ಶನಿವಾರ, ನವೆಂಬರ್ 23, 2019
17 °C

14ರಿಂದ ಕಾಂತೇಶ್ ಅಭಿನಂದನಾ ನಾಟಕೋತ್ಸವ

Published:
Updated:

ಶಿವಮೊಗ್ಗ: ಕಾಂತೇಶ್ ಕದರಮಂಡಲಗಿ ಅಭಿನಂದನಾ ಸಮಿತಿ ಸೆ.14ರಿಂದ 16ರವರೆಗೆ ಕುವೆಂಪು ರಂಗಮಂದಿರದಲ್ಲಿ ನಾಟಕೋತ್ಸವ, ಅಭಿನಂದನಾ ಕಾರ್ಯಕ್ರಮ ಆಯೋಜಿಸಿದೆ.

ಕಾಂತೇಶ್ ಕದರಮಂಡಲಗಿ 40 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಗರಡಿಯಲ್ಲಿ ಹಲವು ನಟ, ನಿರ್ದೇಶಕರು ಬೆಳೆಸಿದ್ದಾರೆ. ಸಹ್ಯಾದ್ರಿ ರಂಗ ತರಂಗ ಸಂಸ್ಥೆ ಆರಂಭಿಸಿ ರಾಜ್ಯದ ಎಲ್ಲೆಡೆ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಇಂತಹ ರಂಗಕರ್ಮಿಗೆ ಗೌರವ ಸಲ್ಲಿಸಲು ಹೆಮ್ಮೆಯಾಗುತ್ತಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಎಂ.ಎನ್.ಸುಂದರರಾಜ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು.

ಕದರಮಂಡಲಗಿ ಅವರು ಹಾವು ಹರಿದಾಡತಾವ, ಹಯವದನ, ಶೋಕಚಕ್ರ, ಚೋರ ಪುರಾಣ, ಸಂಕ್ರಾಂತಿ, ಗುಣಮುಖ, ರಾವೀನದಿಯ ದಂಡೆಯಲ್ಲಿ, ತುಘಲಕ್ ಸೇರಿ 30ಕ್ಕೂ ಹೆಚ್ಚು ನಾಟಕ ನಿರ್ದೇಶಿಸಿದ್ದಾರೆ. ಮಕ್ಕಳ ನಾಟಕಗಳ ನಿರ್ದೇಶನದಲ್ಲೂ ಛಾಪು ಮೂಡಿಸಿದ್ದಾರೆ. ನಟರಾಗಿಯೂ ಅಭಿನಯಿಸಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾದ ಅವರ ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಧಾರವಾಹಿ ಗಮನ ಸೆಳೆದಿತ್ತು. ಕಿರುಚಿತ್ರಗಳಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಧ್ವನಿ ಕಲಾವಿದರಾಗಿದ್ದರು. ಸಾಕ್ಷರತೆ, ಮದ್ಯಪಾನ ವಿರೋಧ, ಮತದಾನ ಜಾಗೃತಿ ಅರಿವು ಮೂಡಿಸುವ ಬೀದಿನಾಟಕ ರಚಿಸಿದ್ದಾರೆ. ಹಲವು ಳವಳಿಗಳಲ್ಲೂ ಭಾಗವಹಿಸಿದ್ದಾರೆ ಎಂದು ವಿವರ ನೀಡಿದರು.

ಸೆ.14ರಂದು ಕುವೆಂಪು ಅವರ ಜಲಗಾರ, 15 ರಂದು ಪಿ.ಲಂಕೇಶ್ ಅವರ ಸಂಕ್ರಾಂತಿ, 16ರಂದು ಅಸಘರ್ ವಜಾಹತ್ ರಚಿಸಿರುವ ರಾವಿ ನದಿಯ ದಂಡೆಯಲ್ಲಿ ನಾಟಕಗಳು ಪ್ರದರ್ಶನವಾಗಲಿವೆ. ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನ ಆರಂಭವಾಗುತ್ತವೆ. ಈ ಮೂರೂ ನಾಟಕಗಳನ್ನು ಕಾಂತೇಶ್ ಕದರಮಂಡಲಗಿ ನಿರ್ದೇಶಿಸಿದ್ದಾರೆ ಎಂದರು.

ಸೆ.14ರ ಸಂಜೆ 6.30ಕ್ಕೆ ಖ್ಯಾತ ಚಲನಚಿತ್ರ ನಟ ರಾಮಕೃಷ್ಣ ನಾಟಕೋತ್ಸವ ಉದ್ಘಾಟಿಸುವರು. ಡಾ.ಸಾಸ್ವೆಹಳ್ಳಿ ಸತೀಶ್, ಡಾ.ಎಚ್.ಎಸ್.ನಾಗಭೂಷಣ ಅಭಿನಂದನಾ ನುಡಿ ಸಲ್ಲಿಸುವರು. 15 ರಂದುಹಿರಿಯ ಕಲಾವಿದರಾದ ಎಸ್.ಎಚ್.ಮಂಜುನಾಥ್, ಬಂಡಿಗಡಿ ಪ್ರೇಮ್ ಕುಮಾರ್, ಊದುವಳ್ಳಿ ಮಂಜುನಾಥ್, ಶ್ರೀಧರರಾವ್ ಅವರನ್ನು ಸನ್ಮಾನಿಸಲಾಗುವುದು. 16ರಂದು ಸಂಜೆ 6.30ಕ್ಕೆ ಸಮಾರೋಪ ಇರುತ್ತದೆ. ಹಿರಿಯ ನಾಟಕಕಾರ ಬೇಲೂರು ಕೃಷ್ಣಮೂರ್ತಿ ಭಾಗವಹಿಸುವರು ಎಂದರು.

ಇದೇ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಎಸ್.ಜಿ.ಶಂಕರಮೂರ್ತಿ, ಡಾ.ಪದ್ಮನಾಭ ಉಡುಪ ಅವರನ್ನು ಸನ್ಮಾನಿಸಲಾಗುವುದು. ಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಸಾಸ್ವೆಹಳ್ಳಿ ಸತೀಶ್, ಡಾ.ಎಚ್.ಎಸ್.ನಾಗಭೂಷಣ್, ಸಿದ್ದರಾಮ್, ಮುರಳಿಧರ ರಾವ್, ಶ್ರೀಕಂಠ ಪ್ರಸಾದ್, ಬಿ.ವಿ.ತಿಪ್ಪಣ್ಣ ಇದ್ದರು.

ಪ್ರತಿಕ್ರಿಯಿಸಿ (+)