ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ: ಸಚಿವ ಗೋವಿಂದ ಕಾರಜೋಳ

Last Updated 24 ಆಗಸ್ಟ್ 2021, 11:33 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಿ, ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು’ ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.

ಇಲಾಖೆಯ ವ್ಯಾಪ್ತಿಯಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವಯ ಜಲ ನಿಗಮಗಳ ಪ್ರಗತಿ ಪರಿಶೀಲನೆ ಸಭೆ ಮಂಗಳವಾರ ನಡೆಸಿದ ಅವರು, ಮೇಕೆದಾಟು ಯೋಜನೆಯ ಪ್ರಸ್ತುತ ಹಂತ ಹಾಗೂ ಕಾನೂನಾತ್ಮಕ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ, ಮಹಾದಾಯಿ ಕಣಿವೆಯ ಕಳಸಾ ಮತ್ತು ಬಂಡೂರು ನಾಲಾ ತಿರುವು ಯೋಜನೆಗಳ, ನವಲಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನೆಯ ಕಾಮಗಾರಿಗಳ ಪ್ರಸ್ತುತ ಹಂತ ಮತ್ತು ಆರ್ಥಿಕ ಪ್ರಗತಿಯ ವಿವರಗಳನ್ನು ಈ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ನಿಗಮಗಳ ಅಧಿಕಾರಿಗಳಿಂದ ಸಚಿವರು.

‘ಭೂಸ್ವಾಧೀನ ಪ್ರಕರಣಗಳಿಗೆ ಆದ್ಯತೆ ಮೇಲೆ ಭೂಪರಿಹಾರ ನೀಡಲು ನಿಗಮಗಳಡಿ ಸೂಕ್ತ ನಿಧಿ (ಕಾರ್ಪಸ್‌ ಫಂಡ್‌) ಸ್ಥಾಪಿಸುವ ಬಗ್ಗೆ ಪರಿಶೀಲಿಸಬೇಕು. ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತು ಇತರೆ ಸಂಬಂಧಿತ ಅನೇಕ ಅಧಿಕಾರಿ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಸಚಿವರು ಸೂಚಿಸಿದರು.

‘ಏತ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಹಲವು ಯೋಜನೆಗಳಲ್ಲಿ ಜಾಕ್‌ವೆಲ್ ಕಂ ಪಂಪ್‌ಹೌಸ್‌ಗಳ ನಿರ್ಮಾಣ ಪೂರ್ಣಗೊಳಿಸದೆ ಪೈಪ್‌ಲೈನ್ ಅಳವಡಿಕೆಯ ಕಾಮಗಾರಿ ಕೈಗೆತ್ತಿಕೊಂಡು ಬಿಲ್ ಪಾವತಿ ಮಾಡುತ್ತಿರುವ ಕುರಿತು ಚರ್ಚೆ ನಡೆಯಿತು. ಇನ್ನು ಮುಂದೆ ಜಾಕ್‌ವೆಲ್ ಕಂ ಪಂಪ್ ಹೌಸ್‌ನ ಶೇ 50ರಷ್ಟು ಪ್ರಗತಿ ಸಾಧಿಸಿದ ನಂತರವಷ್ಟೇ ಪೈಪ್‌ಲೈನ್ ಕಾಮಗಾರಿ ಆರಂಭಿಸಬೇಕು’ ಎಂದರು.

‘ಸೂಕ್ಷ್ಮ ನೀರಾವರಿ ಯೋಜನೆಗಳ ಬದಲಾಗಿ ಫಲಾನುಭವಿ ರೈತರ, ಸಮೂಹ ರೈತರ ಜಮೀನುಗಳಡಿ ನೀರಿನ ಸಂಗ್ರಹಣ ತೊಟ್ಟಿಗಳನ್ನು ನಿರ್ಮಿಸಿ ನೀರು ಒದಗಿಸಬೇಕು. ಈ ರೀತಿ ಸಂಗ್ರಹಣೆಯಿಂದ ರೈತರು ಪೈಪ್‌ಲೈನ್ ಅಳವಡಿಸಿಕೊಂಡು ನೀರು ಬಳಸಲು ಅವಕಾಶ ಕಲ್ಪಿಸಲು ಅಥವಾ ಫಲಾನುಭವಿ ರೈತರ ಸರ್ವೆ ನಂಬರ್‌ಗಳಿಗೆ ಸಂಪರ್ಕ ಕಲ್ಪಿಸಿ ಹೊಲಗಳಿಗೆ ನೀರು ಒದಗಿಸುವ ವ್ಯವಸ್ಥೆ ಕುರಿತು ಪರಿಶೀಲಿಸಬೇಕು’ ಎಂದೂ ಸೂಚಿಸಿದರು.

ಕೆರೆ ತುಂಬಿಸುವ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳ ಯಶಸ್ಸಿನ ಕುರಿತು ಯೋಜನೆಗಳ ಮೌಲ್ಯಮಾಪನ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈಗಾಗಲೇ ನೀರಾವರಿ ಸೌಲಭ್ಯ ಕಲ್ಪಿಸಿರುವ ಯೋಜನೆಗಳಡಿ ನೀರಾವರಿ ವಂಚಿತ ಪ್ರದೇಶಗಳನ್ನು ಗುರುತಿಸಲು ಮತ್ತು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಸೂಚಿಸಿದರು.

ನಿಗಮಗಳಡಿ ನೀರಾವರಿ ಯೋಜನೆಗಳ ಅನುಷ್ಟಾನದ ಜೊತೆಗೆ ಪಾಲನೆ ಮತ್ತು ಪೋಷಣೆ ಜವಾಬ್ದಾರಿ ಹೊಂದಿದ್ದು, ನಿಗಮಗಳ ವ್ಯಾಪ್ತಿಯ ಅನೇಕ ವಿಭಾಗ ಮತ್ತು ಉಪ ವಿಭಾಗಗಳಡಿ ಸಹಾಯಕ ಎಂಜಿನಿಯರ್, ಕಿರಿಯ ಇಂಜಿನಿಯರ್ ಸೇರಿದಂತೆ ತಾಂತ್ರಿಕ ಸಿಬ್ಬಂದಿಯ ಕೊರತೆಯ ಬಗ್ಗೆಯೂ ಚರ್ಚೆ ನಡೆಯಿತು. ನಿಗಮಗಳ ಹಂತದಲ್ಲಿ ಯೋಜನಾವಾರು ಸೂಪರಿಟೆಂಡಿಂಗ್‌ ಎಂಜಿನಿಯರ್‌ಗಳ ವ್ಯಾಪ್ತಿಯಲ್ಲಿನ ವಿಭಾಗ, ಉಪವಿಭಾಗಗಳಡಿ ಖಾಲಿ ಇರುವ ಹುದ್ದೆಗಳಿಗೆ ತರಬೇತುದಾರ ಎಂಂಜಿನಿಯರ್‌ಗಳ ನೇಮಿಸಿಕೊಳ್ಳಲು ಪ್ರಸ್ತಾವನೆ ಮಂಡಿಸಲು ಸಚಿವರು ಸೂಚಿಸಿದರು.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಅಂಗನವಾಡಿ ಕಟ್ಟಡ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ವಿದ್ಯಾರ್ಥಿ ವಸತಿ ನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದೂ ಕಾರಜೋಳ ಹೇಳಿದರು.

ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಕಾರ್ಯದರ್ಶಿ ಎನ್. ಲಕ್ಷ್ಮಣರಾವ್ ಪೇಶ್ವೆ ಅವರು ಯೋಜನಾ ಕಾಮಗಾರಿಗಳ ಕುರಿತು ವಿಸ್ತೃತವಾಗಿ ವಿವರಿಸಿದರು. ಕೆಎನ್‌ಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಜೈಪ್ರಕಾಶ್, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚಿಣಿ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT