ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು: ಸಂಘಟನೆಗಳಿಂದ ವಿರೋಧ

7

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು: ಸಂಘಟನೆಗಳಿಂದ ವಿರೋಧ

Published:
Updated:
ಸೊರಬದಲ್ಲಿ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ರಾಜ್ಯ ಸರ್ಕಾರದ ಉದ್ದೇಶಿತ ಯೋಜನೆಯನ್ನು ವಿರೋಧಿಸಿ ಶನಿವಾರ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟಿಸಿದರು.

 ಸೊರಬ: ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಉದ್ದೇಶಿತ ರಾಜ್ಯ ಸರ್ಕಾರದ ಯೋಜನೆಯನ್ನು ವಿರೋಧಿಸಿ ಇಲ್ಲಿನ ಜೆಸಿಐ ಸೊರಬ ವೈಜಯಂತಿ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಯುವ ಹೋರಾಟ ಸಮಿತಿ ಸದಸ್ಯರು ಶನಿವಾರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಬೆಂಗಳೂರಿಗೆ ಕುಡಿಯುವ ನೀರಿನ ಸಲುವಾಗಿ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಪಡೆಯಲು ಯೋಜನೆ ತಯಾರಿಸಲು ತಾಕೀತು ಮಾಡಿದ್ದು ಖಂಡನೀಯ. ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರು ೪೨೬ ಕಿ.ಮೀ ದೂರವಿದೆ ಹಾಗೂ ಲಿಂಗನಮಕ್ಕಿ ಜಲಾಶಯ ಸಮುದ್ರ ಮಟ್ಟದಿಂದ ೧೮೦೦ ಅಡಿ ಎತ್ತರದಲ್ಲಿದ್ದು, ಬೆಂಗಳೂರು ೨೮೦೦ ಅಡಿ ಎತ್ತರದಲ್ಲಿದೆ. ಮುಖ್ಯವಾಗಿ ಲಿಂಗನಮಕ್ಕಿ ಜಲಾಶಯವನ್ನು ನಿರ್ಮಿಸಿರುವುದು ರಾಜ್ಯಕ್ಕೆ ವಿದ್ಯುತ್ ಪೂರೈಸುವುದಕ್ಕಾಗಿಯೇ ಹೊರತು ಇನ್ಯಾವುದಕ್ಕೂ ಅಲ್ಲ. ಈ ದೃಷ್ಟಿಯಿಂದ ಅವೈಜ್ಞಾನಿಕ ಯೋಜನೆ ರೂಪಿಸುವುದನ್ನು ಕೈಬಿಡಬೇಕು.

ಎತ್ತಿನ ಹೊಳೆ ಯೋಜನೆಯಂತೆ ಸಾರ್ವಜನಿಕರ ಹಣದ ಹೊಳೆ ಹರಿಯುತ್ತದೆಯೇ ಹೊರತು ಬೆಂಗಳೂರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿ ಬರಗಾಲ ಕಾಣಿಸುತ್ತಿದೆ ಈ ಯೋಜನೆ ರೂಪಿಸಿದ್ದಲ್ಲಿ ಬೀಕರ ಬರಗಾಲ ಎದುರಾಗಬಹುದು. ಅಪೂರ್ವ ಜೀವವೈವಿದ್ಯ ನಾಶವಾಗುತ್ತದೆ. ಮರಗಳ ಮಾರಣಹೋಮವಾಗುತ್ತದೆ. ಜೋಗದ ವೈಭವಕ್ಕೂ ದಕ್ಕೆ ಬಂದು ಪ್ರವಾಸೋಧ್ಯಮ ಕುಂಠಿತವಾಗಲಿದೆ. ಸಂಕಷ್ಟದಲ್ಲಿ ನೆಲೆಸಿರುವ ಜನರನ್ನು ಗುಳೇ ಎಬ್ಬಿಸಲಿದೆ ಈ ದೃಷ್ಟಿಯಿಂದ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ೩೦೦ ಟಿ.ಎಂ.ಸಿ ನೀರು ಚರಂಡಿಯಲ್ಲಿ ಹರಿದು ಹೋಗುವುದನ್ನು ಸಂಗ್ರಹಿಸಬೇಕು. ಮುಚ್ಚಿದ ನೂರಾರು ಕೆರೆಗಳನ್ನು ತೆರವುಗೊಳಿಸಬೇಕು ಇದರಿಂದ ಅಂತರ್ಜಲ ಹೆಚ್ಚುತ್ತದೆ. ತಂತ್ರಜ್ಞಾನ ಬಳಸಿ ಶೇಖರಿಸಿದ ನೀರನ್ನು ಪುನರ್ಬಳಕೆ ಮಾಡಬೇಕು. ಪಶ್ಚಿಮ ಘಟ್ಟಗಳ ಅರಣ್ಯ ಸಂರಕ್ಷಣೆಯಿಂದ ರಾಜ್ಯಕ್ಕೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂಬುದನ್ನು ಅರಿಯಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ಸಂಘರ್ಷಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಜೆಸಿಐ ಸೊರಬ ವೈಜಯಂತಿ ಅಧ್ಯಕ್ಷ ಪ್ರಶಾಂತ್ ದೊಡ್ಡಮನೆ, ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಗುತ್ತಿ, ಲಯನ್ಸ್ ಅಧ್ಯಕ್ಷೆ ಪ್ರತಿಮಾ, ಯುವ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಭಂಡಾರಿ, ನೆಮ್ಮದಿ ಸುಬ್ಬು, ವಕೀಲ ಡಾಕಪ್ಪ, ಪರಶುರಾಮ, ಪುನೀತ್, ಮಧುಸೂದನ್ ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !