ಭಾನುವಾರ, ಡಿಸೆಂಬರ್ 8, 2019
21 °C

ಶತಮಾನದ ಗ್ರಾಮ ಒಕ್ಕಲೆಬ್ಬಿಸಲು ಹುನ್ನಾರ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹಾರನಹಳ್ಳಿ ಹೋಬಳಿ ವೀರಣ್ಣನ ಬೆನವಳ್ಳಿ, ನಾಗರಬಾವಿಯ ಗ್ರಾಮಸ್ಥರು ಅಲ್ಲಿಂದ ತಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸುಮಾರು 150 ವರ್ಷಗಳಿಂದ ನಾಗರಬಾವಿ ಸರ್ವೇ ನಂಬರ್ 2/5ರಲ್ಲಿ 15 ಕುಟುಂಬಗಳು ಅಲ್ಲಿ ನೆಲೆಸಿವೆ. ಅಲ್ಲಿನ ಜಮೀನು ಮೋಸದಿಂದ ಮಾರಾಟ ಮಾಡಲಾಗಿದೆ. ಶತಮಾನದಿಂದಲೂ ಸರ್ಕಾರ, ಗ್ರಾಮ ಪಂಚಾಯಿತಿ ನೀರು, ವಿದ್ಯುತ್, ರಸ್ತೆ, ಒಳಚರಂಡಿ ವ್ಯವಸ್ಥೆ ಮಾಡಿಕೊಟ್ಟಿದೆ. ಪ್ರತಿ ವರ್ಷವೂ ಕಂದಾಯ ಪಾವತಿ ದಾಖಲೆಗಳಿವೆ. ನೀರು, ಜಮೀನು, ಕಂದಾಯ, ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದೇವೆ. ಪ್ರಧಾನಮಂತ್ರಿ ಇಂದಿರಾ ಆವಾಸ್ ಯೋಜನೆಯಲ್ಲಿ ಮನೆ ನೀಡಲಾಗಿದೆ. ಈಗ ಎಲ್ಲವನ್ನೂ ತೊರೆಯುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ದಾಖಲಾಲೆಗಳು ಇದೇ ವಿಳಾಸದಲ್ಲಿವೆ. ಮನೆಗಳ ಸುತ್ತಮುತ್ತ ತೆಂಗು, ಮಾವು, ಹಲಸು ಬೆಳೆಸಿದ್ದೇವೆ. ಮಸೀದಿ ನಿರ್ಮಾಣ ಮಾಡಿದ್ದೇವೆ ಎಂದರು.

ಸ್ವತ್ತಿನ ನಕ್ಷೆಯಲ್ಲಿ 1.26 ಗುಂಟೆ ನಾಗರಬಾವಿಯ ಜನ ವಾಸವಾಗಿದ್ದಾರೆ ಎಂದು ನಮೂದು ಮಾಡಲಾಗಿದೆ. ಆದರೂ, ಈ ಜಾಗ ತಮ್ಮದು ಎಂದು ಖಾಸಗಿ ವ್ಯಕ್ತಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಶತಮಾನದಿಂದ ನೆಲೆಸಿರುವ ನಮಗೆ ಬೇರೆ ಜಾಗವಿಲ್ಲ. ಈ ಜಮೀನು ಪುನರ್‌ ಸರ್ವೆ ಮಾಡುವ ಮೂಲಕ ಸ್ವಾಧೀನ ದೃಢೀಕರಿಸಬೇಕು ಎಂದು ಒತ್ತಾಯಿಸಿದರು. 

ಗ್ರಾಮದ ಮುಖಂಡರಾದ ಜಾವೇದ್, ಅಬ್ದುಲ್ ಹುಸೇನ್, ಭಾಷಾ, ಶಮೀಮ್ ಬಾನು, ನಾಜಿಮಾ, ರಿಯಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)