ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವವಿಜ್ಞಾನಿಗಳ ಮೆದುಳೇ 100 ವಾಟ್ ಬಲ್ಬ್!

ಬಾಹ್ಯಾಕಾಶ ವಿಜ್ಞಾನಿ ಪ್ರೊ.ಕೆ.ಕಸ್ತೂರಿ ರಂಗನ್ ಹೇಳಿಕೆ
Last Updated 25 ಸೆಪ್ಟೆಂಬರ್ 2019, 14:17 IST
ಅಕ್ಷರ ಗಾತ್ರ

ವಿಜಯಪುರ: ‘ಯುವವಿಜ್ಞಾನಿಗಳ ಮೆದುಳು 100 ವಾಟ್ ಬಲ್ಬ್ ಇದ್ದಂತೆ. ಮೆದುಳನ್ನು ಹೊಸ ಅನ್ವೇಷಣೆ, ಸಂಶೋಧನೆ ಮತ್ತು ಚಿಂತನೆಯಲ್ಲಿ ಸಕ್ರಿಯವಾಗಿಸಬೇಕು’ ಎಂದು ಬಾಹ್ಯಾಕಾಶ ವಿಜ್ಞಾನಿ ಪ್ರೊ.ಕೆ.ಕಸ್ತೂರಿ ರಂಗನ್ ಅವರು ಸಂವಾದದಲ್ಲಿ ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದರು.

ಸಿಂದಗಿ ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಸಭಾಂಗಣದಲ್ಲಿ ಸುವರ್ಣ ಮಹೋತ್ಸವ ವರ್ಷಾಚರಣೆ, ದಾನಮ್ಮದೇವಿ ವಸತಿ ನಿಲಯ ಉದ್ಘಾಟನೆ ಹಾಗೂ ‘ಇನ್‌ಸ್ಪೈರ್‌’ ಪ್ರಶಸ್ತಿ ಪುರಸ್ಕೃತ ಯುವವಿಜ್ಞಾನಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೌಂದರ್ಯ ನೀವರಗಿ ಅವರು, ‘ಅನ್ವೇಷಣೆಯಲ್ಲಿ ಎದುರಾಗುವ ದೊಡ್ಡ ಸವಾಲು ಏನು’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಸ್ತೂರಿ ರಂಗನ್, ‘ಪರಿಕಲ್ಪನೆಯನ್ನು ಸಾಕಾರಗೊಳಿಸುವುದೇ ದೊಡ್ಡ ಸವಾಲು’ ಎಂದು ಹೇಳಿ, ‘ನೊಬೆಲ್ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಶಿಷ್ಯನೊಬ್ಬ ವಿಜ್ಞಾನದ ಮಾದರಿ ರೂಪಿಸಿದ್ದ. ಆದರೆ, 100 ವಾಟ್ ಬಲ್ಬ್ ಲಭ್ಯವಾಗದ್ದರಿಂದ ಆ ಪ್ರಯೋಗ ಕಾರ್ಯಾರಂಭ ಮಾಡಲಿಲ್ಲ. ಆಗ ಚಿಂತಿತನಾಗಿದ್ದ ಶಿಷ್ಯನಿಗೆ, ನಿನ್ನ ಮೆದುಳನ್ನೇ 100 ವಾಟ್ ಬಲ್ಬ್ ಆಗಿ ಬೆಳೆಸು ಎಂದು ಹೇಳಿದ್ದರು..’ ಎಂಬ ದೃಷ್ಟಾಂತವನ್ನು ಹೇಳಿದರು.

‘ರಾಕೆಟ್ ಉಡಾವಣೆ ಹೇಗೆ ಮಾಡಲಾಗುತ್ತದೆ’ ಎಂಬ ಪ್ರಶ್ನೆಗೆ, ವೇಗೋತ್ಕರ್ಷವನ್ನು ಹೆಚ್ಚಿಸುತ್ತ, ಹಂತ ಹಂತಗಳಲ್ಲಿ ರಾಕೆಟ್ ಉಡಾವಣೆ ಮಾಡುವ ಬಗೆಯನ್ನು ತಾಂತ್ರಿಕವಾಗಿ ವಿವರಿಸಿದರು.

‘ಅನ್ಯಗ್ರಹಗಳಲ್ಲಿ ಏಲಿಯನ್‌ಗಳಿವೆಯೇ’ ಎಂಬ ಪ್ರಿಯಾಂಕ ಕುಚಬಾಳ ಅವರ ಪ್ರಶ್ನೆಗೆ, ‘ಏಲಿಯನ್‌ಗಳು ಇಲ್ಲ. ಆದರೆ, ಜೀವರಾಶಿ, ಸೂಕ್ಷ್ಮಾಣು ಜೀವಿಗಳು ಇರಬಹುದು. ಈ ಬಗ್ಗೆಯೇ ಈಗ ಅಧ್ಯಯನ ನಡೆದಿದೆ’ ಎಂದರು.

‘ತಂತ್ರಜ್ಞಾನ ಅಭಿವೃದ್ಧಿಯಾಗದ ಕಾಲಘಟ್ಟದಲ್ಲಿ ನೀಲ್‌ ಆರ್ಮಸ್ಟ್ರಾಂಗ್ ಅವರು ಚಂದ್ರನ ಮೇಲೆ ಕಾಲಿಟ್ಟಿದ್ದರು. ಆದರೆ, ಈಚೆಗೆ ಚಂದ್ರಯಾನ ವಿಫಲವಾಯಿತು. ಇದನ್ನು ವೈಫಲ್ಯ ಎನ್ನಬಹುದೇ’ ಎಂಬ ಪ್ರಶ್ನೆಗೆ, ‘ಇವೆರಡೂ ಬೇರೆ ಬೇರೆ ವಿಷಯ. ಅವುಗಳನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಹೀಗಾಗಿ ಅದು ವೈಫಲ್ಯ ಅಲ್ಲ’ ಎಂದು ಸ್ಪಷ್ಟಪಡಿಸಿದರು.

ರಾಕೆಟ್‌ಗಳ ಉಡಾವಣೆಗೆ ಎಂತಹ ಪ್ರದೇಶ ಸೂಕ್ತ, ಚಂದ್ರಯಾನದ ಉಪಯೋಗಗಳು ಏನು, ಉಪಗ್ರಹಗಳ ಉಡಾವಣೆ ಹೇಗೆ ನಡೆಯುತ್ತದೆ ಎಂಬ ಕೌತುಕದ ಪ್ರಶ್ನೆಗಳಿಗೆ ನಗುಮೊಗದಿಂದ, ಶಾಂತಚಿತ್ತರಾಗಿ ಉತ್ತರ ನೀಡಿದರು.

ಸಿಂದಗಿ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು, ಶಾಸಕ ಅರುಣ ಶಹಾಪುರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜೆ.ಎಸ್.ಪೂಜಾರಿ, ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಡಯಟ್ ಪ್ರಾಂಶುಪಾಲರಾದ ಸಾಯಿರಾಬಾನು ಖಾನ್, ಆಡಳಿತಾಧಿಕಾರಿ ಡಾ.ಬಿ.ಜಿ.ಮಠ,ಸದಸ್ಯ ಹ.ಮ.ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT