ಬುಧವಾರ, ನವೆಂಬರ್ 13, 2019
17 °C

ವೇತನ, ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಆಗ್ರಹ

Published:
Updated:
Prajavani

ಶಿವಮೊಗ್ಗ: ಶೀಘ್ರವೇ ವೇತನ ಬಿಡುಗಡೆ ಮಾಡಬೇಕು ಮತ್ತು ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಬುಧವಾರ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಳೆದ 17 ವರ್ಷಗಳಿಂದ ನೌಕರರಿಗೆ ಸೂಕ್ತ ವೇತನ, ಪಿಂಚಣಿ ಹಾಗೂ ಇತರ ಯಾವುದೇ ಸೌಲಭ್ಯಗಳನ್ನು ನೀಡದೆ ಮೋಸ ಮಾಡಲಾಗಿದೆ. ಹಲವು ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಮಾನವ ಸಂಪನ್ಮೂಲ ಇಲಾಖೆ ಅಡಿಯಲ್ಲಿ ಅಕ್ಷರ ದಾಸೋಹ ಯೋಜನೆ ನಡೆಯುತ್ತಿದ್ದು, ಯೋಜನೆಯಡಿ ಕೆಲಸ ಮಾಡುವ ಅಕ್ಷರ ದಾಸೋಹ ನೌಕರರನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು.

ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ದುಡಿಯುವ ಮಹಿಳೆಯರಿಗೆ ₹ 2,600ರಿಂದ ₹ 2,700  ವೇತನ ನೀಡಲಾಗುತ್ತಿದೆ. ಇದನ್ನು ಬಿಟ್ಟು ಬೇರೆ ಯಾವುದೇ ಸೌಲಭ್ಯವಿಲ್ಲ. ಬಡ ಮಹಿಳೆಯರು ನಿವೃತ್ತಿಯ ಅಂಚಿನಲ್ಲಿದ್ದಾರೆ. ರಾಜ್ಯದಲ್ಲಿ 1,18,000 ಮಹಿಳೆಯರು ಯೋಜನೆಯಡಿ ದುಡಿಯುತ್ತಿದ್ದಾರೆ. ನೌಕರರ ಭವಿಷ್ಯನಿಧಿ ಪಿಂಚಣಿಗಾಗಿ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ನೌಕರರ ವೇತನದಲ್ಲಿ ₹ 100 ಸರ್ಕಾರದಿಂದ ₹ 150 ಸೇರಿಸಿ ಎಲ್‌ಐಸಿ ಮೂಲಕ ಪಿಂಚಣಿ ಯೋಜನೆ ರೂಪಿಸಲು ಒಪ್ಪಿಗೆ ನೀಡಲಾಗಿತ್ತು. ಆದರೆ, ಈವರೆಗೂ ಕ್ರಮಕೈಗೊಂಡಿಲ್ಲ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೂಡ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರೂ ಸಭೆಯನ್ನು ಕರೆದಿಲ್ಲ ಎಂದು ದೂರಿದರು.

ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ್ ಪಿಂಚಣಿ ಯೋಜನೆಗೆ ಶಾಲಾ ಬಿಸಿಊಟ ನೌಕರರನ್ನು ಒಳಪಡಿಸುವ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಿರುವುದು ಆಘಾತ ತಂದಿದೆ. ಈ ಯೋಜನೆ ತಾತ್ಕಾಲಿಕ. ಶಿಕ್ಷಣ ಇಲಾಖೆಯಡಿ ದುಡಿಯುತ್ತಿರುವ ಸಿಬ್ಬಂದಿಗೆ ವಿಶೇಷ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಅಧ್ಯಕ್ಷ ಎಸ್.ಬಿ. ಶಿವಶಂಕರ್, ಆರ್. ಹನುಮಮ್ಮ, ಬಿ.ಜಿ. ಅಕ್ಕಮ್ಮ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)