ಶುಕ್ರವಾರ, ನವೆಂಬರ್ 22, 2019
26 °C

ನಾಳೆ ಮತ ಯಂತ್ರ ದುರ್ಬಳಕೆ ವಿರುದ್ಧ ರ್‍ಯಾಲಿ

Published:
Updated:

ಶಿವಮೊಗ್ಗ: ನಗರದ 100 ಅಡಿ ರಸ್ತೆಯ ಇಲಿಯಾಸ್ ನಗರ ಫರೋಕಿ ಶಾದಿಮಹಲ್‌ನಲ್ಲಿ ಸೆ.14ರಂದು ಸಂಜೆ 6.30ಕ್ಕೆ ಇವಿಎಂ ಮತ ಯಂತ್ರ ದುರ್ಬಳಕೆ ವಿರುದ್ಧ ರ್‍ಯಾಲಿ ಮತ್ತು ಜಾಗೃತಿ ಸಭೆ ಆಯೋಜಿಸಲಾಗಿದೆ.

ಬಹುಜನ ಕ್ರಾಂತಿ ಮೋರ್ಚಾ, ಜೈ ಭೀಮ ಕನ್ನಡ ಸೇನೆ ಮತ್ತು ಇತರೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೋರ್ಚಾದ ಅಧ್ಯಕ್ಷ ಮಹಮದ್‌ ಹುಸೇನ್ ಗುರುವಾರ ಪತ್ರಿಕಾಗೋಷ್ಠಿ ಮಾಹಿತಿ ನೀಡಿದರು.

ಇವಿಎಂ ಮತ ಯಂತ್ರ ದುರ್ಬಳಕೆಯಾಗುತ್ತಿದೆ. ಯಂತ್ರಗಳ ಬಳಕೆಯನ್ನೇ ರದ್ದುಮಾಡಬೇಕು ಎಂದು ಆಗ್ರಹಿಸಿ ಬಹುಜನ ಕ್ರಾಂತಿ ಮೋರ್ಚಾ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪರಿವರ್ತನಾ ಯಾತ್ರೆ ಆಯೋಜಿಸಿದೆ. ಈ ಯಾತ್ರೆ ಕರ್ನಾಟಕವನ್ನೂ ಹಾದು ಹೋಗುತ್ತಿದೆ. ಸೆ.14ರಂದು ಶಿವಮೊಗ್ಗದಲ್ಲಿ ಸಭೆ ಆಯೋಜಿಸಲಾಗಿದೆ ಎಂದರು.

ಲಿಂಗಾಯತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಕೋರ್ಣೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಬಹುಜನ ಕ್ರಾಂತಿ ಮೋರ್ಚಾ ರಾಷ್ಟ್ರೀಯ ಸಂಯೋಜಕ ವಿಲಾಸ್ ಕಾರತ್, ರಾಜ್ಯ ಘಟಕದ ಅಧ್ಯಕ್ಷ ಡಾ.ಭಾನುಪ್ರಕಾಶ್, ಮುಖಂಡರಾದ ಸುಭಾಷ್ ನಾಟಿಕರ್, ಕೋಮು ಸೌಹಾರ್ದ ವೇದಿಕೆ ಮುಖಂಡ ಕೆ.ಪಿ. ಶ್ರೀಪಾಲ್, ಮೌಲಾನ್ ಇಮ್ರಾನ್, ರಫೀವುಲ್ಲಾ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಅಂಬೇಡ್ಕರ್ ಸಂಘದ ನಾಗರಾಜ್, ಟ್ರೇಡ್ ಯೂನಿಯನ್ನ ಉಬೇದುಲ್ಲಾ ಭಾಗವಹಿಸುವರು ಎಂದು ವಿವರ ನೀಡಿದರು.

ಕೇಂದ್ರ ಸರ್ಕಾರ ಅಧಿಕಾರಿ ವರ್ಗದ ಜತೆ ಶಾಮೀಲಾಗಿ ಇವಿಎಂ ಯಂತ್ರ ದುರ್ಬಳಕೆ ಮಾಡಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಈ ಕುರಿತು ಜಾಗೃತಿ ಮೂಡಿಸಬೇಕಿದೆ. ಅದಕ್ಕಾಗಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೈ ಭೀಮ್ ಕನ್ನಡ ಸೇನೆಯ ಎಸ್.ಎಸ್.ಮಂಜುನಾಥ್, ಜಯಕುಮಾರ್, ವಾಸಿಂ ಅಕ್ರಮ್ ಇದ್ದರು.

ಪ್ರತಿಕ್ರಿಯಿಸಿ (+)