ಜೆಡಿಎಸ್ ಅಭ್ಯರ್ಥಿ ಪರ ಮಹಿಳೆಯರ ಒಲವು: ಕಾಂಗ್ರೆಸ್, ಜೆಡಿಎಸ್‌ ಘಟಕದ ಅಧ್ಯಕರು

ಬುಧವಾರ, ಏಪ್ರಿಲ್ 24, 2019
27 °C

ಜೆಡಿಎಸ್ ಅಭ್ಯರ್ಥಿ ಪರ ಮಹಿಳೆಯರ ಒಲವು: ಕಾಂಗ್ರೆಸ್, ಜೆಡಿಎಸ್‌ ಘಟಕದ ಅಧ್ಯಕರು

Published:
Updated:

ಶಿವಮೊಗ್ಗ: ರಾಜ್ಯ ಸಮ್ಮಿಶ್ರ ಸರ್ಕಾರ ಮಹಿಳೆಯರ ಪರ ಕಾಳಜಿ ಹೊಂದಿದೆ. ಮಹಿಳೆಯರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಹಾಗಾಗಿ, ಕ್ಷೇತ್ರದ ಎಲ್ಲ ಮಹಿಳೆಯರೂ ಈ ಚುನಾವಣೆಯಲ್ಲಿ ಮೈತ್ರಿಕೂಟದ ಜೆಡಿಎಸ್‌ ಅಭ್ಯರ್ಥಿ ಮಧುಬಂಗಾರಪ್ಪ ಅವರನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್, ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾಕುಮಾರಿ, ಶಮೀನಾ ಕೌಸರ್ ಕೋರಿದರು.

ಕೇಂದ್ರದ ಬಿಜೆಪಿ ಸರ್ಕಾರ ಮಹಿಳೆಯರಿಗೆ ಯಾವ ಸವಲತ್ತೂ ಕಲ್ಪಿಸಿಲ್ಲ. ಯಾವ ಯೋಜನೆಗಳನ್ನೂ ಜಾರಿಗೆ ತಂದಿಲ್ಲ. ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರುವಲ್ಲೂ ಸೋತಿದೆ. ಮಹಿಳೆಯರಿಗೆ ಅವಮಾನ ಮಾಡಿದೆ. ಇಂತಹ ಪಕ್ಷವನ್ನು ಯಾವ ಮಹಿಳೆಯರೂ ಬೆಂಬಲಿಸಬಾರದು ಎಂದು ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರ ಪರ ಕಾಳಜಿ ಹೊಂದಿದ್ದಾರೆ. ಮಹಿಳೆಯರಿಗಾಗಿಯೇ ಹಲವು ಭಾಗ್ಯಗಳನ್ನು ನೀಡಿದ್ದಾರೆ. ಪರಿಶಿಷ್ಟ ಮಹಿಳೆಯರ ಸ್ವಾವಲಂವನೆಗೆ ಸಾಲ ಸೇರಿದಂತೆ ಹಲವು ಯೋಜನೆ ಜಾರಿಗೆ ತರಲಾಗಿದೆ. ಇಂದಿರಾ ಕ್ಯಾಂಟಿನ್, ಅನ್ನಭಾಗ್ಯ, ಕ್ಷೀರಭಾಗ್ಯ ಹೀಗೆ ಹಲವು ಯೋಜನೆ ನೀಡುವ ಮೂಲಕ ದುರ್ಬಲರ, ಶೋಷಿತರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮಹಿಳೆಯರ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಯೋಜನೆ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿದ್ದಾರೆ ಎಂದು ಶ್ಲಾಘಿಸಿದರು.

ಮಹಿಳೆಯರಿಗಾಗಿ ವಿಶೇಷ ಆರೋಗ್ಯ ಯೋಜನೆ ಜಾರಿಗೆ ತರಲಾಗಿದೆ. ಸ್ತನ ಕ್ಯಾನ್ಸರ್ ನಿಂದ ಬಳಲುವ ಗ್ರಾಮೀಣ ಮಹಿಳೆಯರ ತಪಾಸಣೆ ಮತ್ತು ಚಿಕಿತ್ಸೆಗಾಗಿ 10 ಜಿಲ್ಲೆಗಳಲ್ಲಿ ಮೊಬೈಲ್ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಈ ಯೋಜನೆ ಶೀಘ್ರ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ರಾಹುಲ್ ಗಾಂಧಿ ಅವರು ಶೇ 33ರಷ್ಟು ಮೀಸಲಾತಿ ಕಾಯ್ದೆ ಜಾರಿಗೆ ತರಲು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಗೂ ಸಮ್ಮಿಶ್ರ ಸರ್ಕಾರ ಹಲವು ಯೋಜನೆಗಳನ್ನು ನೀಡಿದೆ. ಮಧುಬಂಗಾರಪ್ಪ ಅವರನ್ನು ಗೆಲ್ಲಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ. ಕಸ್ತೂರಿ ರಂಗನ್ ವರದಿಯ ಗೊಂದಲ ನಿವಾರಣೆ, ಭದ್ರಾವತಿ ಕಾರ್ಖಾನೆಗಳ ಪುನಃಶ್ಚೇತನ, ಬೆಲೆ ಏರಿಕೆಯ ಬಿಸಿ, ಉದ್ಯೋಗ ಸೃಷ್ಟಿ, ಆರೋಗ್ಯ, ರೈಲು, ವಿಮಾನ ನಿಲ್ದಾಣದ ಕೆಲಸಗಳು ವೇಗ ಪಡೆಯುತ್ತವೆ. ಮಧುಬಂಗಾರಪ್ಪ ಗೆದ್ದರೆ ಇವೆಲ್ಲವೂ ಆಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಜಯಲಕ್ಷ್ಮಿ ಸಿ. ಪಾಟೀಲ್, ಶಾಂತಾ ಸುರೇಂದ್ರ, ಶ್ಯಾಮಲಾ ಸುರೇಶ್, ವನಮಾಲಾ, ಪ್ರಭಾವತಿ, ಸೌಗಂಧಿಕ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !