇವೆ ಎಂದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮದನ್ ಅವರು ತೀರ್ಥಹಳ್ಳಿ ಭಾಗದಲ್ಲಿ ಜನಪ್ರಿಯ ವ್ಯಕ್ತಿ. ಅವರ ನೇತೃತ್ವದಲ್ಲಿ ಅತ್ಯಧಿಕ ಮತಗಳು ಬಿಜೆಪಿಗೆ ದೊರಕುತ್ತವೆ ಮತ್ತು ಈ ಭಾಗದ ಜೆಡಿಎಸ್ ಮುಖಂಡರೆಲ್ಲ ಬಿಜೆಪಿಗೆ ವಲಸೆ ಬರುತ್ತಾರೆ. ಪಕ್ಷ ಮತ್ತಷ್ಟು ಸದೃಢವಾಗಿ ಕಟ್ಟಲಾಗುವುದು ಎಂದು ಆಶಯ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ, ಮುಖಂಡರಾದ ಡಿ.ಎಸ್.ಅರುಣ್, ಎನ್.ಜೆ.ರಾಜಶೇಖರ್, ಬಿಳಕಿ ಕೃಷ್ಣಮೂರ್ತಿ, ರತ್ನಾಕರ್ ಶೆಣೈ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !