ಯಾರಿಗೇಳೋಣ ನಮ್ ಪ್ರಾಬ್ಲಮ್‌..!

7
ಐತಿಹಾಸಿಕ ತಾಜ್‌ಬಾವಡಿ ಸನಿಹದ ಗೋಡಬೋಳೆಮಾಳಾ ನಿವಾಸಿಗಳ ಕೂಗಿದು...

ಯಾರಿಗೇಳೋಣ ನಮ್ ಪ್ರಾಬ್ಲಮ್‌..!

Published:
Updated:
Deccan Herald

ವಿಜಯಪುರ:  ‘ಬರೋಬ್ಬರಿ ಯಾಡ್ ವರ್ಸ ಹೋಯ್ತು. ನಮ್‌ ಓಣಿ ರಸ್ತೆ ಇಂದಿಗೂ ಪಾದಚಾರಿಗಳ ಓಡಾಟಕ್ಕೂ ಯೋಗ್ಯವಿಲ್ಲ... ಇಲ್ಲಿ ಸಾಕಷ್ಟ್‌ ದವಾಖಾನೆಗಳಿವೆ. ಇಲ್ಲಿಗೆ ಬರೋರು–ಹೋಗೋರು ಹಿಡಿಶಾಪ ಹಾಕ್ಕೊಂಡೆ ಓಡಾಡ್ತ್ವಾರೆ...’

‘ಇದ್ನ ನೋಡಲಾಗದೆ ಇಲ್ಲಿನ ಸಮಸ್ಯೆ ಹೊತ್ತು, ಶಾಸಕರು, ಸ್ಥಳೀಯ ಜನಪ್ರತಿನಿಧಿ, ಮೇಯರ್‌, ಉಪ ಮೇಯರ್, ಪಾಲಿಕೆ ಆಯುಕ್ತ, ಸಂಬಂಧಿಸಿದ ಅಧಿಕಾರಿ ಎಲ್ರಿಗೂ ಮನವಿ ಕೊಟ್ಟಿದ್ದೆ ಆಯ್ತು. ಆದ್ರಾ ರಸ್ತೆ ಮಾತ್ರ ಸುಧಾರಿಸಲಿಲ್ಲ...’

‘ನಮ್‌ ಓಣೀಲೇ ಬಿಜಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಾಸವಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಗಳಿವೆ. ಪ್ರಮುಖ ಕಚೇರಿಗಳಿವೆ. ಇಲ್ಲಿರುವ ಪ್ರಮುಖರ ಆಪ್ತರೇ ವಿಜಯಪುರ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದಿದ್ದಾರೆ. ಇವರ ಮನೆ, ಅಂಗಡಿಗಳಿಗೆ ಹಲ ಅಧಿಕಾರರೂಢರು ನಿತ್ಯ ಬರ್ತಾರೆ. ಇವರೆಲ್ಲರ ಗಮನಕ್ಕೂ ತಂದರೂ ರಸ್ತೆ ಸುಧಾರಿಸಲಿಲ್ಲ ಎಂದ್ಮೇಲೆ; ಯಾರಿಗೇಳೋಣ ನಮ್‌ ಪ್ರಾಬ್ಲಮ್‌ನ ಎನ್ನುವಂಥ ಪರಿಸ್ಥಿತಿ ನಮ್ಮದಾಗಿದೆ...’

‘ಐತಿಹಾಸಿಕ ತಾಜ್‌ಬಾವಡಿಗೆ ಇದೇ ರಸ್ತೇಲಿ ಹೋಗ್ಬೇಕು. ಬಸ್‌ ನಿಲ್ದಾಣ, ಮೀನಾಕ್ಷಿ ಚೌಕ್‌, ಬಬಲೇಶ್ವರ ನಾಕಾ, ಗಾಂಧಿಚೌಕ್‌, ಶಿವಾಜಿಚೌಕ್‌ ಇನ್ನಿತರೆಡೆಯಿಂದ ನಿತ್ಯ ಸಹಸ್ರ, ಸಹಸ್ರ ಸಂಖ್ಯೆಯ ಜನ ಈ ಮಾರ್ಗದಲ್ಲಿ ಬಸ್‌, ಟಂಟಂ, ಕಾರು, ಜೀಪು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾರೆ. ಇಷ್ಟಿದ್ದರೂ ಈ ರಸ್ತೆ ಮಾತ್ರ ದುರಸ್ತಿಗೊಳ್ತಿಲ್ಲ. ನಮ್‌ ಸಮಸ್ಯೆ ತಪ್ಪುತ್ತಿಲ್ಲ...’ ಎಂದು ಸ್ಥಳೀಯ ನಿವಾಸಿಗಳು ಭಾನುವಾರ ‘ಪ್ರಜಾವಾಣಿ’ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ನಗರದ ಹೃದಯ ಭಾಗವಿದು. ಗಣೇಶನ ಹಬ್ಬ ಮನೆ ಬಾಗಿಲಿಗೆ ಬಂದು ನಿಂತಿದೆ. ಹಲ ವರ್ಷಗಳಿಂದ ತಾಜ್‌ಬಾವಡಿಗೆ ಗಣೇಶನನ್ನು ಹಾಕೋದು ವಾಡಿಕೆ. ಹೋದ ವರ್ಸದಿಂದ ಇಲ್ಲಿಯೇ ಕೃತಕ ಹೊಂಡ ನಿರ್ಮಿಸುತ್ತಾರೆ. ಇದಕ್ಕೆ ನಗರದ ಬಹುಪಾಲು ಜನ ಗಣಪನನ್ನು ವಿಸರ್ಜಿಸುತ್ತಾರೆ. ರಸ್ತೆ ಹಿಂದಿಗಿಂತ ತೀರಾ ಹದಗೆಟ್ಟಿದೆ.

ಮೊಳಕಾಲುದ್ದ ಗುಂಡಿ ಬಿದ್ದಿದೆ. ಈ ರಸ್ತೆಯಲ್ಲಿ ಅದ್ಯಾವ ರೀತಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂಬುದೇ ತೋಚದಾಗಿದೆ. ಹತ್ತಾರು ಬಾರಿ ದುರಸ್ತಿಗೆ ಮನವಿ ನೀಡಿದ್ದರೂ ಪ್ರಯೋಜನವಿಲ್ಲ. ನಮ್‌ ಸಮಸ್ಯೆಯನ್ನು ಯಾರ ಬಳಿ ಹೇಳ್ಕೊಬೇಕು ಎಂಬುದೇ ಗೊತ್ತಾಗ್ತಿಲ್ಲ’ ಎಂದು ಈ ರಸ್ತೆ ಬದಿಯೇ ಕ್ಯಾಟರಿಂಗ್‌ ವಹಿವಾಟಿನ ಅಂಗಡಿ ನಡೆಸುತ್ತಿರುವ ಅರವಿಂದ ಉಮರ್ಜಿ ಹೇಳಿದರು.

‘ರಸ್ತೆ ದುರಸ್ತಿಗೆ ಆಗ್ರಹಿಸಿ ಈ ಹಿಂದೆ ಎರಡ್ಮೂರು ಬಾರಿ ಹೋರಾಟ ನಡೆಸಿದೆವು. ಆದ್ರೂ ರಸ್ತೆ ಮಾತ್ರ ಸುಧಾರಣೆಯಾಗಲಿಲ್ಲ. ನಮ್‌ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದೇ ಅದರಿಂದ ಸಿಕ್ಕ ಪ್ರತಿಫಲ. ಇದೀಗಲೂ ಹಾಳಾಗಿರುವ ರಸ್ತೆ ಅಭಿವೃದ್ಧಿ ಪಡಿಸಿ ಎಂದು ಜಿಲ್ಲಾಧಿಕಾರಿಯಿಂದ ಹಿಡಿದು ಪಾಲಿಕೆ ಆಯುಕ್ತ, ಸಂಬಂಧಿಸಿದ ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇವೆ. ಯಾರೊಬ್ಬರ ಸ್ಪಂದನೆಯೂ ಇಲ್ಲವಾಗಿದೆ’ ಎಂದು ಬಿಜೆಪಿ ಗೋ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯಜೋಶಿ ದೂರಿದರು.

‘ಇದೀಗ ಮಳೆಗಾಲ. ಸ್ವಲ್ಪ ಮಳೆ ಬಂದರೇ ಸಾಕು ಮೇಲಿನಿಂದ ಹರಿದು ಬರುವ ನೀರು ಹದಗೆಟ್ಟ ರಸ್ತೆಯ ಗುಂಡಿಗಳಲ್ಲಿ ನಿಲ್ಲುತ್ತದೆ. ನಿತ್ಯ ಓಡಾಟ ನಡೆಸುವವರು ಹೇಗೋ ತಮ್ಮ ಪಾಳಿಯ ಸರ್ಕಸ್‌ ಮಾಡಿಕೊಂಡು ಸಂಚರಿಸುತ್ತಾರೆ.

ಇಲ್ಲಿನ ಆಸ್ಪತ್ರೆಗಳಿಗೆ ಹೊಸದಾಗಿ ಬರುವವರು ಮಾತ್ರ ರಸ್ತೆ ಎಲ್ಲಿದೆ, ಗುಂಡಿ ಎಲ್ಲಿವೆ ಎಂಬುದರ ಅರಿವಿಲ್ಲದೆ ಸಂಚರಿಸಿ ಗುಂಡಿಯೊಳಗೆ ಬಿದ್ದು, ಕೆಸರು ಮೆತ್ತಿಕೊಳ್ಳುವುದು ನಿರಂತರವಾಗಿದೆ. ಬಿದ್ದು ಎದ್ದವರು ನಮ್ಮೆದುರೇ ನಮ್ಮೂರಿಗೂ, ಇಲ್ಲಿನ ಆಡಳಿತಕ್ಕೂ ಹಿಡಿಶಾಪ ಹಾಕ್ಕೊಂಡು ಹೋಗೋದು ಮನಸ್ಸಿಗೆ ಭಾಳ ಕೆಟ್‌ ಅನ್ನಿಸುವಂತೆ ಮಾಡುತ್ತದೆ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !