ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್‌ಗೆ ಭಾಸ್ಕರಾಚಾರ್ಯ ವಿಜ್ಞಾನ ಪ್ರಶಸ್ತಿ

ಸಂವಾದ
Last Updated 21 ಸೆಪ್ಟೆಂಬರ್ 2019, 9:43 IST
ಅಕ್ಷರ ಗಾತ್ರ

ವಿಜಯಪುರ: ಸಿಂದಗಿ ಪಟ್ಟಣದ ಸಾರಂಗಮಠ-ದ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ವತಿಯಿಂದ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್ ಅವರಿಗೆ ಸೆ.25ರಂದು ಭಾಸ್ಕರಾಚಾರ್ಯ ವಿಜ್ಞಾನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

‘ಅಂದು ಸಿಂದಗಿಯ ಶಾಂತವೀರೇಶ್ವರ ಸಭಾ ಭವನದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹1 ಲಕ್ಷ ನಗದು, ಬೆಳ್ಳಿ ಸ್ಮರಣಿಕೆಯನ್ನು ಹೊಂದಿದೆ’ ಎಂದು ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಸಹಯೋಗದೊಂದಿಗೆ ಅಂದು ಯುವ ವಿಜ್ಞಾನಿಗಳೊಂದಿಗೆ ಕೆ.ಕಸ್ತೂರಿರಂಗನ್ ಅವರು ಸಂವಾದ ನಡೆಸುವರು. ಜಿಲ್ಲೆಯ ಆಯ್ದ 100 ವಿದ್ಯಾರ್ಥಿಗಳು, ವಿಜ್ಞಾನ ಮತ್ತು ಗಣಿತ ಶಿಕ್ಷಕರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಕಸ್ತೂರಿರಂಗನ್ ಅವರು ಇದೇ ಸಂದರ್ಭದಲ್ಲಿ ಚಾಲನೆ ನೀಡುವರು. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅನುದಾನದಲ್ಲಿ ನಿರ್ಮಿಸಿರುವ ಮಹಿಳಾ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸುವರು’ ಎಂದರು.

‘ಸಂಸ್ಥೆಯ ಹಳೆಯ ವಿದ್ಯಾರ್ಥಿ, ದೇಶದ ಟಾಪ್ 10 ಕಲಾವಿದರಲ್ಲಿ ಒಬ್ಬರಾಗಿರುವ ಡಾ.ಈರಣ್ಣ ಜಿ.ಆರ್. ಅವರು ಪ್ರಶಸ್ತಿಯ ಮೊತ್ತ ₹1 ಲಕ್ಷ ಹಾಗೂ ಬೆಳ್ಳಿ ಸ್ಮರಣಿಕೆಯನ್ನು ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ಶಾಸಕ ಅರುಣ ಶಹಾಪುರ ಮಾತನಾಡಿ, ‘ಈ ಹಿಂದೆ ಭಾಸ್ಕರಾಚಾರ್ಯ ಪ್ರಶಸ್ತಿಯನ್ನು ವಿಜ್ಞಾನಿಗಳಾದ ಸಿ.ಎನ್.ಆರ್.ರಾವ್, ಯು.ಆರ್.ರಾವ್ ಮತ್ತು ಕೃಷಿ ವಿಜ್ಞಾನಿ ಎಸ್.ಎ.ಪಾಟೀಲ ಅವರಿಗೆ ನೀಡಲಾಗಿದೆ. ಸಿದ್ಧೇಶ್ವರ ಸ್ವಾಮೀಜಿ ಅವರ ಆಶಯ ಮತ್ತು ಡಾ.ಪ್ರಭು ಸಾರಂಗದೇವ ಶಿವಾಚಾರ್ಯರ ಕತೃತ್ವ ಶಕ್ತಿಯಿಂದ ಪ್ರಸಕ್ತ ವರ್ಷ ಡಾ.ಕೆ.ಕಸ್ತೂರಿರಂಗನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ’ ಎಂದು ಹೇಳಿದರು.

ವಿಜ್ಞಾನ ವಿಷಯ ಪರಿವೀಕ್ಷಕರು ಮಾತನಾಡಿ, ‘ಸೆ.25ರಂದು ಸಂವಾದದಲ್ಲಿ ಪಾಲ್ಗೊಳ್ಳುವ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ‘ಅನ್ಯಕಾರ್ಯ ನಿಮಿತ್ತ ರಜೆ’ (ಒಒಡಿ) ಸೌಲಭ್ಯ ನೀಡಲಾಗಿದೆ’ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ, ಗೌರವ ಕಾರ್ಯದರ್ಶಿ ನೆಹರೂ ಪೋರವಾಲ, ನಿರ್ದೇಶಕರಾದ ಅಶೋಕ ವಾರದ, ಗಂಗಾಧರ ಜೋಗೂರ, ಅಶೋಕ ಮಸಳಿ, ಡಾ.ವಿವೇಕಾನಂದ ಸಾಲಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT