ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಕ್ಕಾಗಿ ಎಲ್ಲರೂ ಪಕೋಡ ಮಾರಬೇಕೇ?

ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಪ್ರಶ್ನೆ
Last Updated 10 ಏಪ್ರಿಲ್ 2019, 11:42 IST
ಅಕ್ಷರ ಗಾತ್ರ

ಶಿವಮೊಗ್ಗ: ದೇಶದ ಎಲ್ಲ ಜನರೂ ಉದ್ಯೋಗಕ್ಕಾಗಿ ಪಕೋಡ ಮಾರುವುದಾದರೆ ಮಕ್ಕಳಿಗೆ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಬೇರೆಬೇರೆ ಪ್ರಕಾರದ ಶಿಕ್ಷಣ ಏಕೆ ಕೊಡಿಸಬೇಕು ಎಂದು ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಪ್ರಶ್ನಿಸಿದರು.

2014ರ ಲೋಕಸಭಾ ಚುನಾವಣೆ ವೇಳೆ ದೇಶದ ನಿರುದ್ಯೋಗಿಗಳಿಗೆ ಭರವಸೆ ನೀಡಿದ್ದ ಮೋದಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ 2 ಲಕ್ಷ ಉದ್ಯೋಗ ಸೃಷ್ಟಿಸಿಲ್ಲ. ಈ ಕುರಿತು ಪ್ರಶ್ನಿಸುವ ಯುವಕರಿಗೆ ಪಕೋಡ ಮಾರಾಟ ಮಾಡುವಂತೆ ಸಲಹೆ ನಿಡುತ್ತಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

ಯುಪಿಎ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಿಯಂತ್ರಿಸಲುಕ್ರಮ ಕೈಗೊಳ್ಳಲಿಲ್ಲ. ಬೆಲೆ ಗಗನಕ್ಕೆ ಹೋಗಿದೆ. ₨ 15 ಲಕ್ಷ ಖಾತೆಗೆ ಜಮೆ ಮಾಡುವ ಭರವಸೆ ಈಡೇರಿಸಲಿಲ್ಲ. ಉದ್ಯೋಗ ಕೇಳಿದರೆ ಪಕೋಡ ಮಾರಿ ಎಂಬ ಉತ್ತರ ನೀಡುತ್ತಾರೆ. ಈಗ ಪಕೋಡ ಮಾರುವವರಿಗೇ ಭದ್ರತೆ ಇಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಮದ ನಂತರ ಅವರ ನೆರವಿಗೆ ಕಾನೂನು ರೂಪಿಸಿದೆ. ಬಡ್ಡಿ ರಹಿತ ಸಾಲ ನಿಡಿ ವ್ಯವಹಾರಕ್ಕೆ ನೆರವಾಗಿದೆ ಎಂದರು.

ರಾಜ್ಯ ಸರ್ಕಾರದ ಸಾಲಮನ್ನಾ ವಿಷಯ ಟೀಕಿಸುವ ಬಿಜೆಪಿ ಕೇಂದ್ರದಿಂದ ಸಾಲ ಮನ್ನಾ ಮಾಡಿಸಲು ಸಾಧ್ಯವಾಗಲಿಲ್ಲ. ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದರೆ ಕೇಂದ್ರದ ಮೂಗಿಡಿದು ಮನ್ನಾ ಮಾಡಿಸುವೆ ಎನ್ನುತ್ತಿದ್ದ ಯಡಿಯೂರಪ್ಪ ಈಗ ಚಕಾರ ಎತ್ತುತ್ತಿಲ್ಲ. ಮಹಾದಾಯಿ ವಿಚಾರದಲ್ಲೂ ಜನರನ್ನು ಧಿಕ್ಕು ತಪ್ಪಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಹತ್ತರ ಬರುತ್ತಿದ್ದಂತೆ ಮತ್ತೆ ರಾಮಮಂದಿರ ನೆನಪಾಗಿದೆ. ಯೋಧರ ಹತ್ಯೆಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಅವರಿಗೆ ರಕ್ಷಣೆ ನೀಡದವರು ದೇಶ ಹೇಗೆ ಕಾಪಾಡುತ್ತಾರೆ? ಭದ್ರಾವತಿ ಕಾರ್ಖಾನೆಗಳ ವಿಷಯದಲ್ಲೂ ಹೀಗೆ ನಡೆದುಕೊಂಡಿದ್ದಾರೆ. 10 ವರ್ಷ ಸಂಸದರಾದರೂ ತುಮರಿ ಸೇತುವೆಗೆ ಕ್ರಮ ಕೈಗೊಳ್ಳಿಲ್ಲ. ಈಗ ನಾಟಕ ಮಾಡುತ್ತಿದ್ದಾರೆ ಎಂದು ಛೇಡಿಸಿದರು.

ಜೆಡಿಎಸ್‌ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಬಿಜೆಪಿ ಅಭ್ಯರ್ಥಿಗೆ ನೈತಿಕತೆ ಇಲ್ಲ. ಬಂಗಾರಪ್ಪ ಇತರೆ ಸಮುದಾಯದ ಹಲವು ನಾಯಕರನ್ನು ಬೆಳೆಸಿದರು. ಯಡಿಯೂರಪ್ಪ ಅವರು ಪುತ್ರ ರಾಘವೇಂದ್ರ ಹೊರತು ಯಾರನ್ನೂ ಬೆಳೆಸಲಿಲ್ಲ ಎಂದು ಕುಟುಕಿದರು.

ತಾವು ಸಂಸದರಾಗಿ ಆಯ್ಕೆಯಾದರೆ ಅಡಿಕೆ ಬೆಳೆಗಾರರ ಹಿತ ಕಾಪಾಡಲಾಗುವುದು. ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು. ಭದ್ರಾವತಿ ವಿಐಎಸ್‌ಎಲ್‌, ಎಂಪಿಎಂ ಪುನರಾರಂಭಕ್ಕೆ ಒತ್ತು ನೀಡಲಾಗುವುದು ಎಂದು ಭರಸವೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಗೀತಾ ಶಿವರಾಜ್‌ಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT