ರಾಜ್ಯ ವಿಭಜನೆ ಹೇಳಿಕೆಗೆ ಕರವೇ ವಿರೋಧ

7
ಕರ್ನಾಟಕದ ಅಖಂಡತೆಗೆ ಭಂಗ ತರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ

ರಾಜ್ಯ ವಿಭಜನೆ ಹೇಳಿಕೆಗೆ ಕರವೇ ವಿರೋಧ

Published:
Updated:
Deccan Herald

ರಾಮನಗರ: ಅಖಂಡ ಕರ್ನಾಟಕ ವಿಭಜನೆಗೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಅಂತಹ ಕೃತ್ಯಕ್ಕೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ
ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ರಾಜ್ಯದ ಅಖಂಡತೆ ಮತ್ತು ಸಾರ್ವಭೌಮತೆ ರಕ್ಷಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದ ಕೆಲವು ಜನಪ್ರತಿನಿಧಿಗಳು ರಾಜ್ಯ ಒಡೆಯುವ ಮಾತುಗಳನ್ನು ಆಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದೊಂದು ನಾಡದ್ರೋಹಿ ಕೃತ್ಯವಾಗಿದೆ. ರಾಜ್ಯ ವಿಭಜನೆಗೆ ಕುಮ್ಮಕ್ಕು ನೀಡುತ್ತಿರುವವರ ಶಾಸಕತ್ವ ಅನರ್ಹಗೊಳಿಸಬೇಕು. ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು. ಅಂತೆಯೇ ಬಂದ್ ಕರೆ ಕೊಟ್ಟವರ ಮೇಲೂ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಪಕ್ಷ, ಜಾತಿ ವಿಚಾರವಾಗಿ ರಾಜಕಾರಣ ಮಾಡಿದ ಕಾರಣಕ್ಕೆ ಹಿನ್ನಡೆ ಅನುಭವಿಸಿದ ಪರಿಣಾಮ ಅಧಿಕಾರದಿಂದ ವಂಚಿತಗೊಂಡಿರುವ ತಂಡವೇ ಇದೀಗ ವಿಭಜನೆ ರಾಜಕಾರಣಕ್ಕೆ ಕೈ ಹಾಕಿದೆ. ಉತ್ತರ ಕರ್ನಾಟಕಕ್ಕೆ ಇದುವರೆಗೆ ಯಾರು ಅನ್ಯಾಯ ಮಾಡಿದ್ದಾರೋ ಅವರೇ ಅನ್ಯಾಯವಾಗಿದೆ ಎಂದು ದೂರುತ್ತಿರುವುದು ಕುತಂತ್ರ ರಾಜಕಾರಣಕ್ಕೆ ಸ್ಪಷ್ಟ ನಿದರ್ಶನವಾಗಿದೆ’ ಎಂದು ಟೀಕಿಸಿದರು.

‘ಪ್ರತ್ಯೇಕತಾವಾದಿಗಳ ಕೂಗಿಗೆ ಬೆಲೆಕೊಟ್ಟು ರಾಜ್ಯ ವಿಭಜಿಸಿದರೆ ಮುಂದೊಂದು ದಿನ ರಾಜ್ಯ ಹಲವಾರು ಭಾಗಗಳಾಗಿ ಛಿದ್ರಗೊಳ್ಳಲಿದೆ.
ಹಾಗಾಗಿ ನಾಡಿನ ಅಖಂಡತೆ ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಅಭಿವೃದ್ಧಿ ಮಾಡಿ: ‘ಉತ್ತರ ಕರ್ನಾಟಕ ಭಾಗದ ರಸ್ತೆಗಳ ಅಭಿವೃದ್ಧಿಯಾಗಬೇಕು. ಅತ್ಯಾಧುನಿಕ ಆಸ್ಪತ್ರೆಗಳು ಆರಂಭಗೊಳ್ಳಬೇಕು. ಯುವಜನರಿಗೆ ಉದ್ಯೋಗ ಕಲ್ಪಿಸಿಕೊಡಬೇಕು. ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆ, ಸಹಾಯಧನ, ತಾಂತ್ರಿಕಜ್ಞಾನ, ಯಾಂತ್ರಿಕ ಸಲಕರಣೆ ನೀಡುವ ಜತೆಗೆ ನೀರಾವರಿ ಯೋಜನೆಗಳ ಅನುಷ್ಠಾನ ಮಾಡಬೇಕು’ ಎಂದು ಕೋರಿದರು.

‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ರಾಜಧಾನಿಯಲ್ಲಿನ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಿ ಆಡಳಿತ ವಿಕೇಂದ್ರೀಕರಣ ಮಾಡಬೇಕು. ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್‌ ಬೆಟ್ಟೇಗೌಡ, ಕಾರ್ಯಾಧ್ಯಕ್ಷರಾದ ಸತ್ಯನಾರಾಯಣ, ಚಂದ್ರಶೇಖರ್, ಪದಾಧಿಕಾರಿಗಳಾದ ಅಭಿಜಿತ್ ಗೌಡ, ರೇಣುಕಾಪ್ರಸಾದ್, ಪ್ರಶಾಂತ್, ಮಧು ದೊಡ್ಡಗಂಗವಾಡಿ, ಅಶೋಕ್, ರಾಜು, ಬಾಬಾಜನ್‌, ಕಾಂತರಾಜ, ಶಿವಣ್ಣ, ಪ್ರೇಮ್‌ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !