ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ವಾರ್ಡ್‌ಗಳು ಅತೀ ಸೂಕ್ಷ್ಮ ಪ್ರದೇಶ

ಮಲೇರಿಯಾ ನಿಯಂತ್ರಣ ಮಾಸಾಚರಣೆ
Last Updated 3 ಜೂನ್ 2018, 9:36 IST
ಅಕ್ಷರ ಗಾತ್ರ

ಮಂಗಳೂರು: ಮಲೇರಿಯಾ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ನಗರದಲ್ಲಿ 18 ವಾರ್ಡ್‌ಗಳನ್ನು ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಮಲೇರಿಯಾ ಪ್ರಕರಣಗಳು ದಾಖಲಾಗುತ್ತಿವೆ. ಸಮೀಕ್ಷೆ ಪ್ರಕಾರ ಪಾಲಿಕೆಯ 18 ವಾರ್ಡ್‍ಗಳನ್ನು ಮಲೇರಿಯಾ ಅತೀ ಸೂಕ್ಷ್ಮ ವಾರ್ಡ್‍ಗಳಾಗಿ ಗುರುತಿಸಲಾಗಿದೆ. ದೇರೆಬೈಲ್ ಉತ್ತರ, ದೇರೆಬೈಲ್ ಪೂರ್ವ, ದೇರೆಬೈಲ್ ಪಶ್ಚಿಮ, ದೇರೆಬೈಲ್ ದಕ್ಷಿಣ, ದೇರೆಬೈಲ್ ನೈರುತ್ಯ, ಬಿಜೈ, ಮಣ್ಣಗುಡ್ಡ, ಕೊಡಿಯಾಲ್‍ಬೈಲ್, ಕದ್ರಿ ದಕ್ಷಿಣ, ಕೇಂದ್ರ ಮಾರುಕಟ್ಟೆ, ಬಂದರು, ಕೋರ್ಟ್, ಪೋರ್ಟ್‌, ಕಂಟೋನ್ಮೆಂಟ್, ಮಿಲಾಗ್ರಿಸ್, ಹೊಯ್ಗೆ ಬಜಾರ್, ಬೆಂಗ್ರೆ, ಅತ್ತಾವರ ಪ್ರದೇಶಗಳಲ್ಲಿ ತೀವ್ರ ನಿಗಾದೊಂದಿಗೆ ಮುನ್ನೆಚ್ಚರಿಕಾ ಕ್ರಮಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಮಳೆಗಾಲದಲ್ಲಿ ಸಾರ್ವಜನಿಕರು ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಜ್ವರಕ್ಕೆ ಸಂಬಂಧಿಸಿ ಯಾವುದೇ ರೀತಿಯ ಅನಾರೋಗ್ಯ ಲಕ್ಷಣಗಳು ಕಂಡು ಬಂದಾಗ ತಕ್ಷಣ ರಕ್ತ ತಪಾಸಣೆ ಮಾಡಿಕೊಳ್ಳಬೇಕು. ನಗರ ಪ್ರದೇಶದಲ್ಲಿ ದಿನದ 24 ಗಂಟೆಯೂ ಜ್ವರ ಪರೀಕ್ಷೆ, ತೀವ್ರ ಚಿಕಿತ್ಸೆ ನೀಡಲು ಸೇವೆ ಲಭ್ಯವಿದೆ. ಇದಕ್ಕಾಗಿ 9448556872 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದರು.

ಕಟ್ಟಡ ಕಾಮಗಾರಿ ಪ್ರದೇಶಗಳಲ್ಲಿ ಜ್ವರ ಸಮೀಕ್ಷೆ, ತೀವ್ರ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯಿಂದ ಸ್ವಯಂ ಸೇವಕರ ತಂಡವನ್ನು ರಚಿಸಲಾಗಿದೆ. 15 ದಿನಗಳಿಗೊಮ್ಮೆ ನಿರ್ಮಾಣ ಹಂತದ ಕಟ್ಟಡಗಳಿಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣ ಮತ್ತು ನಾಶಪಡಿಸುವಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಸೊಳ್ಳೆ ಪರದೆ ಬಳಸಿದರೆ ಉತ್ತಮ: ಈಗಾಗಲೇ 10,500 ಸೊಳ್ಳೆ ಪರದೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿತರಿಸಲಾಗಿದೆ. 64,500 ಸೊಳ್ಳೆ ಪರದೆಗಳನ್ನು ನಗರ ಪ್ರದೇಶದಲ್ಲಿ ವಿತರಿಸಲಾಗುವುದು. ಬಿಪಿಎಲ್ ಹೊರತುಪಡಿಸಿದ ಕುಟುಂಬಗಳಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಸೊಳ್ಳೆ ಪರದೆ ಹಾಗೂ ಕಿಟಕಿ ಬಾಗಿಲುಗಳ ಜಾಲರಿಗಳಿಗೆ ಕೀಟ ನಾಶಕ ಲೇಪಿಸುವ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಅರುಣ್ ಕುಮಾರ್ ತಿಳಿಸಿದರು. ಡಾ. ರಾಜೇಶ್‌ ಉಪಸ್ಥಿತರಿದ್ದರು.

‘ಮುನ್ನೆಚ್ಚರಿಕೆ ವಹಿಸದ ಕಟ್ಟಡಗಳ ಪರವಾನಗಿ ರದ್ದು’

ನಿರ್ಮಾಣ ಕಾಮಗಾರಿ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಸೂಚನೆ ನೀಡಿದೆ. ಈವರೆಗೆ ಈಗಾಗಲೇ 12 ಕಟ್ಟಡಗಳ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾದಲ್ಲಿ ಪರವಾನಗಿಯನ್ನೇ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.  ಈ ನಿಟ್ಟಿನಲ್ಲಿ  ತಪಾಸಣೆ ಕಾರ್ಯವೂ ನಡೆಯುತ್ತಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಿ, ತಮ್ಮ ಮನೆಗಳ ಸುತ್ತಮುತ್ತವೂ ಯಾವುದೇ ರೀತಿಯಲ್ಲಿ ನೀರು ನಿಲ್ಲದಂತೆ ಗಮನ ಹರಿಸಬೇಕು ಎಂದು ಡಾ. ರಾಮಕೃಷ್ಣ ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT