ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರು. ಮುಸ್ಲಿಮರ ಮೇಲೆ ದೌರ್ಜನ್ಯಕ್ಕೆ ಖಂಡನೆ

Last Updated 29 ಜೂನ್ 2019, 11:23 IST
ಅಕ್ಷರ ಗಾತ್ರ

ಶಿವಮೊಗ್ಗ: ದಲಿತರು, ಮುಸ್ಲಿಂ ಸಮುದಾಯದ ವ್ಯಕ್ತಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಅಧ್ಯಕ್ಷ ಇಲ್ಯಾಸ್ ಮಹಮದ್‌ ತುಂಬೆ ಆರೋಪಿಸಿದರು.

ದೇಶದ ಎಲ್ಲೆಡೆ ದಲಿತರು, ಮುಸ್ಲಿಮರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಇಂತಹ ಪ್ರಕರಣಗಳು ಅತಿ ಹೆಚ್ಚು ವರದಿಯಾಗಿವೆ. ರಾಜ್ಯದಲ್ಲೂ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. . ಭಯದ ವಾತಾವರಣ ಕಂಡುಬರುತ್ತಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ಜೂನ್‌15ರಂದು ಮುಸ್ಲಿಂ ವ್ಯಕ್ತಿಗೆ ಚಿತ್ರಹಿಂಸೆ ನೀಡಿ, ಭೀಕರವಾಗಿ ಕೊಲೆ ಮಾಡಿದ್ದಾರೆ. ಪೊಲೀಸರು ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ದೂರಿದರು.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಪ್ರತಾಪ್ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಸ್ಲಾಂ ಕೊಲೆಯಾಯಿತು. ರಾಜ್ಯದಲ್ಲಿ ನಿರಂತರವಾಗಿ ಹಲ್ಲೆಗಳು ನಡೆಯುತ್ತಲೇ ಇವೆ. ಅದರಲ್ಲೂ ಮುಸ್ಲಿಂ ಯುವಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಮುಸ್ಲಿಂಮರು ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂದು ಹಿಂದು ಸಂಘಟನೆಗಳ ಕಾರ್ಯಕರ್ತರು ತೊಂದರೆ ನೀಡುತ್ತಿದ್ದಾರೆ. ಇತಂಹ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಜಾತಿ, ಧರ್ಮದ ಹೆಸರಿನಲ್ಲಿ ಕಿರುಕುಳಗಳು ನಡೆಯುತ್ತಿವೆ. ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕು. ಯಾರೇ ಅಪರಾಧ ಮಾಡಿದರೂ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಜುಲೈ 1ರಂದು ಬೆಂಗಳೂರಿನ ಪುರಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಮಜೀದ್ ಖಾನ್, ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ, ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ, ಸದಸ್ಯ ಅಮೀನ್ ಮೊಹ್ಸಿನ್, ಸಲೀಂಖಾನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT