ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ತಡೆಗೆ ಪ್ರಧಾನಿ ಕ್ರಮ: ಬಿ.ವೈ. ರಾಘವೇಂದ್ರ

Last Updated 22 ಮಾರ್ಚ್ 2020, 14:41 IST
ಅಕ್ಷರ ಗಾತ್ರ

ಶಿಕಾರಿಪುರ: ದೇಶದಲ್ಲಿ ಕೋವಿಡ್‌–19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದ ತಮ್ಮ ನಿವಾಸದ ಎದುರು ಕುಟುಂಬ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚಪ್ಪಾಳೆ ತಟ್ಟಿದ ನಂತರ ಅವರು ಮಾತನಾಡಿದರು.

ಪ್ರಪಂಚದಲ್ಲಿ ನಡೆದ ಒಂದನೇ ಮಹಾಯುದ್ಧ ಹಾಗೂ ಎರಡನೇ ಮಹಾಯುದ್ಧಕ್ಕಿಂತ ಹೆಚ್ಚು ಪರಿಣಾಮವನ್ನು ಕೊರೊನಾ ಬೀರುತ್ತಿದೆ. ಆರೋಗ್ಯ ಕ್ಷೇತ್ರ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ತಲ್ಲಣ ಉಂಟು ಮಾಡಿದೆ. ಈ ಕಾಯಿಲೆಯಿಂದ ದೇಶದ 125 ಕೋಟಿ ಜನರ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

‘ಕೇಂದ್ರ ಸರ್ಕಾರ ಕಾಯಿಲೆ ಹರಡದಂತೆ ತಡೆಯಲು ವಿಮಾನಯಾನ ಹಾಗೂ ಕೆಲವು ರಾಜ್ಯಗಳಲ್ಲಿ ರೈಲ್ವೇ ಸಂಚಾರವನ್ನು ರದ್ದು ಮಾಡಿದೆ. ಕಾಯಿಲೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜನತಾ ಕರ್ಪ್ಯೂಗೆ ದೇಶದ ಜನರು ಹಾಗೂ ಜಿಲ್ಲೆಯ ಜನತೆ ಬೆಂಬಲ ಸೂಚಿಸಿ ಬಂದ್‌ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಡಳಿತ ಕಾಯಿಲೆ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ತಾಲ್ಲೂಕು ಆಡಳಿತ, ವೈದ್ಯಾಧಿಕಾರಿಗಳು, ಪೊಲೀಸರು, ಪುರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ಸೇವೆಯನ್ನು ನಾವು ಗೌರವಿಸಬೇಕಾಗಿದೆ. ಅಧಿಕಾರಿಗಳು ಸಾರ್ವಜನಿಕರಲ್ಲಿ ಕೋವಿಡ್‌–19 ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರು ಆತಂಕ ಪಡದೇ ಕಾಯಿಲೆ ಹರಡದಂತೆ ಆರೋಗ್ಯ ಇಲಾಖೆ ನೀಡುವ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಬಿ. ಚನ್ನವೀರಪ್ಪ, ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಟಿ.ಎಸ್‌. ಮೋಹನ್‌, ಮಾಜಿ ಅಧ್ಯಕ್ಷ ಕಬಾಡಿ ರಾಜಪ್ಪ, ಮುಖಂಡ ರುದ್ರೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್‌, ಪುರಸಭೆ ಮುಖ್ಯಾಧಿಕಾರಿ ಸುರೇಶ್‌, ಆರೋಗ್ಯ ನಿರೀಕ್ಷಕ ರಾಜ್‌ಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಪೂಜಾರ್, ಹಿರಿಯ ಆರೋಗ್ಯ ಸಹಾಯಕ ಪಾಂಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT