ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೆಯಿಂದ ಸಹಿ ನಿರಾಕರಣೆ: ಪ್ರತಿಭಟನೆ

Last Updated 26 ಜೂನ್ 2019, 18:06 IST
ಅಕ್ಷರ ಗಾತ್ರ

ಹಲಗೂರು: ಸಭಾ ನಡಾವಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಹಿ ಹಾಕಲು ನಿರಾಕರಿಸಿದ್ದಕ್ಕೆ ಬೇಸತ್ತ ಗ್ರಾಮಸ್ಥರು, ಯತ್ತಂಬಾಡಿ ಗ್ರಾಮ ಪಂಚಾಯಿತಿಯ ಬಾಗಿಲು ಮುಚ್ಚಿ ಪ್ರತಿಭಟಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು. ಈ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಮನೆ ಮಂಜೂರಾತಿ, ಅಂತರವಳ್ಳಿಯ ನೀರುಗಂಟಿ ಶಿವಲಿಂಗಯ್ಯ ನಿಧನ ಹೊಂದಿದ್ದು, ಉಪದಾನ ನೀಡುವ ವಿಚಾರಗಳನ್ನು ಚರ್ಚೆ ಮಾಡಲಾಯಿತು. ಚರ್ಚೆಯ ವಿಷಯಕ್ಕೆ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಒಪ್ಪಿದರು. ನಂತರ ಸಭಾ ನಡಾವಳಿಗೆ ಅಧ್ಯಕ್ಷರು ಸಹಿ ಹಾಕಲು ಹಿಂದೇಟು ಹಾಕಿದರು.

ಅಧ್ಯಕ್ಷೆಯ ನಡವಳಿಕೆಗೆ ಕುಪಿತಗೊಂಡ ಸದಸ್ಯರು ಸಭೆಯಲ್ಲಿ ಹಾಜರಾಗಿದ್ದು, ಅಧ್ಯಕ್ಷತೆ ವಹಿಸಿಕೊಂಡ ನೀವು ಸಹ ಚರ್ಚೆಗೆ ಒಪ್ಪಿರುವಿರಿ. ಸಹಿ ಮಾಡಲೇಬೇಕು ಎಂದು ಪಟ್ಟು ಹಿಡಿದರು. ರತ್ನಮ್ಮ ನಾಳೆ ಸಹಿ ಮಾಡುವುದಾಗಿ ತಿಳಿಸಿದರು. ಇದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಶಸ್ವಿನಿ ಸಭೆ ನಡೆದಿದೆ. ಸಹಿ ಹಾಕಬೇಕು. ನಾಳೆ ಸಹಿ ಮಾಡಿದರೆ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿದರೂ; ಒಪ್ಪದ ಅಧ್ಯಕ್ಷೆ ಸಭೆಯಿಂದ ಹೊರ ನಡೆದರು.

ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಸರ್ವ ಸದಸ್ಯರ ಸಮ್ಮುಖದಲ್ಲಿ ಸರ್ವಾನುಮತದಿಂದ ನಡಾವಳಿ ಮಾಡಲಾಗಿದೆ. ಆದರೆ ಈ ಹಿಂದಿನ ಹಳೆಯ ಕೆಲಸಗಳಿಗೆ ಚೆಕ್ ನೀಡಿ ಎಂದು ಅಧ್ಯಕ್ಷರು ಕೇಳುತ್ತಿದ್ದಾರೆ. ಆದರೆ ಪ್ರಕರಣ ಹೈಕೋರ್ಟ್‌ನಲ್ಲಿ ಇರುವುದರಿಂದ ಯಾವುದೇ ರೀತಿಯ ಹಣಕಾಸಿನ ತೀರ್ಮಾನ ಕೈಗೊಳ್ಳಲು ಅವಕಾಶಗಳಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಶಸ್ವಿನಿ ಸಭೆ ಮುಗಿಸಿದರು.

‘ಅಧ್ಯಕ್ಷರು ಈ ಹಿಂದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಪಂಚಾಯಿತಿಗೆ ಹಲವು ಸಾಮಗ್ರಿಗಳನ್ನು ಖರೀದಿ ಮಾಡಿದ್ದರು. ಅದಕ್ಕೆ ಇತರೆ ಸದಸ್ಯರ ಸಹಮತ ಇಲ್ಲದಿದ್ದುದರಿಂದ ಚೆಕ್‌ಗೆ ಸಹಿ ಹಾಕಿರಲಿಲ್ಲ. ನಂತರದ ದಿನಗಳಲ್ಲಿ ಅಧ್ಯಕ್ಷರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.

ಆದರೆ ಅಧ್ಯಕ್ಷರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಲು ಪಂಚಾಯಿತಿಯಲ್ಲಿ ಅವಕಾಶಗಳಿಲ್ಲ. ಮುಂದಿನ ದಿನದ ಸಭೆಗಳಲ್ಲಿ ಸಹಿ ಮಾಡುತ್ತೇವೆ. ದಯಮಾಡಿ ಸಹಿ ಮಾಡಿ. ಅಭಿವೃದ್ದಿಗೆ ಶ್ರಮಿಸೋಣ ಎಂದರೂ, ಅಧ್ಯಕ್ಷರು ಸಹಕಾರ ನೀಡುತ್ತಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT