ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಕೋನ ಸ್ಪರ್ಧೆ; ‘ನಮಸ್ಕಾರ’, ‘ಚಮತ್ಕಾರ’ದ ಸದ್ದು!

ಮೂರು ತಾಲ್ಲೂಕುಗಳಲ್ಲಿ ಹಂಚಿಹೋಗಿರುವ ಕಲಬುರ್ಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ
Last Updated 10 ಮೇ 2018, 10:48 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ‘ನಮಸ್ಕಾರ’ ಮತ್ತು ‘ಚಮತ್ಕಾರ’ದ ಚರ್ಚೆ ಜೋರಾಗಿದೆ.

ಗಂಡೋರಿ ನಾಲಾ ನೀರು ಜಮೀನುಗಳಿಗೆ ಹರಿಯದಿದ್ದರೂ ಈ ಬಾರಿ ಇಲ್ಲಿ ‘... ಮಳೆ’ ಸುರಿಯುತ್ತಿದೆ ಎಂದು ಮಾತು ಕೇಳಿಬರುತ್ತಿದೆ.

ಮೂರು ತಾಲ್ಲೂಕುಗಳಲ್ಲಿ ಹರಿದು ಹಂಚಿಹೋಗಿರುವ ಇದು ಹೆಸರಿಗೆ ತಕ್ಕಂತೆ ಅಪ್ಪಟ ಗ್ರಾಮೀಣ ಕ್ಷೇತ್ರ. ಕಮಲಾಪುರ ಮತ್ತು ಶಹಾಬಾದ ಹೊಸ ತಾಲ್ಲೂಕುಗಳಾಗಿದ್ದರೂ ಮೂಲಸೌಲಭ್ಯಗಳಿಂದ ವಂಚಿತಗೊಂಡಿವೆ. ಕ್ಷೇತ್ರದಲ್ಲಿ ನೀರಾವರಿ ಮತ್ತು ನೀರಿನ ಸಮಸ್ಯೆ ಹಾಗೇ ಇದೆ. ಉದ್ಯೋಗ ಸೃಷ್ಟಿ ಎಂಬುದು ಗಗನಕುಸುಮದಂತಾಗಿದೆ. ಈ ಎಲ್ಲ ಇಲ್ಲಗಳನ್ನು ಹೊದ್ದು ಮಲಗಿದೆ ಈ ಕ್ಷೇತ್ರ.

ನಾಲ್ಕುಬಾರಿ ಗೆದ್ದಿದ್ದ ‘ಕುಸ್ತಿಪಟು’ ರೇವೂ ನಾಯಕ ಬೆಳಮಗಿ ಅವರನ್ನು ಬಿಜೆಪಿ ಕೈಬಿಟ್ಟರೂ ಜೆಡಿಎಸ್‌ನಿಂದ ಆಖಾಡಕ್ಕಿಳಿದು ಅವರು ರಂಗು ಹೆಚ್ಚಿಸಿದ್ದಾರೆ. ಸೇಡಂ ತಾಲ್ಲೂಕು ಆಡಕಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಮತ್ತಿಮೂಡ ಅವರಿಗೆ ಬಿಜೆಪಿ ಮಣೆ ಹಾಕಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಶಾಸಕ ಜಿ.ರಾಮಕೃಷ್ಣ ಬದಲು ಅವರ ಪುತ್ರ ವಿಜಯಕುಮಾರ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಈ ಮೂವರ ಮಧ್ಯೆ ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ.

ರಾಜಕೀಯ ಕುಸ್ತಿಯ ಎಲ್ಲ ಪಟ್ಟುಗಳನ್ನು ಬಲ್ಲ ಬೆಳಮಗಿ, ‘ನನಗೆ ಅನ್ಯಾಯ ಮಾಡಿದ್ದಾರೆ’ ಎಂದು ಕಣ್ಣೀರು ಸುರಿಸುತ್ತಿದ್ದಾರೆ. ‘ಇದು ನನ್ನ ಕೊನೆಯ ಚುನಾವಣೆ ಗೆಲ್ಲಿಸಿ’ ಎಂದು ಮತದಾರರ ಕಾಲಿಗೆರಗುತ್ತಿದ್ದಾರೆ. ಆ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳುವ ಯತ್ನದಲ್ಲಿ ತೊಡಗಿದ್ದಾರೆ. ಸ್ವಜಾತಿ ಬಂಜಾರ ಸಮುದಾಯವೂ ಅವರ ಬೆನ್ನಿಗೆ ನಿಂತಿದೆ.

‘ಬಿಎಸ್‌ಪಿಯೊಂದಿಗಿನ ಮೈತ್ರಿ ಕಾರಣಕ್ಕೆ ಜೆಡಿಎಸ್‌ಗೆ ದಲಿತ ಮತಗಳು ಲಭ್ಯವಾಗಲಿವೆ. ಕಾಂಗ್ರೆಸ್‌–ಬಿಜೆಪಿ ಇಬ್ಬರೂ ಎಡಗೈ ಸಮುದಾಯದವರು. ಬೆಳಮಗಿ ಆ ಎರಡೂ ಪಕ್ಷಗಳ ಮತಬ್ಯಾಂಕ್‌ಗಳಿಗೆ ಲಗ್ಗೆ ಇಟ್ಟಿದ್ದಾರೆ’ ಎನ್ನುತ್ತಾರೆ ಜೆಡಿಎಸ್‌ನವರು.

‘ಕಾಂಗ್ರೆಸ್ಸೇತರ ಮತಗಳು ವಿಭಜನೆಯಾಗಿ ಗೆಲುವು ತನ್ನದೇ’ ಎಂದು ನಂಬಿರುವ ಕಾಂಗ್ರೆಸ್‌ ಅಭ್ಯರ್ಥಿ, ಸಾಂಪ್ರದಾಯಿಕ ಮತಗಳನ್ನು ಗಟ್ಟಿಗೊಳಿಸುವ ಯತ್ನದಲ್ಲಿ ತೊಡಗಿದ್ದಾರೆ. ಆದರೆ, ಅವರು ಆಡಳಿತ ವಿರೋಧಿ ಅಲೆಯನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದು ಈಗಿನ ಪ್ರಶ್ನೆ.

‘ಹೊರಗಿನವರು ಎಂಬ ಅಪವಾದ ಮತ್ತು ಬೆಳಮಗಿಯಿಂದಾಗಿ ಮತಗಳ ವಿಭಜನೆ ಬಿಜೆಪಿ ಅಭ್ಯರ್ಥಿಗೆ ತೊಡಕಾಗಬಹುದು’ ಎಂದು ಅಲ್ಲಿಯ ಕೆಲವರು ಹೇಳುತ್ತಾರೆ.

‘ಯಡಿಯೂರಪ್ಪ ಅವರು ಲಿಂಗಾಯತದ ಕಿಚ್ಚು ಹಚ್ಚಿ ಹೋಗಿದ್ದಾರೆ. ಮೋದಿ ಅಲೆ ಇದೆ. ಅಭ್ಯರ್ಥಿಯ ‘ಬಲ’ ಇದೆ. ಹೀಗಾಗಿ ಗೆಲುವು ತಮ್ಮದೇ’ ಎಂಬುದು ಬಿಜೆಪಿಯವರ ನಂಬಿಕೆ.

ಹೋರಾಟಗಾರ ಮಾರುತಿ ಮಾನ್ಪಡೆ ಸಿಪಿಐ–ಎಂ ನಿಂದ ಕಣಕ್ಕಿಳಿದಿದ್ದಾರೆ. ಕ್ಷೇತ್ರದ ಅಭಿವೃದ್ಧಿ–ಸಮಸ್ಯೆಗಳ ನಿವಾರಣೆಗೆ ತಮ್ಮನ್ನು ಗೆಲ್ಲಿಸುವಂತೆ ಕೇಳುತ್ತಿದ್ದಾರೆ.

‘ಬಿಜೆಪಿ ಅಭ್ಯರ್ಥಿ ಈ ಬಾರಿ ಇಲ್ಲಿಯ ಪ್ರಚಾರದ ವೈಖರಿಯನ್ನೇ ಬದಲಿಸಿದ್ದಾರೆ. ಹೀಗಾಗಿ ಉಳಿದ ಅಭ್ಯರ್ಥಿಗಳೂ ಅವರನ್ನು ಅನುಸರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ‘ಇಂತಹದ್ದನ್ನು’ ಕಾಣುತ್ತಿದ್ದೇವೆ’ ಎಂದು ಹಿರಿಯರು ಮುಗುಮ್ಮಾಗಿ ಹೇಳುತ್ತಾರೆ.
*
ಇತರ ಅಭ್ಯರ್ಥಿಗಳು

ಗಣಪತರಾವ್‌ ಕೆ. ಮಾನೆ (ಎಸ್‌ಯುಸಿಐ–ಸಿ), ಶಂಕರ ಜಾಧವ (ಭಾರತೀಯ ಪೀಪಲ್ಸ್‌ ಪಾರ್ಟಿ), ಸುಜಾತಾ ರಾಮಣ್ಣ (ಎಐಎಂಇಪಿ), ಗಿರೀಶ್‌ ಬೈಲಪ್ಪ, ಭರತ್‌ಕುಮಾರ್‌ ಡಿ. ಕುಮಸಿ, ಮಂಜುನಾಥ ಅಣ್ಣಪ್ಪ, ರಮೇಶ ಭೀಮಸಿಂಗ್‌ ಚವ್ಹಾಣ, ವಿಜಯ ಗೋವಿಂದ ಜಾಧವ, ಶಿವಶರಣಪ್ಪ ಮಾರುತಿರಾವ್‌ (ಎಲ್ಲರೂ ಪಕ್ಷೇತರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT